ಬೆಂಗಳೂರು: ನೂರು ವಸಂತಗಳನ್ನು ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಮನು ಬಳಿಗಾರ್ ಸಜ್ಜಾಗಿದ್ದಾರೆ.
ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಸುಮಾರು 38 ಸಾವಿರ ಮತಗಳ ಅಂತರದ ಮುನ್ನಡೆ ಪಡೆದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಪರಿಷತ್ತಿಗೆ, ಕನ್ನಡಕ್ಕೆ ತಮ್ಮ ಕಾರ್ಯಕ್ರಮಗಳು ಏನು ಎಂಬುದನ್ನು ಬಳಿಗಾರ್ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ: ಪರಿಷತ್ತಿನಲ್ಲಿ ಮಹಿಳೆಯರ ಸದಸ್ಯತ್ವ ತೀರಾ ಕಡಿಮೆ. ಪರಿಷತ್ತು ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಯಾಗಿ ಬೆಳೆಯಲು ನಿಮ್ಮ ಪ್ರಯತ್ನ ಏನಿರುತ್ತದೆ?
ಪರಿಷತ್ತು ಎಲ್ಲರನ್ನೂ ಒಳಗೊಳ್ಳಲು ಈಗಾಗಲೇ ಒಳ್ಳೆಯ ಪ್ರಯತ್ನ ನಡೆಸಿದೆ. ಮಹಿಳೆಯರು ಮತ್ತು ಯುವಕರು ಪರಿಷತ್ತಿನ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕ್ರಮ ರೂಪಿಸುತ್ತೇನೆ.
ಸದಸ್ಯರಲ್ಲಿ ಮಹಿಳೆಯರ ಪ್ರಮಾಣ ಈಗ ಶೇಕಡ 18ರಷ್ಟಿದೆ. ಇದು ಹೆಚ್ಚಬೇಕು. ಪರಿಷತ್ತಿನ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿಕೊಳ್ಳುವಂತೆ ನಾನು ಮಹಿಳಾ ಸಮುದಾಯವನ್ನು ಕೋರುತ್ತೇನೆ.
ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಗೆ ಒಂದು ಸ್ಥಾನ ಮೀಸಲಿದೆ. ಇದನ್ನು ಹೆಚ್ಚಿಸಲು ಉಪ ನಿಯಮಗಳಿಗೆ ತಿದ್ದುಪಡಿ ಆಗಬೇಕು. ಆ ಪ್ರಕ್ರಿಯೆ ಆರಂಭಿಸುತ್ತೇನೆ. ಅಷ್ಟೇ ಅಲ್ಲ, ಪರಿಷತ್ತು ಸಾಮಾಜಿಕ ನ್ಯಾಯ ಪಾಲಿಸಲಿದೆ. ಪ್ರಾದೇಶಿಕ, ಸಾಮಾಜಿಕ ಮತ್ತು ಪ್ರತಿಭಾ ನ್ಯಾಯದ ನೆಲೆಯಲ್ಲೇ ಕೆಲಸ ಮಾಡುತ್ತೇನೆ.
* ಯುವಜನರನ್ನು ಪರಿಷತ್ತಿನ ಕಡೆ ಹೇಗೆ ಸೆಳೆಯುತ್ತೀರಿ?
ಅವರಿಗೆ ಅಭಿರುಚಿ ಇರುವ ಕಾರ್ಯಕ್ರಮಗಳನ್ನು ಪರಿಷತ್ತಿನ ಮೂಲಕ ಆಯೋಜಿಸುತ್ತೇನೆ. ಅಲ್ಲದೆ, ಕನ್ನಡ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತರುಣರ ಪಾಲ್ಗೊಳ್ಳುವಿಕೆ ಇರುವಂತೆ ಮಾಡುತ್ತೇನೆ.
* ಇಂದಿನ ಕಾಲಘಟ್ಟಕ್ಕೆ ಪರಿಷತ್ತು ಎಷ್ಟು ಪ್ರಸ್ತುತ? ಇದು ಸಾಂವಿಧಾನಿಕ ಸಂಸ್ಥೆ ಅಲ್ಲ. ಆಳುವ ವರ್ಗ ಅಂದರೆ ಸರ್ಕಾರ, ಪರಿಷತ್ತನ್ನು ಗಂಭೀರವಾಗಿ ಪರಿಗಣಿಸಲು ನಿಮ್ಮ ಯೋಜನೆ ಏನು?
ಈ ಸಂಸ್ಥೆ ಇಂದಿಗೂ ಪ್ರಸ್ತುತ. ಪರಿಷತ್ತನ್ನು ಹೊರತುಪಡಿಸಿದರೆ, ಕನ್ನಡಿಗರದ್ದೇ ಆದ ಪ್ರಾತಿನಿಧಿಕ ಸಂಸ್ಥೆ ಬೇರೆ ಯಾವುದಿದೆ? ನಿಜ. ಈ ಸಂಸ್ಥೆ ಪರ್ಯಾಯ ಸರ್ಕಾರವಾಗಲು ಸಾಧ್ಯವಿಲ್ಲ. ಆದರೆ ಆಳುವ ವರ್ಗ ಪರಿಷತ್ತಿನ ಮಾತನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಡವನ್ನಂತೂ ಹೇರಬಹುದು. ಅವಶ್ಯ ಬಂದರೆ ಆ ಕೆಲಸ ಮಾಡುತ್ತೇನೆ. ಆದರೆ, ಈ ಹಂತದಲ್ಲಿ ಒತ್ತಾಯದ ಮಾರ್ಗದಿಂದಲೇ ಕೆಲಸ ಮಾಡಬೇಕಾಗುತ್ತದೆಂದು ನನಗೆ ಅನಿಸುತ್ತಿಲ್ಲ. ಸರ್ಕಾರದಲ್ಲಿ ಪ್ರಮುಖ ಹುದ್ದೆಗಳಲ್ಲಿ ಇರುವವರು ನನಗೆ ಪರಿಚಿತರೇ ಆಗಿದ್ದಾರೆ. ಆ ಪರಿಚಯವನ್ನು ಪರಿಷತ್ತಿನ ಕೆಲಸಗಳಿಗಾಗಿ ನಾನು ಬಳಸಿಕೊಳ್ಳುತ್ತೇನೆ.
* ಪರಿಷತ್ತು ತನ್ನ ಚಟುವಟಿಕೆಗಳಿಗೆ ಸರ್ಕಾರದ ಹಣ ಪಡೆಯಬಾರದು ಎಂಬ ಮಾತೂ ಇದೆ, ಪಡೆಯಬೇಕು ಎಂಬ ವಾದವೂ ಇದೆ. ಈ ವಿಚಾರದಲ್ಲಿ ನಿಮ್ಮ ನಿಲುವು ಏನು?
ಸರ್ಕಾರದಿಂದ ಹಣ ಪಡೆಯಬಾರದು ಎಂದು ಏಕೆ ಹೇಳುತ್ತಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇದು ಪ್ರಜಾತಂತ್ರ. ಸರ್ಕಾರದ ಹಣ ಜನರ ಹಣ. ಸರ್ಕಾರವೆಂದರೆ ಹೊರಗಿನವರದಲ್ಲ, ಅದು ನಮ್ಮದೇ ವ್ಯವಸ್ಥೆ. ಬ್ರಿಟಿಷರಿಂದ ಆಳಿಸಿಕೊಂಡ ಕಾರಣಕ್ಕೆ, ಸರ್ಕಾರ ಎಂದರೆ ನಮ್ಮದಲ್ಲ; ಹೊರಗಿನದು ಎಂಬ ಭಾವನೆ ಬೆಳೆದಿದೆಯೇನೋ ಅನಿಸುತ್ತದೆ. ಸರ್ಕಾರದ ಹಣ ಬೇರೆಯವರದ್ದು ಎಂದೇಕೆ ತಿಳಿಯಬೇಕು. ಅದು ಕನ್ನಡಿಗರದ್ದೇ ಅಲ್ಲವೇ? ನನ್ನ ಅವಧಿಯಲ್ಲಿ ಪರಿಷತ್ತು ಸರ್ಕಾರದ ಜೊತೆ ಅತ್ಯಂತ ಸೌಹಾರ್ದ ಸಂಬಂಧ ಹೊಂದಿರಲಿದೆ. ಸರ್ಕಾರ ನನ್ನ ಪಾಲಿನ ತವರು ಮನೆ. ಅದರ ಜೊತೆ ಖಂಡಿತ ಒಳ್ಳೆಯ ಸಂಬಂಧ ಇಟ್ಟುಕೊಳ್ಳುತ್ತೇನೆ.
* ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರದ ಪರಿಣಾಮಗಳನ್ನು ಪರಿಷತ್ತಿನ ಅಧ್ಯಕ್ಷರಾಗಿ ಹೇಗೆ ಎದುರಿಸುವಿರಿ?
ವಕೀಲಿಕೆಯಲ್ಲಿ ನನಗೆ ತುಸು ಅನುಭವ ಇದೆ. ಅದರ ಹಿನ್ನೆಲೆಯಲ್ಲಿ, ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಲು ಏನು ಮಾಡಬೇಕು, ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗುವಂತೆ ಮಾಡಲು ಸುಪ್ರೀಂ ಕೋರ್ಟ್‌ಗೆ ಹೇಗೆ ಮನವರಿಕೆ ಮಾಡಬಹುದು ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯುತ್ತೇನೆ.
ಈ ವಿಚಾರದಲ್ಲಿ ನಾನೇ ಮುಂದಾಗಿ ಕೆಲಸ ಮಾಡುತ್ತೇನೆ. ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಬಗ್ಗೆ ತಜ್ಞರ ಜೊತೆ, ಪಾಲಕರ ಜೊತೆ, ವಿದ್ಯಾರ್ಥಿಗಳ ಜೊತೆಗೂ ಮಾತುಕತೆ ನಡೆಸಬೇಕು.
* ಆಡಳಿತದಲ್ಲಿ ಕನ್ನಡವನ್ನು ಇನ್ನಷ್ಟು ಹೆಚ್ಚಿಸಲು ಪರಿಷತ್ ಅಧ್ಯಕ್ಷರಾಗಿ ಏನು ಮಾಡುತ್ತೀರಿ?
ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ನೂರಕ್ಕೆ ನೂರರಷ್ಟು ಎನ್ನುವ ರೀತಿಯಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಆಗಿದೆ. ಈಗ ಅದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕಾಗಿರುವುದು ವಿಧಾನಸೌಧದಲ್ಲಿ. ಅಲ್ಲಿಯೂ ಸಾಕಷ್ಟು ಕೆಲಸ ಆಗಿದೆ. ತಾಂತ್ರಿಕ ಅಂಶಗಳನ್ನು ಒಳಗೊಂಡ ಕ್ಷೇತ್ರಗಳಲ್ಲಿ ಕನ್ನಡದ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಈ ಕೆಲಸವನ್ನು ನಾನು ಖಂಡಿತವಾಗಿಯೂ ಮಾಡುತ್ತೇನೆ.
* ಇ–ಜಗತ್ತಿನಲ್ಲಿ ಕನ್ನಡದ ಬಲವರ್ಧನೆಗೆ ಏನು ಮಾಡುತ್ತೀರಿ?
ಕನ್ನಡ ತಂತ್ರಾಂಶ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯದಲ್ಲಿ ಸಾಕಷ್ಟು ಪರಿಣಿತರು ಇದ್ದಾರೆ. ಅವರಲ್ಲಿ ಹಲವರ ಪರಿಚಯವಿದೆ. ನನಗೆ ತಂತ್ರಜ್ಞಾನದ ಬಗ್ಗೆ ದೊಡ್ಡ ಮಟ್ಟದ ಜ್ಞಾನ ಇಲ್ಲ. ಆದರೆ, ತಂತ್ರಜ್ಞರನ್ನು ಕರೆದು, ಕನ್ನಡವನ್ನು ಕಂಪ್ಯೂಟರ್ ಜಗತ್ತಿನಲ್ಲಿ ಇನ್ನಷ್ಟು ಶಕ್ತಿಯುತಗೊಳಿಸಲು ಏನು ಮಾಡಬಹುದು ಎಂಬುದನ್ನು ಚರ್ಚಿಸುತ್ತೇನೆ.
* ಪರಿಷತ್ತಿನ ಚುನಾವಣೆಯಲ್ಲಿ ದಾಖಲೆಯ ಜಯ ಸಾಧಿಸಿದ್ದೀರಿ. ಇದು ಎಂತಹ ಭಾವ ಮೂಡಿಸಿದೆ?
ಕನ್ನಡಿಗರು ನನ್ನ ಮೇಲೆ ಇಷ್ಟು ವಿಶ್ವಾಸ ಇಟ್ಟಿದ್ದಕ್ಕೆ ಋಣಿ. ನನ್ನ ನಿರೀಕ್ಷೆಗೂ ಮೀರಿ ಮತಗಳು ಬಂದಿವೆ. ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಸಿದ್ಧನಾಗುತ್ತೇನೆ.
* ನಿಮ್ಮ ಅವಧಿಯಲ್ಲಿ ಪರಿಷತ್ತಿನ ಚಟುವಟಿಕೆಗಳಿಗಾಗಿ ಏನು ಕೆಲಸ ಹಮ್ಮಿಕೊಳ್ಳುವಿರಿ?
ಶತಮಾನೋತ್ಸವ ಭವನ ನಿರ್ಮಾಣ ಪೂರ್ಣಗೊಳಿಸುವ ಇರಾದೆ ನನ್ನದು. ಅಲ್ಲದೆ, ಕಾರ್ಯಕಾರಿ ಸಮಿತಿ ಒಪ್ಪಿದರೆ, ಸರ್ಕಾರ ಅನುಕೂಲ ಮಾಡಿಕೊಟ್ಟರೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಆಸೆ ಇದೆ. ಇಂಗ್ಲಿಷಿನ ಒತ್ತಡವನ್ನು ಪ್ರಾದೇಶಿಕ ಭಾಷೆಗಳು ಹೇಗೆ ತಡೆದುಕೊಳ್ಳಬೇಕು ಎಂಬ ಜಿಜ್ಞಾಸೆ ಆ ಸಮ್ಮೇಳನದಲ್ಲಿ ನಡೆಯಬೇಕು.
ಲಂಡನ್ ಸುತ್ತಲಿನ ಅನ್ಯ ಭಾಷೆಗಳು ಇಂಗ್ಲಿಷಿನ ಒತ್ತಡವನ್ನು ತಾಳಿಕೊಂಡಿವೆ. ಅವರಿಗೆ ಇದು ಸಾಧ್ಯವಾಗಿದ್ದು ಹೇಗೆ? ಕನ್ನಡಕ್ಕೇಕೆ ಅದು ಸಾಧ್ಯವಾಗುತ್ತಿಲ್ಲ ಎಂಬ ಮಂಥನ ಅಲ್ಲಿ ನಡೆಯಬೇಕು ಎಂಬ ಆಸೆ ನನ್ನದು. ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದನ್ನು ಸಮಿತಿಯ ನಿರ್ಣಯ ಆಧರಿಸಿಯೇ ಹೇಳಬಹುದು.
*******
ದಾಖಲೆಯ ಮುನ್ನಡೆ
ಬೆಂಗಳೂರು: ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಮತಗಳ ಎಣಿಕೆ ಎಲ್ಲ ಜಿಲ್ಲೆಗಳಲ್ಲಿ ಪೂರ್ಣಗೊಂಡಿದ್ದು, ಬಳಿಗಾರ್ ಅವರು 37,931 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಪ್ರೊ.ಬಿ. ಜಯಪ್ರಕಾಶ ಗೌಡ 22908 ಮತ ಪಡೆದಿದ್ದಾರೆ. ಅಂಚೆ ಮೂಲಕ ಬರಲಿರುವ ಮತಗಳ ಎಣಿಕೆ ಬುಧವಾರ ನಡೆಯಲಿದೆ. ಅಧ್ಯಕ್ಷರ ಆಯ್ಕೆಯನ್ನು ಚುನಾವಣಾ ಅಧಿಕಾರಿ ಕೆ. ನಾಗರಾಜು ಬುಧವಾರ ಅಧಿಕೃತವಾಗಿ ಘೋಷಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.