ಶ್ರವಣಬೆಳಗೊಳ: ಧರ್ಮ ಬೆಳಗಬೇಕಾದರೆ ಧಾರ್ಮಿಕ ಮನೋಭಾವ ಅಗತ್ಯ. ಧಾರ್ಮಿಕ ಭಾವನೆ ಮಹಿಳೆಯರಲ್ಲಿ ಹೆಚ್ಚು ಜಾಗೃತಗೊಳ್ಳುತ್ತದೆ ಎಂದು ಧವಲತೀರ್ಥಂ ಪ್ರಾಕೃತ ಅಧ್ಯಯನ, ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಸಿ.ಪಿ.ಕುಸುಮಾ ಹೇಳಿದರು.
ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ‘ಧಾರ್ಮಿಕ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ’ ಕುರಿತು ಮಾತನಾಡಿದರು.
‘ಸಾಹಿತ್ಯ, ಕಲೆ, ಸಂಸ್ಕೃತಿಗೆ ಜೈನ ಮಹಿಳೆಯರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಸದಿಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರ ಮಾಡಿ ಧರ್ಮವನ್ನು ನೆಲೆಗೊಳಿಸಿದ್ದಾರೆ. ಧರ್ಮ ಪ್ರಭಾವನೆಯಿಂದ ಸಮಾಜ ಸನ್ಮಾರ್ಗದಲ್ಲಿ ಸಾಗುವಂತೆ ಮಾಡಿದ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ. ಸನ್ಯಾಸ ಸ್ವೀಕರಿಸಿ ಧರ್ಮ ಪ್ರಭಾವನೆ ಮಾಡಿದ ಆರ್ಯಿಕೆಯರ ಪಾತ್ರ ಮುಖ್ಯವಾದುದು. ಧರ್ಮ ಪ್ರಸಾರದ ಹೊಣೆ ಹೊತ್ತ ಇವರ ಕಾರ್ಯ ಜೈನಾಚಾರ್ಯರ ಕೊಡುಗೆಯಷ್ಟೇ ಮುಖ್ಯವಾದುದು’ ಎಂದು ಅವರು ಹೇಳಿದರು.
ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಹೊಯ್ಸಳರು, ವಿಜಯನಗರದ ಅರಸರ ಕಾಲದಲ್ಲಿ ಬಸದಿಗಳು ನಿರ್ಮಾಣವಾದವು. ರಾಜ್ಯದಲ್ಲಿ ಮಹಿಳೆಯರು ನಿರ್ಮಿಸಿರುವ 1,036 ಜಿನಮಂದಿರಗಳ ಪೈಕಿ 330 ಶಿಥಿಲವಾಗಿವೆ. ಈ ಸಂಖ್ಯೆಯನ್ನು ಮೀರಿಸುವಂತೆ ಅತ್ತಿಮಬ್ಬೆ ನಾಡಿನಾದ್ಯಂತ 1,501 ಬಸದಿಗಳನ್ನು ನಿರ್ಮಿಸಿದರು. ಅಂದು ಆರಂಭವಾದ ಬಸದಿಗಳ ನಿರ್ಮಾಣ ಕಾರ್ಯ ಇಂದಿಗೂ ನಿಂತಿಲ್ಲ. ಕೆಲ ವರ್ಷಗಳ ಹಿಂದೆ ಕಾಂಚನಾಮತಿ ಮಾತಾಜಿ, ರಾಜಮತಿ ಮಾತಾಜಿ ಬಸದಿಗಳನ್ನು ನಿರ್ಮಿಸಿದ್ದಾರೆ. ವರ್ಷದ ಹಿಂದೆ ಬೆಂಗಳೂರು, ಕನಕಗಿರಿಯಲ್ಲಿ ನಿರ್ಮಾಣ ಮಾಡಲಾಗಿವೆ. ಇವು ಕೇವಲ ವಾಸ್ತುಶಿಲ್ಪ ಪ್ರದರ್ಶಿಸುವ ಕಟ್ಟಡಗಳಲ್ಲ. ಸಮಾಜ ಒಗ್ಗೂಡಿಸುವ ಧಾರ್ಮಿಕ ಶ್ರದ್ಧಾ ಕೇಂದ್ರ. ಸಂಸ್ಕೃತಿಯನ್ನು ರಕ್ಷಿಸುವ ತಾಣ ಎನ್ನಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕಿ ರೇಖಾ ಜೈನ್ ಮಾತನಾಡಿ, ‘ಸೃಜನಶೀಲ ಸಾಹಿತ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ಸಂಸ್ಕಾರ ತಾಯಿಯಿಂದ ಬಳುವಳಿಯಾಗಿ ಬರುತ್ತದೆ’ ಎಂದರು.
ಡಾ.ಸವಿತಾ ಜೈನ್, ನಿರ್ಮಲಾ ಜೈನ್ ಮಾತನಾಡಿದರು. ಸಮತಾ ದೀದೀಜಿ ಅಧ್ಯಕ್ಷತೆ ವಹಿಸಿದ್ದರು. ಅರುಣಾ ಶಿರಗುಪ್ಪಿ ಇದ್ದರು.
ಸಮ್ಮೇಳನದ ಎರಡನೇ ದಿನವಾದ ಶನಿವಾರ ಧಾರ್ಮಿಕ ಕ್ಷೇತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಕುರಿತು ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರತಿನಿಧಿಗಳು ಪ್ರಬಂಧ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.