ADVERTISEMENT

ಸಮ್ಮೇಳನ ಪ್ರತಿನಿಧಿಗಳಿಗೆ ಹೊಸ ಮನೆ

ಗಣೇಶ ಚಂದನಶಿವ
Published 5 ಫೆಬ್ರುವರಿ 2013, 19:59 IST
Last Updated 5 ಫೆಬ್ರುವರಿ 2013, 19:59 IST
ವಿಜಾಪುರದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಹೊಸ ಮನೆಗಳು. ಸಾಹಿತ್ಯ ಸಮ್ಮೇಳನಕ್ಕೆ ಬರುವ 2000 ಪ್ರತಿನಿಧಿಗಳಿಗೆ ಇಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ 	(ಚಿ್ರೆ: ಸಂಜೀವ ಅಕ್ಕಿ)
ವಿಜಾಪುರದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಹೊಸ ಮನೆಗಳು. ಸಾಹಿತ್ಯ ಸಮ್ಮೇಳನಕ್ಕೆ ಬರುವ 2000 ಪ್ರತಿನಿಧಿಗಳಿಗೆ ಇಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ (ಚಿ್ರೆ: ಸಂಜೀವ ಅಕ್ಕಿ)   

ವಿಜಾಪುರ: ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ಹೊಸ ಮನೆ ಪ್ರವೇಶಿಸಿ, ವಾಸ್ತವ್ಯ ಹೂಡುವ `ಭಾಗ್ಯ' ದೊರೆಯಲಿದೆ!

`ಹೊಸ ಮನೆ ಕಟ್ಟಿಸಬೇಕು. ಅದರಲ್ಲೊಂದಿಷ್ಟು ದಿನ ಹಾಯಾಗಿ ವಾಸ ಮಾಡಬೇಕು' ಎಂದು ಕನಸು ಕಾಣುತ್ತಿರುವವರು, ಬೆಲೆ ಕೈಗೆಟುಕದಷ್ಟು ಗಗನಕ್ಕೇರಿದ್ದು, ಹೊಸ ಮನೆ ನಿರ್ಮಾಣ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿರುವವರಿಗೆ ಈ `ಗೃಹ ಪ್ರವೇಶ' ಅವಕಾಶ ತಾನಾಗಿಯೇ ಒಲಿದು ಬಂದಿದೆ!

ವಿಜಾಪುರದಲ್ಲಿ ನಡೆಯಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ್ಙ  250 ಶುಲ್ಕ ಪಾವತಿಸಿ 8,000 ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಪೈಕಿ 2,000 ಪ್ರತಿನಿಧಿಗಳಿಗೆ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಹೊಸ ಮನೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

`ಇಲ್ಲಿಯ ಮಹಾಲಬಾಗಾಯತ್ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ 200 ಹೊಸ ಮನೆಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ 159 ಮನೆಗಳು ಗೃಹ ಪ್ರವೇಶಕ್ಕೆ ಸಿದ್ಧವಾಗಿವೆ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಮನೆಗಳ ಹಂಚಿಕೆ ಪ್ರಕ್ರಿಯೆಯನ್ನು ಮುಂದೂಡಿ ಸಮ್ಮೇಳನದ ಪ್ರತಿನಿಧಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ' ಎನ್ನುತ್ತಾರೆ ಸಮ್ಮೇಳನದ ವಸತಿ ಸಮಿತಿ ಅಧ್ಯಕ್ಷ, ಉಪ ವಿಭಾಗಾಧಿಕಾರಿ ಡಾ.ಬೂದೆಪ್ಪ.

`ಈ ಹೊಸ ಮನೆಗಳಲ್ಲಿ ವಾಸ್ತವ್ಯ ಮಾಡಲಿರುವ ಪ್ರತಿನಿಧಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಬಾಟಲಿ ನೀರು, ಸೊಳ್ಳೆ ಬತ್ತಿ, ಸ್ನಾನಕ್ಕೆ ಸಾಬೂನು, ಟೂತ್ ಪೇಸ್ಟ್, ನಿತ್ಯ ಬೆಳಿಗ್ಗೆ ಚಹಾ ವ್ಯವಸ್ಥೆಯನ್ನು ಈ ಮನೆಗಳ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿರುವ ಇಬ್ಬರು ಗುತ್ತಿಗೆದಾರರ ಸಹಯೋಗದಲ್ಲಿ ಒದಗಿಸುತ್ತೇವೆ' ಎಂಬುದು ಕರ್ನಾಟಕ ಗೃಹ ಮಂಡಳಿಯ ವಿಜಾಪುರ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ವಿವರಣೆ.

`ಹೊಸ ಬಡಾವಣೆ-ಹೊಸ ಮನೆ ಇದ್ದರೂ ನೀರಿನ ಕೊರತೆಯಾಗದು. 15 ಲಕ್ಷ ಲೀಟರ್ ನೀರು ಸಂಗ್ರಹಿಸಲಾಗಿದೆ. ಇಲ್ಲಿ ವಾಸ್ತವ್ಯ ಹೂಡುವವರಿಗೆ ಐದು ಬಸ್ ವ್ಯವಸ್ಥೆ, ರಾತ್ರಿ ಗಸ್ತಿಗೆ ಆರು ಮಂದಿ ಪೊಲೀಸರನ್ನು ನಿಯೋಜಿಸುವಂತೆ ಕೋರಿದ್ದೇವೆ' ಎನ್ನುತ್ತಾರೆ ಅವರು.

12 ಸಾವಿರ ಜನರಿಗೆ ವಸತಿ ಸೌಲಭ್ಯ: `ಆಹ್ವಾನಿತರು, ಗಣ್ಯರು, ಕಸಾಪ ಪದಾಧಿಕಾರಿಗಳು, ಪ್ರತಿನಿಧಿಗಳು ಸೇರಿದಂತೆ ಒಟ್ಟಾರೆ 12 ಸಾವಿರ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ನಗರದ ಎಲ್ಲ ವಸತಿ ನಿಲಯ, ಸರ್ಕಾರಿ-ಖಾಸಗಿ ಅತಿಥಿ ಗೃಹ, ಶೌಚಾಲಯ ಇರುವ ಶಾಲೆಗಳು, ಕಲ್ಯಾಣ ಮಂಟಪಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಬೆಳಗಾವಿ, ಸೋಲಾಪುರ ಮತ್ತಿತರೆಡೆಯಿಂದ ಗಾದಿ, ಜಮಖಾನೆ ತರಿಸುತ್ತಿದ್ದೇವೆ' ಎನ್ನುತ್ತಾರೆ ಡಾ.ಬೂದೆಪ್ಪ.

ಮಾಹಿತಿ ಕೇಂದ್ರ: ವಸತಿ ವ್ಯವಸ್ಥೆ ಬಗ್ಗೆ ಎಂಟು ಮಾಹಿತಿ ಕೇಂದ್ರ ಆರಂಭಿಸಲಾಗುವುದು. ಪ್ರತಿ ವಸತಿ ಕೇಂದ್ರಕ್ಕೆ ಒಬ್ಬ ಸಂಪರ್ಕ ಅಧಿಕಾರಿ ನೇಮಿಸಲಾಗುವುದು. ವೈದ್ಯಕೀಯ ಸೇವೆಯನ್ನೂ ಒದಗಿಸಲಾಗುವುದು ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.