ಮೈಸೂರು: ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಸಿಗಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆಯೆಂದು ರಾಜ್ಯ ಸರ್ಕಾರ ಕೈಚೆಲ್ಲಬಾರದು’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.
ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಹಲವು ಸಾಧ್ಯತೆಗಳಿವೆ. ಆ ಸಾಧ್ಯತೆಗಳನ್ನು ಮಾಡದಿರಲು ಸುಪ್ರೀಂ ಕೋರ್ಟ್ ತೀರ್ಮಾನ ಕುರಿತು ಹೇಳುತ್ತ ಕೂತರೆ ತೊಡರುಗಾಲಾಗುತ್ತದೆ. ಉದಾಹರಣೆಗೆ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಇ) ಮಾತೃಭಾಷೆಯೇ ಪ್ರಾಥಮಿಕ ಶಿಕ್ಷಣ ಆಗಬೇಕು ಎಂದು ಹೇಳಿದೆ. ಆದರೆ, ಅದರಲ್ಲಿ ‘ಸಾಧ್ಯವಾದಷ್ಟರ ಮಟ್ಟಿಗೆ’ ಎಂಬ ಪದವಿದ್ದುದರಿಂದ ಅಸ್ಪಷ್ಟತೆ ಇದೆ. ಇದಕ್ಕಾಗಿ ರಾಜ್ಯ ಸರ್ಕಾರ ಚರ್ಚಿಸಿ ‘ಸಾಧ್ಯವಾದಷ್ಟರ ಮಟ್ಟಿಗೆ’ ಎಂಬ ಅಸ್ಪಷ್ಟತೆಯನ್ನು ಸ್ಪಷ್ಟಪಡಿಸಬೇಕು. ಉದಾಹರಣೆಗೆ, ಮೈಸೂರಿನ ಶಾಲೆಯೊಂದರಲ್ಲಿ ಹತ್ತು ತಮಿಳು ಮಕ್ಕಳಿದ್ದರೆ ಪ್ರಾಥಮಿಕ ಶಿಕ್ಷಣವನ್ನು ಕಲಿಯಲು ಅವರಿಗೆ ಹಕ್ಕಿದೆ. ಆದರೆ 10 ಮಕ್ಕಳಿರದಾಗ ಏನು ಮಾಡಬೇಕು? ಅದರ ಕುರಿತು ತಿದ್ದುಪಡಿ ಮಾಡಿ, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿ, ಅದನ್ನು ಅನುಷ್ಠಾನಕ್ಕೆ ತರಬೇಕು. ಹೀಗೆಯೇ ಆರೇಳು ಮನವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವೆ ಎಂದು ಅವರು ಭಾನುವಾರ ಸುದ್ದಿಗಾರರಿಗೆ ವಿವರಿಸಿದರು.
ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕುರಿತು ಎಲ್ಲ ಚಳವಳಿಗಾರರು ಗೋಕಾಕ್ ಮಾದರಿ ಚಳವಳಿ ರೀತಿ ಆಗಬೇಕು ಎಂದು ಚರ್ಚಿಸುತ್ತಿದ್ದಾರೆ. ಇದನ್ನು ಬಿಡಬೇಕು. ಪ್ರಾಥಮಿಕ ಮಾಧ್ಯಮ ಶಿಕ್ಷಣ ಬೇರೆ, ಗೋಕಾಕ್ ಚಳವಳಿಯೇ ಬೇರೆ. ಗೋಕಾಕ್ ಚಳವಳಿಯು ಯಾವ ಭಾಷೆಯಲ್ಲಿ ಮೊದಲು ಕಲಿಸಬೇಕು ಎಂಬ ಚರ್ಚೆ ನಡೆಸಿತು. ಈ ಚರ್ಚೆಯಲ್ಲಿ ನಾವು ಭಾವನಾತ್ಮಕವಾಗಿ ಗುದ್ದಾಡುತ್ತೇವೆ. ಆದರೆ, ಮಾಧ್ಯಮಕ್ಕೆ ಬಂದಾಗ ಮೌನವಾಗುತ್ತೇವೆ. ಹೀಗಾಗಬಾರದು, ಒಂದು ಭಾಷಾ ಮಾಧ್ಯಮ ಎಂದರೆ, ಮರಕ್ಕೆ ಬೇರಿದ್ದ ಹಾಗೆ. ಎರಡು, ಮೂರನೆಯ ಭಾಷೆಗಳು ಬಿಳಲು ಇದ್ದ ಹಾಗೆ. ಇದಕ್ಕಾಗಿ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಮಾಧ್ಯಮವಾಗಿ ಕಲಿಸುವುದಾದರೆ ಕನ್ನಡ ಮೂರನೆಯ ಭಾಷೆಯಾಗಲಿ, ಇಂಗ್ಲಿಷ್ ಮೊದಲ ಭಾಷೆಯಾಗಲಿ, ಹಿಂದಿ ಎರಡನೆಯ ಭಾಷೆಯಾಗಲಿ ಪರವಾಗಿಲ್ಲ. ಆದರೆ, ಮಾತೃಭಾಷೆಯಲ್ಲೇ ಶಿಕ್ಷಣ ಕಲಿಸುವಂತಾಗಬೇಕು ಎಂದರು.
ಇದರೊಂದಿಗೆ ಆರ್‌ಟಿಇನಲ್ಲಿ ಇನ್ನೊಂದಿದೆ; ಸಾಮಾನ್ಯ ಶಾಲೆ ಅಥವಾ ಸಮೀಪ ಶಾಲೆ ಅಥವಾ ನೆರೆಹೊರೆ ಶಾಲೆ. ಇದನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತಂದರೆ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು, ಅಧಿಕಾರಸ್ಥರ ಮಕ್ಕಳು ಒಂದೇ ಶಾಲೆಯಲ್ಲಿ ಓದಲು ಸಾಧ್ಯವಾಗು--ತ್ತದೆ. ಜತೆಗೆ, ಎಲ್ಲ ವರ್ಗದ, ಎಲ್ಲ ಜಾತಿಯ ಹಾಗೂ ಎಲ್ಲ ಧರ್ಮಗಳ ಮಕ್ಕಳು ಒಂದೇ ಶಾಲೆಯಲ್ಲಿ ಓದಿದರೆ ದೊಡ್ಡ ಶಿಕ್ಷಣ ಸಿಕ್ಕಂತಾಗುತ್ತದೆ. ಇದಕ್ಕಾಗಿ ಈಗ ಇರುವ ಕಾನೂನಿನಲ್ಲೇ ರಾಜ್ಯ ಸರ್ಕಾರ ತಿದ್ದುಪಡಿ ಮಾಡಬಹುದು ಎಂದು ಒತ್ತಾಯಿಸಿದರು.
ಒಂದನೇ ತರಗತಿಯಿಂದ 4ನೇ ತರಗತಿಯವರೆಗೆ ರಾಷ್ಟ್ರೀಕರಣ ಮಾಡಲು ಇರುವ ಸಾಧಕ, ಬಾಧಕಗಳ ಕುರಿತು ಚರ್ಚಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಧೈರ್ಯ ಮಾಡಿದರೆ ಕೆಲವು ಸಾಧ್ಯತೆಗಳು ಜಾರಿಯಾಗಬಹುದು ಎಂದರು.
ಇದನ್ನು ಹೇಳಲು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಬೇಕಿಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದರೆ ಇದನ್ನೇ ಪ್ರತಿಪಾದಿಸುತ್ತಿದ್ದೆ. ಇದನ್ನೇ ಅನೇಕರು ನನಗಿಂತ ಚೆನ್ನಾಗಿ ಹೇಳಿದ್ದಾರೆ. ಈಗ ಈ ಕುರಿತು ಚರ್ಚೆಯಾಗುತ್ತಿದೆ. ಇದನ್ನು ಮುಂದುವರಿಸಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.