ಕಿಕ್ಕೇರಿ: ಕಾವ್ಯಗಳಲ್ಲಿ ದಾಂಪತ್ಯದ ಸವಿಯನ್ನು ಕಟ್ಟಿ ಕೊಟ್ಟ ‘ಮೈಸೂರು ಮಲ್ಲಿಗೆ’ ಖ್ಯಾತಿಯ ಕೆಎಸ್‌ನ ಅವರಿಗೆ ಸೋಮವಾರ ಪಟ್ಟಣದಲ್ಲಿ ಭಿನ್ನರೀತಿಯ ಗಾಯನ ನಮನ ನಡೆಯಿತು.
ಗ್ರಾಮೀಣ ಭಾಗದ ವಿವಿಧ ಶಾಲೆಗಳ 1,500ಕ್ಕೂ ಹೆಚ್ಚು ಮಕ್ಕಳು ಪ್ರೇಮಕವಿಯ ಜನಪ್ರಿಯ ಗೀತೆಗಳಿಗೆ ಧ್ವನಿಯಾಗುವ ಮೂಲಕ ಕವಿಯ ನೆನಪುಗಳನ್ನು ಕಟ್ಟಿಕೊಟ್ಟರು. ಇವರ ಜತೆಗೆ ವಿವಿಧ ಗಾಯಕರು ಕೆಎಸ್‌ನ ಗೀತೆಗಳನ್ನು ಹಾಡಿದರು.
ಕೆ.ಎಸ್. ನರಸಿಂಹಸ್ವಾಮಿ ಅವರ ಹುಟ್ಟೂರಾದ ಕಿಕ್ಕೇರಿಯಲ್ಲಿ ಸೋಮವಾರ ಜರುಗಿದ ಕೆ.ಎಸ್.ನ ಜನ್ಮಶತಮಾನೋತ್ಸವ ಕಾರ್ಯಕ್ರಮ ಈ ಸಂಭ್ರಮಕ್ಕೆ ವೇದಿಕೆಯಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ಕನ್ನಡ ಕೂಟಗಳ (ಅಕ್ಕ) ಅಧ್ಯಕ್ಷ ಅಮರನಾಥಗೌಡ, ‘ಕವಿಯವರ ಹುಟ್ಟೂರಿನಲ್ಲೇ ಮೈಸೂರು ಮಲ್ಲಿಗೆ ಕಂಪು, ಕಾವ್ಯದ ಇಂಪು ಇದೆ’ ಎಂದು ಹೇಳಿದರು.
‘ನಾನೂ ನರಸಿಂಹಸ್ವಾಮಿ ಅವರ ಕಾವ್ಯಾಭಿಮಾನಿ. ಕವಿಯ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಿಸುವ ಅವಕಾಶ ದೊರೆತಿದ್ದು ನನ್ನ ಭಾಗ್ಯ’ ಎಂದರು.
ಇಲ್ಲಿನ ಕೇಂಬ್ರಿಡ್ಜ್ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ಅವರು, ‘ಕೆಎಸ್‌ನ ಜೀವನವೇ ಕಾವ್ಯ ಸಂದೇಶ. ಅವರ ಸರಳತೆ ಪಾಲಿಸಿದ್ದಲ್ಲಿ ಬಲು ಎತ್ತರಕ್ಕೆ ಬೆಳೆಯಬಹುದು’ ಎಂದರು.
ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರು, ಕೆಎಸ್‌ನ ದಾಂಪತ್ಯ ಕವಿತೆಗಳ ಸರದಾರರು. ಇವರು ಬಾಳಿದ ಮನೆಯನ್ನು ಸ್ಮಾರಕವನ್ನಾಗಿಸಲು ಸರ್ಕಾರ– ಸಂಸ್ಥೆಯ ರಾಯಭಾರಿಯಾಗಿ ನಿಲ್ಲುವೆ’ ಎಂದು ಭರವಸೆ ನೀಡಿದರು.
ಕಾರ್ಯಕ್ರಮ ಸಂಘಟಿಸಿದ್ದ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು, ಕೆಎಸ್‌ನ ಭವನ ಜತೆಗೆ ಕಿಕ್ಕೇರಿಯಲ್ಲಿ ಸುಗಮ ಸಂಗೀತ ಭವನ ನಿರ್ಮಿಸಲು ಗ್ರಾಮಸ್ಥರ ಸಹಕಾರವೂ ಅಗತ್ಯ. ಇದನ್ನು ಸಂಗೀತ ಗ್ರಾಮವಾಗಿಸಬೇಕು’ ಎಂದು ಒತ್ತಾಯಿಸಿದರು.
ಗಾಯಕಿ ರತ್ನಮಾಲಾ ಪ್ರಕಾಶ್, ‘ನನ್ನ ಜನಪ್ರಿಯತೆಗೆ ಮೈಸೂರು ಮಲ್ಲಿಗೆ ಸಂಕಲನದ ಕವನಗಳೇ ಪ್ರೇರಣೆ’ ಎಂದರು. ಅವರು ಕೆಎಸ್‌ನ ರಚಿಸಿದ 'ದೀಪವೂ ನಿನ್ನದೆ ಗಾಳಿಯೂ ನಿನ್ನದೆ...', 'ಒಂದಿರುಳು ಕನಸಿನಲಿ...' ಗೀತೆಗಳನ್ನು ಹಾಡಿದರು.
ಗಾಯಕ ವೈ.ಕೆ. ಮುದ್ದುಕೃಷ್ಣ ಅವರು, 'ಗಾಳಿ ಆಡಿದರೆ ಬನವು ಆಡಿ...' ಕವಿತೆಗೆ ದನಿಯಾದರೆ; ಶ್ರೀನಿವಾಸ ಉಡುಪ ಅವರು 'ಅಂತಿಂಥ ಹೆಣ್ಣು ನೀನಲ್ಲ...’, 'ಇವಳು ಯಾರು ಬಲ್ಲೆಯೇನು?' ಗೀತೆ ಹಾಡಿದರು.
ಕಿಕ್ಕೇರಿ ಕೃಷ್ಣಮೂರ್ತಿ ಅವರು, 'ನಗುವಾಗ ನಕ್ಕು...', 'ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು...' ಗೀತೆಗಳನ್ನು ಹಾಡಿ ತವರಿನ ಪ್ರೇಕ್ಷಕರ ರಂಜಿಸಿದರು.
ನಾಗಚಂದ್ರಿಕಾ ಭಟ್ ಅವರು, 'ರಾಯರು ಬಂದರು ಮಾವನ ಮನೆಗೆ' ಗೀತೆ ಹಾಡಿದರೆ; ಪಿ. ಶಿವಶಂಕರ್ ಅವರು 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...’ ಮಾಲತಿ ಶರ್ಮ 'ಹೂಬಳ್ಳಿಯ ದೀಪ...' ಗೀತೆ ಪ್ರಸ್ತುತಪಡಿಸಿದರು.
ಗೀತಚಿತ್ರ: ಕಲಾವಿದ ಮೋಕ್ಷಗುಂಡಂ ಶೇಷಾದ್ರಿ ಅವರು, ಗಾಯಕರು ಪ್ರಸ್ತುತಪಡಿಸಿದ ಕೆಎಸ್‌ನ ಗೀತೆಗಳಿಗೆ ಪೂರಕ ಚಿತ್ರಗಳನ್ನು ಬಿಡಿಸಿದರು. ಶಿಲ್ಪಿ ಪರಮೇಶ್ ಸ್ಥಳದಲ್ಲಿಯೇ ಮಣ್ಣಿನಿಂದ ಕೆಎಎಸ್‌ನ ಕಲಾಕೃತಿ ನಿರ್ಮಿಸಿದರು.
ಕೆಎಸ್‌ನ ಟ್ರಸ್ಟ್ ಸದಸ್ಯ ಕೆ.ಜೆ. ನಾರಾಯಣ್, ಕೋಡಿಹಳ್ಳಿ ನಂಜುಂಡೇಗೌಡ, ಕೆಎಸ್‌ನ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಮಾದಾಪುರ ಸುಬ್ಬಣ್ಣ, ಸ್ಪಂದನಾ ಫೌಂಡೇಷನ್‌ನ ತ್ರಿವೇಣಿ, ಕೇಂಬ್ರಿಡ್ಜ್ ಶಾಲೆಯ ಕಾರ್ಯದರ್ಶಿ ಇಂದಿರಾ ಸತೀಶ್ ಇದ್ದರು.
ಆದರ್ಶ ಸುಗಮ ಸಂಗೀತ ಅಕಾಡೆಮಿ, ಕೆಎಸ್‌ನ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಪಂದನಾ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.