ADVERTISEMENT

ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಚರ್ಚೆ ಆರಂಭ

ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರದ ಲಕ್ಷಣ, ರೈತರ ಸರಣಿ ಆತ್ಮಹತ್ಯೆ ಕಾರಣ

ಶಶಧರ ಗರ್ಗೇಶ್ವರಿ
Published 4 ಆಗಸ್ಟ್ 2015, 19:34 IST
Last Updated 4 ಆಗಸ್ಟ್ 2015, 19:34 IST

ರಾಯಚೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರದ ಛಾಯೆ ಹಾಗೂ ರೈತರ ಸರಣಿ ಆತ್ಮಹತ್ಯೆಗಳಿಂದಾಗಿ ನಗರದಲ್ಲಿ ಅಕ್ಟೋಬರ್‌ 9 ರಿಂದ 11ರ ವರೆಗೆ ನಡೆಸಲು ನಿರ್ಧರಿಸಿರುವ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕು ಎಂಬ ಚರ್ಚೆಯು ಇದೀಗ ಸಾಹಿತ್ಯಕ, ರಾಜಕೀಯ, ಕನ್ನಡ ಪರ ಮತ್ತು ರೈತ ಸಂಘಟನೆಗಳಲ್ಲಿ ಆರಂಭವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಹತ್ತು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆ ಆಗಿರುವ ಜಿಲ್ಲೆಗಳ ಪೈಕಿ ರಾಯಚೂರು ಮೊದಲ ಸ್ಥಾನದಲ್ಲಿದೆ. ಅನ್ನದಾತ ಸಂಕಷ್ಟದಲ್ಲಿ ಇರುವಾಗ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಸುವ ಅಗತ್ಯವಿದೆಯೇ ಎಂಬ ಮಾತು  ವ್ಯಾಪಕವಾಗಿ ಕೇಳಿಬರುತ್ತಿದೆ.

ಈ ಮಾತನ್ನು ಮೊದಲಿಗೆ ಬಹಿರಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ಆಡಿದೆ. ಸಂಘದ ಅಧ್ಯಕ್ಷ  ಚಾಮರಸ ಮಾಲಿಪಾಟೀಲ ಅವರು ‘ಅಕ್ಟೋಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಸಾಹಿತ್ಯ ಸಮ್ಮೇಳನವನ್ನು ಬರ ಮತ್ತು ರೈತರ ಆತ್ಮಹತ್ಯೆ ಕಾರಣ ಮುಂದೂಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಸದ್ಯದ ಸ್ಥಿತಿಯಲ್ಲಿ ಸಮ್ಮೇಳನಕ್ಕಿಂತ ಸಂಕಷ್ಟದಲ್ಲಿರುವ ರೈತರ ಬದುಕು ಮುಖ್ಯ. ಆದ್ದರಿಂದ ಸಮ್ಮೇಳನವನ್ನು ಕೆಲವು ಕಾಲ ಮುಂದೂಡುವುದು ಒಳಿತು’ ಎಂದಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲಿಕ ಹಾಲಂಬಿ ಅವರ ಅವಧಿ (ಆರು ತಿಂಗಳು ವಿಸ್ತರಣೆ) ನವೆಂಬರ್‌ಗೆ ಮುಕ್ತಾಯವಾಗುತ್ತದೆ. ಅಷ್ಟರಲ್ಲಿ ಸಮ್ಮೇಳನ ನಡೆಸುವ ಉದ್ದೇಶ ಕೇಂದ್ರ ಸಾಹಿತ್ಯ ಪರಿಷತ್‌ಗೆ ಇರುವಂತೆ ಕಾಣುತ್ತಿದೆ. ಆದ್ದರಿಂದಲೇ ಈ ಸಾರಿ ಅಕ್ಟೋಬರ್‌ನಲ್ಲಿ ದಿನಾಂಕ ನಿಗದಿ ಮಾಡಲಾಗಿದೆ’ ಎಂಬ ಅಭಿಪ್ರಾಯವನ್ನು ಹೆಸರು ಹೇಳಲು ಬಯಸದ ಜಿಲ್ಲೆಯ ಕೆಲವು ಸಾಹಿತಿಗಳು ವ್ಯಕ್ತಪಡಿಸುತ್ತಾರೆ.

‘ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್‌ನಲ್ಲಿ ನಡೆಸಬೇಕೇ ಅಥವಾ ಮುಂದೂಡಬೇಕೇ ಎಂಬ ಬಗ್ಗೆ ನನಗೆ ದ್ವಂದ್ವ ಇದೆ. ಈ ಬಗ್ಗೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿ ಚರ್ಚೆ ನಡೆದು ತೀರ್ಮಾನ ಕೈಗೊಳ್ಳುವುದು ಸೂಕ್ತ’ ಎಂದು ಜನಸಂಗ್ರಾಮ ಪರಿಷತ್‌ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳುತ್ತಾರೆ.

‘ಬದುಕನ್ನು ಬಿಟ್ಟು ಯಾವುದೇ ಸಾಹಿತ್ಯ ಇಲ್ಲ. ಈಗ ರೈತರ, ಕೃಷಿ ಕಾರ್ಮಿಕರ ಬದುಕು ದುರ್ಬರ ಸ್ಥಿತಿಯಲ್ಲಿದೆ. ರೈತರ ಆತ್ಮಹತ್ಯೆಯಿಂದ ಸೂತಕದ ವಾತಾವರಣ ಇರುವಾಗ ಸಾಹಿತ್ಯ ವಿಜೃಂಭಿಸುವುದು ಶೋಭೆಯಲ್ಲ. ಆದ್ದರಿಂದ ಸಮ್ಮೇಳನವನ್ನು ಜನವರಿ ಇಲ್ಲವೆ ಫೆಬ್ರುವರಿಗೆ ಮುಂದೂಡುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎನ್ನುತ್ತಾರೆ ಐಐಟಿ ಮಂಜೂರಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸದ.

ಜಲ್ವಂತ ಸಮಸ್ಯೆಗೆ ವೇದಿಕೆಯಾಗಲಿ: ಬರ ಮತ್ತು ರೈತರ ಆತ್ಮಹತ್ಯೆ ಕಾರಣ ರಾಷ್ಟ್ರೀಯ ಹಬ್ಬಗಳು, ಹಬ್ಬ– ಹರಿದಿನಗಳ ಆಚರಣೆ ನಿಲ್ಲಿಸುತ್ತಾರೆಯೇ? ಬಿಬಿಎಂಪಿ ಚುನಾವಣೆ ನಿಲ್ಲುತ್ತದೆಯೇ? ಎಂಬ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ.

‘ರೈತರ ಆತ್ಮಹತ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾದ ಶಾಸನಸಭೆಗಳಿಗೆ ಮುತುರ್ವಜಿ ಇಲ್ಲವಾಗಿದೆ. ವಿಶ್ವವಿದ್ಯಾಲಯಗಳು ಇತ್ತ ಗಮನ ನೀಡಿಲ್ಲ. ಇಂತಹ ಹೊತ್ತಿನಲ್ಲಿ ಬೌದ್ಧಿಕ ವಲಯ ಒಂದೆಡೆ ಸೇರುವ ಸಾಹಿತ್ಯ ಸಮ್ಮೇಳನದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಅದ್ದೂರಿ ಎಂಬುದನ್ನು ಬಿಟ್ಟು, ರೈತರ ಸಮಸ್ಯೆಗಳಿಗೆ ಪರಿಹಾರೋಪಾಯ ಹುಡುಕುವ ಚರ್ಚೆಗೆ ಸಮ್ಮೇಳನ  ವೇದಿಕೆಯಾಗಬೇಕು. ಆದ್ದರಿಂದ ನಿಗದಿತ ದಿನಾಂಕದಲ್ಲಿ ಸಮ್ಮೇಳನ ನಡೆಯಬೇಕು’ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ.ರಜಾಕ್‌ ಉಸ್ತಾದ್‌ ಹೇಳುತ್ತಾರೆ.
***
ಸಮ್ಮೇಳನಕ್ಕೆ ಇನ್ನೂ 2 ತಿಂಗಳ ಸಮಯವಿದೆ. ಅಷ್ಟರಲ್ಲಿ ಮಳೆ ಆಗಿ, ರೈತರಲ್ಲಿ ಮಂದಹಾಸ ಮೂಡಿ ನಿಗದಿತ ದಿನಾಂಕದಲ್ಲಿ ಸಮ್ಮೇಳನ ಸುಸೂತ್ರವಾಗಿ ನಡೆಯಲಿದೆ ಎಂಬ ಆಶಾಭಾವನೆ ಇದೆ.
-
ಮಹಾಂತೇಶ ಮಸ್ಕಿ, ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.