ADVERTISEMENT

ಸಾಹಿತಿ ಆರೂರ ಲಕ್ಷ್ಮಣ ಶೇಟ್‌

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2015, 19:40 IST
Last Updated 24 ಅಕ್ಟೋಬರ್ 2015, 19:40 IST

ಹುಬ್ಬಳ್ಳಿ: ಹಿರಿಯ ಲೇಖಕ, ಅಂಕಣಕಾರ ಆರೂರ ಲಕ್ಷ್ಮಣಶೇಟ್‌ (68) ಅವರು ಶನಿವಾರ ಬೆಳಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹಲವು ದಿನಗಳಿಂದ ಶೇಟ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ. ರಾಜ್ಯದ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಲಕ್ಷ್ಮಣ ಶೇಟ್‌, 2012ರಲ್ಲಿ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದರು.

ಮೂಲತಃ ಉಡುಪಿ ಜಿಲ್ಲೆಯ ಆರೂರ ಗ್ರಾಮದವರಾದ ಲಕ್ಷ್ಮಣ ಶೇಟ್‌ ಹುಬ್ಬಳ್ಳಿಯ ನೃಪತುಂಗ ಬೆಟ್ಟದ  ಬಳಿ ಇರುವ ಶಕ್ತಿ ಕಾಲೊನಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಬ್ಯಾಂಕ್‌ ಉದ್ಯೋಗಿಯಾಗಿದ್ದ ಅವರು, ಸ್ವಯಂ ನಿವೃತ್ತಿ ಪಡೆದು ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

‘ಟಿಕ್‌ ಟಿಕ್‌ ಗೆಳೆಯ... ಟಿಕ್‌ ಟಿಕ್‌’ ಎಂಬ ಲೇಖನಗಳ ಸಂಗ್ರಹ, ‘ಒದ್ದೆ ಕಂಗಳ ಪ್ರೀತಿ’ ಹಾಗೂ ‘ವೇಷಗಳು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದರು. 350ಕ್ಕೂ ಅಧಿಕ ಕಥೆಗಳನ್ನು ಬರೆದಿದ್ದರಲ್ಲದೇ, ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಅವರ ಕುರಿತು ‘ಗಾನ ಗಂಗೆ ಗಂಗೂಬಾಯಿ’ ಎಂಬ ಜೀವನ ಚರಿತ್ರೆಯನ್ನು ಬರೆದಿದ್ದರು.

ಅಕ್ಷರ ಸಾಹಿತ್ಯ ವೇದಿಕೆ ಹಾಗೂ ಸ್ಕೇಟಿಂಗ್‌ ಕ್ಲಬ್‌ ಅಧ್ಯಕ್ಷರಾಗಿ, ಡಾ. ಡಿ.ಎಸ್‌. ಕರ್ಕಿ ವೇದಿಕೆ, ಪಾ.ಪು ವಿಚಾರ ವೇದಿಕೆಯ ಸಾರಥ್ಯ ವಹಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಇತ್ತೀಚೆಗೆ ಅವರ ಕುರಿತು ಸಾಕ್ಷ್ಯಚಿತ್ರವೂ ಬಿಡುಗಡೆಯಾಗಿತ್ತು. ಹುಬ್ಬಳ್ಳಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.