ADVERTISEMENT

ಸಮ್ಮೇಳನದ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 6:13 IST
Last Updated 22 ಡಿಸೆಂಬರ್ 2014, 6:13 IST

ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಫೆಬ್ರುವರಿ 1ರಿಂದ 3ವರೆಗೆ ನಡೆಯುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಭಾನು­ವಾರ ಬಿಡುಗಡೆ ಮಾಡಲಾಯಿತು.

ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಏರ್ಪ-ಡಿಸಿದ್ದ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಲಾಂಛನ ಅನಾವರಣಗೊಳಿಸಿದರು.

ಹಾಸನವು ಕೃಷಿ, ಬಾಹ್ಯಾಕಾಶ, ಶ್ರದ್ಧಾ ಕೇಂದ್ರ, ಪರಿಸರ, ಶಿಲ್ಪಕಲೆ... ಹೀಗೆ ಹಲವು ರೀತಿಯಿಂದ ಪ್ರಮುಖ ಜಿಲ್ಲೆಯಾಗಿರುವುದರಿಂದ ಲಾಂಛನ ಈ ಎಲ್ಲ ವಿಶೇಷತೆಗಳನ್ನು ಪ್ರತಿನಿಧಿಸುತ­್ತಿರಬೇಕು ಎಂದು ಸಮ್ಮೇಳನ ಕುರಿತ ಮೊದಲ ಸಿದ್ಧತಾ ಸಭೆಯಲ್ಲಿ ಸಾಹಿತಿಗಳು, ಚಿಂತಕರು ಸಲಹೆ ನೀಡಿದ್ದರು. ಭಾನು-ವಾರ ಬಿಡುಗಡೆ­ಗೊಂಡಿರುವ ಲಾಂಛನದಲ್ಲಿ ಸಾಧ್ಯವಾ­ದಷ್ಟು ಮಟ್ಟಿಗೆ ಈ ಎಲ್ಲ ವಿಚಾರಗಳಿಗೂ ಗಮನ ಕೊಡಲಾಗಿದೆ.

ಲಾಂಛನದ ತುತ್ತ ತುದಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಾವುಟ, ಕೆಳಗೆ ಭುವನೇಶ್ವರಿ ಚಿತ್ರ, ಕನ್ನಡ ಬಾವುಟ, ಹೊಯ್ಸಳರ ಲಾಂಛನ, ಪಂಪನ ಧ್ಯೇಯವಾಕ್ಯ (ಮನುಷ್ಯಜಾತಿ ತಾನೊಂದೆ ವಲಂ), ಬಾಹುಬಲಿ ಪ್ರತಿಮೆ, ಹಲ್ಮಿಡಿ ಶಾಸನ, ಕಸಾಪ ಶತಮಾನೋತ್ಸವದ ಲಾಂಛನ, ಬಾಹ್ಯಾಕಾಶ ನಿಯಂತ್ರಣ ಕೇಂದ್ರ (ಎಂಸಿಎಫ್‌), ಸಕಲೇಶಪುರದ ಮುಂಜ್ರಾಬಾದ್‌ ಕೋಟೆ, ಕಾಫಿ, ತೆಂಗು, ಭತ್ತ, ಆಲೂಗೆಡ್ಡೆ, ಹೇಮಾವತಿ ಜಲಾಶಯ ಹೀಗೆ ಎಲ್ಲ ಚಿತ್ರಗಳನ್ನೂ ಲಾಂಛನ-ದಲ್ಲಿ ಪ್ರಾತಿನಿಧಿಕವಾಗಿ ಬಳಸಿಕೊಳ್ಳಲಾಗಿದೆ.

ಶ್ರವಣಬೆಳಗೊಳದ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಎಚ್‌.ಎಸ್‌. ಪ್ರಕಾಶ್‌, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌, ಕಸಾಪ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ.ಆರ್‌.ಕೆ. ನಲ್ಲೂರು ಪ್ರಸಾದ್‌, ರಾಜ್ಯಸಭೆ ಮಾಜಿ ಸದಸ್ಯ ಎಚ್‌.ಕೆ. ಜವರೇಗೌಡ, ರಾಜ್ಯ ಮೂಲಸೌಕರ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ವಿ. ರಾಜಪ್ಪ, ಬಿಜೆಪಿ ಮುಖಂಡ ರೇಣುಕುಮಾರ್‌, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್‌. ಜನಾರ್ದನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.