ADVERTISEMENT

ಸಾಹಿತ್ಯ ಪ್ರಕಾಶನದಿಂದ ಹೊಸ ಪ್ರಯೋಗ

ಕೆ.ಎಸ್‌. ನಾರಾಯಣಾಚಾರ್ಯರ ಪುಸ್ತಕಗಳನ್ನು ಕೊಂಡರೆ, ಕಪಾಟು ಉಚಿತ

ಗುರು ಪಿ.ಎಸ್‌
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ನಾರಾಯಣಾಚಾರ್ಯ ಅವರ ಪುಸ್ತಕಗಳೊಂದಿಗೆ ನೀಡುವ ಕಪಾಟಿನ ಮಾದರಿ
ನಾರಾಯಣಾಚಾರ್ಯ ಅವರ ಪುಸ್ತಕಗಳೊಂದಿಗೆ ನೀಡುವ ಕಪಾಟಿನ ಮಾದರಿ   

ಹುಬ್ಬಳ್ಳಿ: ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಪುಸ್ತಕಗಳನ್ನು ಕೊಂಡವರಿಗೆ, ಅವುಗಳನ್ನು ಇಟ್ಟುಕೊಳ್ಳಲು ಕಪಾಟನ್ನು ಉಚಿತವಾಗಿ ಕೊಡುವ ಮೂಲಕ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಸಂಸ್ಥೆ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ.

‘ನಾರಾಯಣಾಚಾರ್ಯ ಅವರು, ರಾಮಾಯಣ, ಮಹಾಭಾರತ ಹಾಗೂ ಭಾಗವತ ಆಧಾರಿತ ಕಥಾನಕಗಳು, ರಾಷ್ಟ್ರೀಯತೆ ಮತ್ತು ರಾಜಕೀಯ ವಿಶ್ಲೇಷಣಾತ್ಮಕ ಬರಹಗಳು ಸೇರಿದಂತೆ 90ರಿಂದ 95 ಪುಸ್ತಕಗಳನ್ನು ಬರೆದಿದ್ದಾರೆ. ಆ ಎಲ್ಲ ಪುಸ್ತಕಗಳ ಒಟ್ಟು ಮೌಲ್ಯ ₹20,000ಕ್ಕಿಂತ ಹೆಚ್ಚಾಗುತ್ತದೆ. ಈ ನಿಟ್ಟಿನಿಂದ ₹20,000 ನೀಡಿ ಎಲ್ಲ ಪುಸ್ತಕ ಖರೀದಿಸಿದವರಿಗೆ, ₹8,000 ಮೌಲ್ಯದ ಕಪಾಟನ್ನೂ ಉಚಿತವಾಗಿ ನೀಡುತ್ತಿದ್ದೇವೆ’ ಎಂದು ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಹೇಳಿದರು.

‘ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಗೋಕರ್ಣ, ಯಲ್ಲಾಪುರ ಸೇರಿದಂತೆ ರಾಜ್ಯದ ವಿವಿಧ ಕಡೆಗೆ ಈಗಾಗಲೇ 35 ಸಂಸ್ಥೆ, ವ್ಯಕ್ತಿಗಳಿಗೆ ಪುಸ್ತಕಗಳನ್ನು ಕಪಾಟಿನೊಂದಿಗೆ ನೀಡಲಾಗಿದೆ. ಕಪಾಟು ಮಾಡುವ ಶಫಿ ಎಂಬುವರಿಗೂ ಇದರಿಂದ ಪೂರ್ಣ ಉದ್ಯೋಗ ಸಿಕ್ಕಂತಾಗಿದೆ’ ಎಂದು ಹೇಳಿದರು.

ADVERTISEMENT


ಪ್ರೊ. ಕೆ.ಎಸ್. ನಾರಾಯಣಾಚಾರ್ಯ

‘ಪುಸ್ತಕಗಳನ್ನು ಬಿಡಿಬಿಡಿಯಾಗಿ ನೀಡಿದರೆ ಕಳೆದುಹೋಗಬಹುದು ಅಥವಾ ಹರಿಯಬಹುದು. 3 ಅಡಿ ಅಗಲ, 4 ಅಡಿ ಎತ್ತರದ ಈ ಕಪಾಟಿನೊಂದಿಗೆ ನೀಡಿದರೆ ಕನಿಷ್ಠ ಶೇ 50ರಷ್ಟು ಪುಸ್ತಕಗಳಾದರೂ ಕೊನೆಯವರೆಗೆ ಇರುತ್ತವೆ’ ಎಂದು ಅವರು ಹೇಳಿದರು.

‘ಕನ್ನಡದ ಯಾವ ಲೇಖಕರಿಗೂ ಈ ರೀತಿಯ ಗೌರವ ಸಿಕ್ಕಿಲ್ಲ. ಅದೇ ರೀತಿ, ಪ್ರಕಾಶನವೊಂದು ಮಾಡಿದ ಹೊಸ ಪ್ರಯೋಗ ಇದು’ ಎಂದೂ ಅವರು ಹೇಳಿದರು.

‘ರೈತ ಬಸವರಾಜ ಬ್ಯಾಳಿಹಾಳ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ಗುರುರಾಜ ರೋಣದ ಎಂಬುವರು ಮೊದಲು ಈ ಪ್ರಯೋಗ ಮಾಡಿದರು. ನಾರಾಯಣಾಚಾರ್ಯ ಅವರ ಅಭಿಮಾನಿಯಾಗಿರುವ ಈ ಇಬ್ಬರು, ಅವರ ಪುಸ್ತಕಗಳನ್ನು ಶಾಲೆ, ಮಠ ಅಥವಾ ಆಶ್ರಮಗಳಿಗೆ ಉಚಿತವಾಗಿ ನೀಡಿದ್ದಾರೆ. ಪುಸ್ತಕಗಳ ಜೊತೆಗೆ ಕಪಾಟನ್ನೂ ಇವರು ಮಾಡಿಸಿಕೊಟ್ಟಿದ್ದರು. ಇದನ್ನೇ ಸ್ಫೂರ್ತಿಯಾಗಿಸಿಕೊಂಡು ನಾನೂ ಈ ಪ್ರಯೋಗ ಕೈಗೆತ್ತಿಕೊಂಡಿದ್ದೇನೆ’ ಎಂದು ಸುಬ್ರಹ್ಮಣ್ಯ ಹೇಳಿದರು.

‘ಪುಸ್ತಕಗಳನ್ನು ಓದಲು ನಮಗೆ ಸಮಯ ಸಿಗುವುದಿಲ್ಲ. ಸಮಯ ಇದ್ದವರಿಗಾದರೂ ಓದಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಸ್ಥೆಗಳಿಗೆ ನೀಡುತ್ತಿದ್ದೇವೆ. ದುಡಿಮೆಯ ಸ್ವಲ್ಪ ಹಣವನ್ನು ನಾನು ಮತ್ತು ಬಸವರಾಜ ಬ್ಯಾಳಿಹಾಳ ಇದಕ್ಕಾಗಿ ವಿನಿಯೋಗಿಸುತ್ತಿದ್ದೇವೆ’ ಎಂದು ಗುರುರಾಜ ರೋಣದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.