ಕುಮಟಾ (ಉತ್ತರ ಕನ್ನಡ): ‘ಬರಹಗಾರರಾದ ನಾವೆಲ್ಲ, ಹಳಗನ್ನಡದಲ್ಲೂ ಅರ್ಥವಾಗುವಂತೆ ಪಂಪ ಹೇಳಿರುವ ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಪಂಪ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಸಾಹಿತಿ, ಕವಿ ಡಾ.ಬಿ.ಎ. ಸನದಿ ಪ್ರತಿಕ್ರಿಯಿಸಿದ್ದಾರೆ.
‘ಮುಂಬೈನಲ್ಲಿ ಹಲವಾರು ವರ್ಷ ನಾನು ಕೆಲಸ ಮಾಡಿದ್ದರಿಂದ ಅಲ್ಲಿಯ ವಿಶ್ವವಿದ್ಯಾಲಯ, ಕನ್ನಡ ಸಂಘದೊಂದಿಗೆ ಇಂದಿಗೂ ನನ್ನ ಸಂಪರ್ಕವಿದೆ. ಈ ಪ್ರಶಸ್ತಿಯ ಶ್ರೇಯದ ಪಾಲು ಅಲ್ಲಿಗೂ ಸಲ್ಲುತ್ತದೆ. ಈ ಪ್ರಶಸ್ತಿಗೆ ಸಾಹಿತ್ಯ ವಲಯದಲ್ಲಿ ನಾನು ಗಳಿಸಿರುವ ಪ್ರೀತಿ ಮುಖ್ಯ ಕಾರಣ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸನದಿ ಪರಿಚಯ: ಬಾಬಾಸಾಹೇಬ ಅಹ್ಮದ್‌ಸಾಹೇಬ ಸನದಿ (83) ಮೂಲತಃ ಬೆಳಗಾವಿ ಜಿಲ್ಲೆಯ ಸಿಂದೊಳ್ಳಿ ಗ್ರಾಮದವರು.
ಬಡ ಕೃಷಿಕ ಕುಟುಂಬದಿಂದ ಬಂದ ಅವರು 1964ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರದ ಬೇತಕಿಹಾಳ ಹಾಗೂ ಶಮನೆವಾಡಿ ಗಡಿ ಪ್ರದೇಶದ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್, ಭೂಗೋಳ ಶಿಕ್ಷಕರಾಗಿ ಕೆಲಸ ಆರಂಭಿಸಿದರು.
ಮುಂದೆ ಬೆಳಗಾವಿಯ ರಾಯಬಾಗದಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಕಲಬುರ್ಗಿಯಲ್ಲಿ ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿಯಾಗಿ, ಅದೇ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಗುಜರಾತಿನಲ್ಲೂ ಕೆಲಸ ಮಾಡಿದರು.
1972ರಲ್ಲಿ ಆಕಾಶವಾಣಿ (ಎಐಆರ್) ಸೇರಿ ಮುಂಬೈನಲ್ಲಿ ಕೆಲಸ ಮಾಡಿದರು. ಮುಂಬೈ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುವಾಗ ಮುಂಬೈ ವಿ.ವಿಯ ಕನ್ನಡ ವಿಭಾಗದ ಜೊತೆಯೂ ನಂಟು ಬೆಳೆಯಿತು. ಆಕಾಶವಾಣಿಯಿಂದ 1991ರಲ್ಲಿ ನಿವೃತ್ತರಾದ ನಂತರ ಸುಮಾರು 12 ವರ್ಷ ಮುಂಬೈನಲ್ಲಿ ನೆಲೆಸಿ, ಕನ್ನಡಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 2003ರಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿಯೇ ನೆಲೆಸಿದ್ದಾರೆ.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸುಮಾರು 60 ಕೃತಿ ರಚಿಸಿರುವ ಅವರ 80ನೇ ವಯಸ್ಸಿಗೆ ‘ 80ರ ಪಯಣ’ ಅಭಿನಂದನಾ ಗ್ರಂಥ ಪ್ರಕಟವಾಗಿದೆ.
ಕೃತಿಗಳು
1957ರಲ್ಲಿ ಶಿಕ್ಷಕರಾಗಿ ಕೆಲಸ ಮಾಡುವಾಗಲೇ ಸನದಿ ಅವರ ಮೊದಲ ಕವನ ಸಂಕಲನ ‘ಆಶಾಕಿರಣ’ ಪ್ರಕಟವಾಯಿತು. ನಂತರ ‘ನೆಲಸಂಪಿಗೆ’ ‘ಧ್ರುವ ಬಿಂದು’ ‘ಪ್ರತಿಬಿಂಬ’ ಸೇರಿ 20 ಕವನ ಸಂಕಲ ಬಂದಿವೆ. 7 ವಿಮರ್ಶಾ ಕೃತಿ, 7 ಸಂಪಾದಿತ ಕೃತಿ, 8 ಮಕ್ಕಳ ನಾಟಕಗಳು, 3 ಕಥಾ ಸಂಕಲನ ಪ್ರಕಟಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.