ಬೆಂಗಳೂರು: `ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ವರ್ಷ ಮೇ ತಿಂಗಳಲ್ಲಿ ನೂರರ ಸಂಭ್ರಮಕ್ಕೆ ಅಡಿ ಇಡಲಿದ್ದು, ಈ ಸಂಭ್ರಮವನ್ನು ಸ್ಮರಣೀಯವಾಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ' ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, `ಶತ ಸಂಭ್ರಮದ ಅಂಗವಾಗಿ ನೂರು ಮೌಲಿಕ ಕೃತಿಗಳನ್ನು ಪರಿಷತ್ತಿನಿಂದ ಪ್ರಕಟಿಸಲಾಗುವುದು' ಎಂದು ಪ್ರಕಟಿಸಿದರು.
`ಮುದ್ದಣ್ಣನಿಂದ ಕುವೆಂಪು ಅವರ ಕಾಲದವರೆಗಿನ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ದಾಖಲಿಸಲು 15 ಸಂಪುಟಗಳನ್ನು ತರಲು ಉದ್ದೇಶಿಸಲಾಗಿದ್ದು, ಎಲ್ಲ ಸಂಪುಟಗಳ ರಚನೆಗೆ ಈಗಾಗಲೇ ಸಂಪಾದಕರನ್ನು ನೇಮಕ ಮಾಡಲಾಗಿದೆ' ಎಂದು ತಿಳಿಸಿದರು.
`ದ್ರಾವಿಡ ಭಾಷೆಗಳ ಪ್ರತಿ ಪದಕ್ಕೂ ಸಮಾನಾರ್ಥಗಳನ್ನು ಒಳಗೊಂಡ `ದ್ರಾವಿಡ ಭಾಷಾ ಜ್ಞಾತ ಪದಕೋಶ' ನಿಘಂಟು ಪ್ರಕಟಣೆ ಹಂತದಲ್ಲಿದ್ದು, ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ' ಎಂದು ಹೇಳಿದರು.
`ವರ್ಷದ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ವಿಧದ ಸಾಹಿತ್ಯ ಕೃತಿಗಳ ಮಾಹಿತಿ ಒದಗಿಸಲು ಪ್ರತಿವರ್ಷ ಡಿಸೆಂಬರ್ ಅಂತ್ಯದಲ್ಲಿ `ವಾರ್ಷಿಕ ಸಾಹಿತ್ಯ' ಸಂಚಿಕೆಯನ್ನು ಹೊರತರಲಾಗುತ್ತದೆ. ಕೃತಿ ಹೆಸರು, ಲೇಖಕರು, ಪ್ರಕಾಶಕರ ವಿವರ ಮತ್ತು ಕೃತಿ ಕುರಿತಂತೆ ಒಂದು ಸಾಲಿನ ಅಭಿಪ್ರಾಯವನ್ನು ಈ ಸಂಚಿಕೆ ಒಳಗೊಂಡಿರುತ್ತದೆ' ಎಂದು ಅವರುವಿವರಿಸಿದರು.
`ಸೆ. 28 ಮತ್ತು 29ರಂದು ಕೂಡಲಸಂಗಮದಲ್ಲಿ ವಚನ ಸಾಹಿತ್ಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಅಲ್ಲಿಯೇ ಕಸಾಪದ ಕಾರ್ಯಕಾರಿಣಿ ಸಭೆ ಕೂಡ ನಡೆಯಲಿದೆ. ಪರಿಷತ್ತಿನ ನಿಬಂಧನೆಗಳಿಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಪ್ರಸ್ತಾವಗಳನ್ನು ಕಾರ್ಯಕಾರಿಣಿ ಮುಂದಿಟ್ಟು ಒಪ್ಪಿಗೆ ಪಡೆಯಲಾಗುವುದು' ಎಂದರು.
`ರಾಜ್ಯೋತ್ಸವದ ಅಂಗವಾಗಿ ಈ ಸಲ ನವೆಂಬರ್ ತಿಂಗಳಿನಲ್ಲಿ ನವೋದಯ ಕವಿಗಳ ಕುರಿತು ಉಪನ್ಯಾಸ ಮತ್ತು ಅವರ ಕಾವ್ಯಗಳ ಗಾಯನ ಕಾರ್ಯಕ್ರವನ್ನು ಎಲ್ಲ ಜಿಲ್ಲೆಗಳಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬದುಕು-ಬರಹ ಕುರಿತಂತೆ ಚಿಂತನ-ಮಥನ ನಡೆಸಲು ಡಿಸೆಂಬರ್‌ನಲ್ಲಿ ಮೂರು ದಿನಗಳ ಸಮಾವೇಶ ನಡೆಸಲಾಗುತ್ತದೆ' ಎಂದು ಮಾಹಿತಿ ನೀಡಿದರು.
`ಡಾ.ರಾಜ್ ಸಂಸ್ಕೃತಿ' ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನಿಂದ `ಡಾ.ರಾಜಕುಮಾರ್ ಸಂಸ್ಕೃತಿ ಪ್ರಶಸ್ತಿ' ಆರಂಭಿಸಲಾಗಿದ್ದು, ಈ ಪ್ರಶಸ್ತಿಯನ್ನು ಸಿನಿಮಾ ಕ್ಷೇತ್ರದ ಸಾಧಕರಿಗೆ ಮುಂದಿನ ಸಾಲಿನಿಂದ ಪ್ರತಿವರ್ಷ ನೀಡಲಾಗುತ್ತದೆ. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
`ಡಾ. ರಾಜಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ, ಪ್ರಶಸ್ತಿ ಮೊತ್ತವಾದ ರೂ. 1 ಲಕ್ಷವನ್ನು ಪರಿಷತ್ತಿನ ದತ್ತಿನಿಧಿಗೆ ದೇಣಿಗೆ ನೀಡಿದ್ದರು. ಅವರ ಪತ್ನಿ ಪಾರ್ವತಮ್ಮನವರು ಈಗ ಹೆಚ್ಚುವರಿಯಾಗಿ ರೂ.4 ಲಕ್ಷ ನೀಡಿದ್ದಾರೆ. ಇದರಿಂದ ಬರುವ ಬಡ್ಡಿ ಹಣದಿಂದ ಪ್ರಶಸ್ತಿ ನೀಡಲಾಗುತ್ತದೆ' ಎಂದು ಹೇಳಿದರು.
`ಪ್ರಶಸ್ತಿಯು ರೂ.30,000 ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಕಸಾಪ ಅಧ್ಯಕ್ಷರ ನೇತೃತ್ವದ ಆಯ್ಕೆ ಸಮಿತಿಯು ಪ್ರಶಸ್ತಿಗೆ ಭಾಜನರಾಗುವ ಸಾಧಕರನ್ನು ಆಯ್ಕೆ ಮಾಡಲಿದೆ. ಡಾ. ರಾಜಕುಮಾರ್ ಅವರ ಜನ್ಮ ದಿನವಾದ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ' ಎಂದು ತಿಳಿಸಿದರು.
`ದತ್ತಿ ದಾನ ಮಾಡಿರುವ ಪಾರ್ವತಮ್ಮ ಮತ್ತು ಅವರ ಕುಟುಂಬ, ಅದಕ್ಕೆ ಸಹಕರಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಕಸಾಪ ಕೃತಜ್ಞತೆ ಅರ್ಪಿಸುತ್ತದೆ' ಎಂದರು. `ಪರಿಷತ್ತಿನಲ್ಲಿ ಒಟ್ಟು 1,350 ದತ್ತಿನಿಧಿಗಳಿದ್ದು, ಕೆಲವು ಪ್ರಕಟಣೆಗೆ ಮೀಸಲಾದರೆ, ಹಲವು ಪ್ರಶಸ್ತಿ ನೀಡಲು ಮೀಸಲಾಗಿವೆ' ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.