ಮೈಸೂರು: ‘ರಂಗಕರ್ಮಿಗಳು ಸಾಹಿತಿಗಳಿಗಿಂತ ಶ್ರೇಷ್ಠರು. ಜ್ಞಾನಪೀಠ ಲೇಖಕರ ಕೆಲಸಕ್ಕಿಂತ ದೊಡ್ಡ ಕೆಲಸ ಮಾಡುವ ಸಾಧ್ಯತೆ ರಂಗಭೂಮಿಗೆ ಇದೆ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.
ನಿರಂತರ ಫೌಂಡೇಷನ್ ವತಿಯಿಂದ ನಗರ ಕಲಾಮಂದಿರದಲ್ಲಿ ಏರ್ಪಡಿಸಿರುವ ನಿರಂತರ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದ ವಿವಿಧ ಸಮುದಾಯಗಳ ಜೊತೆಗೆ ಸಂವಹನ ಮಾಡಬಲ್ಲ ಶಕ್ತಿ ರಂಗಭೂಮಿಗೆ ಇದೆ. ನಾಟಕವನ್ನು ಬೀದಿಗೂ ಕೊಂಡೊಯ್ಯಲು, ವೇದಿಕೆಯಲ್ಲಿ ಪ್ರದರ್ಶಿಸಲು ಸಾಧ್ಯ ಇದೆ. ಅದೇ ರೀತಿ ಈ ಕಲೆಯ ಮೂಲಕ ಸಾಮಾಜಿಕ–ರಾಜಕೀಯ ಚಳವಳಿ ಕಟ್ಟಬಹುದು. ಇಲ್ಲಿನ ಕಲಾಮಂದಿರದಲ್ಲಿ ಹಾಕಿರುವ ಜ್ಞಾನಪೀಠ ಪುರಸ್ಕೃತ ಭಾವಚಿತ್ರಗಳ ಜೊತೆಗೆ ರಂಗಕರ್ಮಿಗಳ ಭಾವಚಿತ್ರಗಳನ್ನು ಹಾಕಬೇಕು’ ಎಂದು ಅವರು ಸಲಹೆ ನೀಡಿದರು.
‘ಇತ್ತೀಚಿನ ದಿನಗಳಲ್ಲಿ ರಂಗಭೂಮಿಯಲ್ಲಿ ಬೆರಕೆ ಮಾತುಗಳ ನಾಟಕ ತುಂಬಾ ಜನಪ್ರಿಯವಾಗುತ್ತಿವೆ. ಈ ಬೆರಕೆ ಭಾಷೆ ಮಾತಾಡುವವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಳಗೆ ಪುನರ್‌ಪ್ರವೇಶ ಪಡೆದುಕೊಳ್ಳುವ ಇಂಗಿತ ಇದೆ. ಆದರೆ, ನಾವು ಅವರನ್ನು ದೂರ ಅಟ್ಟುತ್ತಿದ್ದೇವೆ. ರಂಗಭೂಮಿಯು ಈ ಭಾಷೆ ಮೂಲಕ ಬಾಗಿಲನ್ನು ತೆರೆದು, ಆನಂತರ ಅವರನ್ನು ಸಾಂಸ್ಕೃತಿಕ ವಲಯದೊಳಗೆ ಬರಮಾಡಿಕೊಳ್ಳುವ ಮಾಧ್ಯಮವಾಗಿದೆ’ ಎಂದು ಹೇಳಿದರು.
‘ಸಭ್ಯತೆ ಮತ್ತು ನಾಗರಿಕತೆಯನ್ನು ಸಭ್ಯವಾಗಿ ಉಳಿಸುವ ಹಲವು ಪ್ರಕ್ರಿಯೆಗಳಲ್ಲಿ ನಾಟಕ ಚಟುವಟಿಕೆಯೂ ಒಂದು. ಇಂದಿನ ಸಂದರ್ಭದಲ್ಲಿ ನಾಟಕದ ಜೊತೆ ನಿಂತು ಸೆಣಸುತ್ತಿರುವ ಮತ್ತು ನಾಟಕಕ್ಕಿಂತ ಬಹುದೊಡ್ಡದಾಗಿ ಬೆಳೆಯುತ್ತಿರುವ ಯಂತ್ರ ಮಾಧ್ಯಮಗಳು ಈ ಪ್ರಕ್ರಿಯೆಯನ್ನು ಮನರಂಜನೆಗೆ ಸೀಮಿತ ಮಾಡಿವೆ. ಹಣಕ್ಕಾಗಿ ಮಾರುಕಟ್ಟೆಯಲ್ಲಿ ಸಿಕ್ಕುವ ಮನರಂಜನೆಯಾಗಿ ಮಾಡಿದ್ದಾರೆ. ಈ ಮನರಂಜನೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ವ್ಯಾಪಾರವಾದರೆ ಸಾಕು ಎಂದು ನಾವು ತಿಳಿದುಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಂಗಭೂಮಿಗೆ ಸಾಮಾಜಿಕ ಉಪಯುಕ್ತತೆ ಇದೆ. ಈ ಉಪಯುಕ್ತತೆಯನ್ನು ಮರೆತುಬಿಟ್ಟಿದ್ದೇವೆ. ಹಾಗಾಗಿ, ಈ ಯಾಂತ್ರೀಕೃತ ಮನರಂಜನೆ ಬಲೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವಪೀಳಿಗೆ ಮಾತ್ರವಲ್ಲ ಶ್ರಮಜೀವಿಗಳನ್ನು ತಳ್ಳಿ ಕಣ್ಮುಚ್ಚಿ ಕುಳಿತಿದ್ದೇವೆ. ಕುವೆಂಪು, ಕಾರಂತ, ಬೇಂದ್ರೆ ಮೊದಲಾದವರು ಪುಸ್ತಕ ಬರೆದರು. ಆದರೆ, ನಾವು ಕಲಿತ ಮಂದಿ ಪುಸ್ತಕಗಳಲ್ಲಿನ ಮಹತ್ತರವಾದ ವಿಚಾರಗಳನ್ನು ಪ್ರಸಾರ ಮಾಡುವುದನ್ನು ಮರೆತುಬಿಟ್ಟಿದ್ದೇವೆ. ಆ ಕಡೆಯಿಂದ ಮಾಧ್ಯಮಗಳು ಸದ್ದಿಲ್ಲದೇ ಈ ಎಲ್ಲ ಕ್ಷೇತ್ರಗಳನ್ನು ಪ್ರವೇಶಿಸಿ ಎಲ್ಲರ ಮನಸ್ಸನ್ನು ಹಿಡಿದಿಟ್ಟಿದ್ದರೂ ಕಣ್ಮುಚ್ಚಿ ಕುಳಿತಿದ್ದೇವೆ. ರಂಗಕರ್ಮಿಗಳು ಕೂಡಾ ಈ ತಪ್ಪನ್ನೇ ಮಾಡಿದ್ದೇವೆ. ಈ ತಪ್ಪನ್ನು ಒಪ್ಪಿಕೊಳ್ಳಬೇಕು ಮತ್ತು ತಿಳಿದುಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.