ADVERTISEMENT

ಸಾಚಾತನ ಉಳಿಸಿಕೊಳ್ಳದ ಚಳವಳಿಗಳು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2015, 19:30 IST
Last Updated 2 ಫೆಬ್ರುವರಿ 2015, 19:30 IST

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆ (ಶ್ರವಣ­ಬೆಳಗೊಳ): ಮಾಹಿತಿ ಮತ್ತು ತಂತ್ರ­ಜ್ಞಾನ­ದಲ್ಲಿ ಸಾಕಷ್ಟು ಕ್ರಾಂತಿ ಆಗಿದ್ದರೂ ಸಹ ಕನ್ನಡ ಭಾಷಾ ತಂತ್ರಜ್ಞಾನ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ ಎಂದು ಡಾ.ಭ. ಮಲ್ಲಿಕಾರ್ಜುನ ಹೇಳಿದರು.

ಶ್ರವಣಬೆಳಗೊಳದಲ್ಲಿ ನಡೆಯುತ್ತಿ­ರುವ 81ನೇ ಅಖಿಲ ಭಾತರ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಸ್ವಾತಂತ್ರ್ಯೋತ್ತರ ಕರ್ನಾಟಕ –ವರದಿಗಳು ಮತ್ತು ಅನುಷ್ಠಾನ’ ವಿಷ­ಯಕ್ಕೆ ಸಂಬಂದಿಸಿ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಯನ್ನು ಅಭಿವೃದ್ದಿಗೊ­ಳಿ­ಸಲು ಇದುವರೆಗೆ ಒಟ್ಟು 11 ಸಮಿತಿ­ಗಳು ರಚನೆ ಆಗಿ ವರದಿ ಮಂಡಿಸಿವೆ. ಇವುಗಳಲ್ಲಿ 9 ಸಮಿತಿ­ಗಳನ್ನು ಸರ್ಕಾರ ನೇಮಕ ಮಾಡಿದರೆ, 2 ಸಮಿತಿಗಳು ಸ್ವಯಂ ಪ್ರೇರಿತ ವರದಿಗಳಾಗಿವೆ. ಪ್ರಾಥಮಿಕ, ಪ್ರೌಢ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ­ಮಾನ ಸೇರಿದಂತೆ ಗೋಕಾಕ್‌, ಸರೋ-­ಜಿನಿ ಮಹಿಷಿ, ಎಚ್‌. ನರಸಿಂಹಯ್ಯ, ಕೆ. ನಾರಾಯಣ್‌ ಮತ್ತು ವೆಂಕಟಸ್ವಾಮಿ, ಡಾ.ಎಲ್‌.ಎಸ್‌. ಚಿದಾನಂದಮೂರ್ತಿ –ಇವರೆಲ್ಲರ ವರದಿಗಳಲ್ಲಿ ಶೇ 80 ಭಾಗ ಅನುಷ್ಠಾನಗೊಂಡಿಲ್ಲ. ಅನುಷ್ಠಾನ­ಗೊಂಡರೂ ಹಲವು ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ ಎಂದರು. 

ಕರ್ನಾಟಕದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿ, ಕನಿಷ್ಠ ಒಂದು ಲಕ್ಷ ಮಂದಿ ಕನ್ನಡಿಗರಿಗೆ ಉದ್ಯೋಗ ನೀಡದೆ ಇದ್ದರೆ, ಅಂತಹ ಬಂಡ­ವಾಳ ಹೂಡಿಕೆ ರಾಜ್ಯಕ್ಕೆ ಅಗತ್ಯ­ವಿದೆಯೇ ಎಂದು ಪ್ರಶ್ನೆ ಮಾಡಿದರು.

ಕನ್ನಡಿಗರಿಗೆ ಬದುಕು ಕಟ್ಟಿಕೊಡು­ವಂತೆ ನೀಡಿರುವ ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಅನುಷ್ಠಾನ­ಗೊಳ್ಳಬೇಕು ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸೂತ್ರಗಳನ್ನು ಅನುಷ್ಠಾನಗೊಳಿಸುವ ಅಧಿಕಾರ ಕೇಂದ್ರದಿಂದ ಕೈಬಿಟ್ಟು ರಾಜ್ಯ ಸರ್ಕಾರಕ್ಕೆ ನೀಡಿದರೆ ಮಾತ್ರ ಭಾಷೆಗೆ ಸೂಕ್ತ ಸ್ಥಾನ ಮಾನ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಆತಂಕ ಹುಟ್ಟಿಸಿದ ಮನಸ್ಥಿತಿ: ನೆಲ, ಜಲ, ಪರಿಸರ ಅಭಿವೃದ್ಧಿ ವಿಷಯ ಕುರಿತು ರಾಧಾಕೃಷ್ಣ ಎಸ್‌. ಬಡ್ತಿ  ಮಾತನಾಡಿ,  ನೆಲ, ಜಲ, ಪರಿಸರವನ್ನು ಉಳಿಸಿ, ಸಂರಕ್ಷಣೆ ಮಾಡ­ಬೇಕು ಎಂಬ ಮನ­ಸ್ಥಿತಿ ಮಾಯವಾಗು­ತ್ತಿರುವುದು ಆತಂಕ ಹುಟ್ಟಿಸಿದೆ. ಎತ್ತಿನಹೊಳೆ (ನೇತ್ರಾ­ವತಿ) ತಿರುವು ಯೋಜನೆ­ಯನ್ನೂ ಸಹ ಚುನಾವಣೆಯ ವಸ್ತು­ವಾಗಿ ಬಳಸಿ­ಕೊಂಡಿ­ದ್ದಾರೆಯೇ ಹೊರತು ಬಯಲು­ಸೀಮೆಯ ಜನರ ಬಾಯಾ­ರಿಕೆ ಇಂಗಿ­ಸುವ ಉದ್ದೇಶ ಯೋಜನೆ­ಯಲ್ಲಿ ಇಲ್ಲ ಎಂದು ವಿಷಾದಿಸಿದರು.

ಬಹುತೇಕ ಚಳವಳಿಗಳು ಇಂದು ತನ್ನ ಸಾಚಾತನ ಉಳಿಸಿಕೊಂಡಿಲ್ಲ ಎಂದ ಅವರು, ವಿದೇಶಿ ಕಂಪೆನಿಗಳ, ಬಂಡ­ವಾಳ­ಶಾಹಿಗಳ, ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಗಳಾಗಿವೆ. ಹೋರಾಟಗಳು ಚಳವಳಿಗಳು ರಾಜ­ಕೀಯ ಬಣ್ಣ ಬಳಿದು­ಕೊಂಡಿ­ರುವುದರಿಂದ  ನಿಜವಾಗಿ­ಯೂ ಕಾಳಜಿ ಇಟ್ಟುಕೊಂಡು ಪರಿಸರ ಸಂರ­ಕ್ಷಣೆ ಮಾಡಲು ಹೋರಾಟ ಮಾಡುವ­ವರನ್ನು ಕೀಳಾಗಿ ಕಾಣಲಾಗುತ್ತಿದೆ. ಇಂತಹ ಬೆಳವಣಿಗೆ­ಯನ್ನು ನೋಡಿ­ಕೊಂಡು ಮಧ್ಯಮ ವರ್ಗದವರು ಎಲ್ಲಿ­ಯವರೆಗೆ ಸುಮ್ಮನಿರುತ್ತಾರೋ ಅಲ್ಲಿ­ಯ­ವರೆಗೆ ಮೋಸ, ವಂಚನೆ, ಪರಿಸರ ನಾಶಕ್ಕೆ ಕೊನೆ ಇಲ್ಲ ಎಂದರು.

ಗಡಿ ವಿವಾದ; ಸರ್ಕಾರಕ್ಕೆ ಇಲ್ಲದ ಕಾಳಜಿ: ಡಾ.ಸರಜೂ ಕಾಟ್ಕರ್‌ ಗಡಿ ವರದಿಗಳ ಬಗ್ಗೆ ಮಾತನಾಡುತ್ತಾ, ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಸಂಬಂಧ 1966ರಲ್ಲಿಯೇ ಮಹಾಜನ್‌ ವರದಿ ನೀಡಲಾಗಿದೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ. ನಾಯಕ್‌ ಇಬ್ಬರೂ ವರದಿ­ಯನ್ನು ಒಪ್ಪಿ ಸಹಿ ಹಾಕಿದ್ದಾರೆ. ಸದರಿ ವರದಿ­ಜಾರಿಗೊಳಿಸು­ವಂತೆ ಕಳೆದ ನಾಲ್ಕು ದಶಕಗಳಿಂದಲೂ ಕರ್ನಾಟಕ ಸರ್ಕಾರ ಸುಪ್ರಿಂ ಕೋರ್ಟ್‌ಗೆ ಮೊರೆ ಹೋಗಿಲ್ಲ. ಮಹಾರಾಷ್ಟ್ರಕ್ಕೆ ಇರುವ ಕಾಳಜಿ ಕರ್ನಾಟಕ ಸರ್ಕಾರ­ಗಳಿಗೆ ಇಲ್ಲ ಎಂದರು. ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಚ.ನಾ. ಅಶೋಕ್‌ ಸ್ವಾಗತಿಸಿದರು, ಲೀಲಾ ಸ್ವಾಮಿ ಕಾರ್ಯ­ಕ್ರಮ ನಿರೂಪಿಸಿದರು, ಸೋಮಶೇಖರ್‌ ಬಿಸಲ್ವಾಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.