ADVERTISEMENT

ಸಾಹಿತ್ಯ ಸಮ್ಮೇಳನ: ಲಾಡ್ಜ್‌, ಹೋಟೆಲ್‌ಗಳು ಭರ್ತಿ

ಶಶಿಧರ ಗರ್ಗಶ್ವೇರಿ
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ಸಾಹಿತ್ಯ ಸಮ್ಮೇಳನ: ಲಾಡ್ಜ್‌, ಹೋಟೆಲ್‌ಗಳು ಭರ್ತಿ
ಸಾಹಿತ್ಯ ಸಮ್ಮೇಳನ: ಲಾಡ್ಜ್‌, ಹೋಟೆಲ್‌ಗಳು ಭರ್ತಿ   

ರಾಯಚೂರು: ಡಿ.2ರಿಂದ 4 ರ ವರೆಗೆ ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದ 30ಕ್ಕೂ ಹೆಚ್ಚು ಲಾಡ್ಜ್‌ ಮತ್ತು ಹೋಟೆಲ್‌ಗಳ ಕೊಠಡಿಗಳನ್ನು ಜಿಲ್ಲಾಡಳಿತ ಕಾಯ್ದಿರಿಸಿದೆ. ಹೀಗಾಗಿ ‘ರೂಂ ಖಾಲಿ ಇಲ್ಲ’ ಎಂಬ ಉತ್ತರ ಲಾಡ್ಜ್‌ ಮತ್ತು ಹೊಟೇಲ್‌ನವರಿಂದ ಸಿಗುತ್ತಿದೆ.

ಜಿಲ್ಲಾಡಳಿತ ಹೋಟೆಲ್‌ ಮತ್ತು ಲಾಡ್ಜ್‌ಗಳಿಂದ 478 ಕೊಠಡಿಗಳನ್ನು ಪಡೆದುಕೊಂಡಿದೆ. ಉಳಿದ ಕೊಠಡಿಗಳನ್ನು ಸಮ್ಮೇಳನಕ್ಕೆ ಬರುವವರು ಕಾಯ್ದಿರಿಸಿದ್ದಾರೆ. ಇಷ್ಟು ಮಾತ್ರವಲ್ಲ’ ನಗರದಿಂದ 20 ಕಿಲೊಮೀಟರ್‌ ದೂರದ ಶಕ್ತಿನಗರದಲ್ಲಿನ ಕೆಪಿಸಿಎಲ್‌ನ ಎರಡು ಅತಿಥಿಗೃಹಗಳ ನೂರು ಕೊಠಡಿಗಳನ್ನು ಸಹ ಕಾಯ್ದಿರಿಸಲಾಗಿದೆ.

ಶಕ್ತಿನಗರ– ದೇವಸೂಗೂರುಗಳಲ್ಲಿ ಆರು ಹೋಟೆಲ್‌ ಮತ್ತು ಲಾಡ್ಜ್‌ಗಳಿವೆ. ಸಾಮಾನ್ಯ ದಿನಗಳಲ್ಲಿ ಇಲ್ಲಿನ ಕೊಠಡಿಗಳು ಖಾಲಿ ಇರುತ್ತವೆ. ಆದರೆ ಈಗ ಅವೂ ಭರ್ತಿಯಾಗಿವೆ. ಜಿಲ್ಲಾಡಳಿತ ಎಲ್ಲವುಗಳನ್ನು ಪಡೆದುಕೊಂಡಿದ್ದು, ‘ರೂಂಗಳು ಖಾಲಿ ಇಲ್ಲ’ ಎಂದು ಜಿಲ್ಲಾಡಳಿತವೇ ಫಲಕ ಹಾಕಿಸಿದೆ.
ರಾಯಚೂರಿನಿಂದ 40 ಕಿಲೊಮೀಟರ್‌ ದೂರದಲ್ಲಿರುವ ಮಂತ್ರಾಲಯದಲ್ಲೂ ಕೆಲವರು ಶ್ರೀಮಠದ ವಸತಿಗೃಹಗಳನ್ನು ಕಾಯ್ದಿರಿಸಿದ್ದಾರೆ.

‘ಸಾಹಿತ್ಯ ಸಮ್ಮೇಳನಕ್ಕೆ ಬರುವವರು ಕೊಠಡಿಗಳಿಗೆ ವಿಚಾರಿಸುತ್ತಿದ್ದಾರೆ. ಆದರೆ, ಕೊಠಡಿಗಳು ಖಾಲಿ ಇಲ್ಲ. ನಮ್ಮಲ್ಲಿ 60 ಕೊಠಡಿಗಳಿದ್ದು, ಅವುಗಳಲ್ಲಿ 45 ಅನ್ನು ಅತಿಥಿಗಳ ವಸತಿಗಾಗಿ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಆದರೆ, ಕಾಯಂ ಆಗಿ ಕೊಠಡಿಗಳಲ್ಲಿ ನೆಲೆಸಿರುವ ಗ್ರಾಹಕರಿಗೆ ಖಾಲಿ ಮಾಡುವಂತೆ ಹೇಳಲಾಗದು. ಕೊಠಡಿ ವಿಚಾರಿಸಿಕೊಂಡು ಬರುವವರಿಗೆ/ಕರೆ ಮಾಡುವವರಿಗೆ  ಖಾಲಿ ಇಲ್ಲ ಎಂದು ಅನಿವಾರ್ಯವಾಗಿ ಹೇಳುತ್ತಿದ್ದೇವೆ’ ಎಂದು ನಗರದ ನೃಪತುಂಗ ಹೋಟೆಲ್‌ನ ಮಾಲೀಕರಲ್ಲಿ ಒಬ್ಬರಾದ ರಾಮಚಂದ್ರ ಪ್ರಭು ಹೇಳಿದರು.

‘ಸಾಹಿತ್ಯ ಸಮ್ಮೇಳನ ನಮ್ಮೂರ ಹಬ್ಬ. ನಮ್ಮ ಹೊಟೇಲ್‌ನ ಶೇ 80ರಷ್ಟು ಕೊಠಡಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಉಳಿದವುಗಳಲ್ಲಿ ಕಾಯಂ ಗ್ರಾಹಕರು ಇದ್ದಾರೆ. ಮಿಕ್ಕ ಬೆರಳೆಣಿಕೆಯಷ್ಟು ಕೊಠಡಿಗಳು ಸಹ ಈಗಾಗಲೇ ಕಾಯ್ದಿರಿಸಲಾಗಿದೆ’ ಎಂದು ಕುಬೇರ ಹೋಟೆಲ್‌ನ ಮಾಲೀಕ ಈ.ಆಂಜನೇಯ ತಿಳಿಸಿದರು.

ವೇದಿಕೆ ನಿರ್ಮಾಣಕ್ಕೆ ಈಶಾನ್ಯ ರಾಜ್ಯದ ಕಾರ್ಮಿಕರು: ಸಮ್ಮೇಳನದ ಪ್ರಧಾನ ವೇದಿಕೆ, ಸಭಾಂಗಣ, ಮಳಿಗೆ ಮತ್ತು ಭೋಜನ ಶಾಲೆಯ ಪೆಂಡಾಲ್‌ ನಿರ್ಮಾಣ ಕಾರ್ಯದಲ್ಲಿ ರಾಜ್ಯದವರೂ ಸೇರಿದಂತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ ಮತ್ತು ಪಶ್ವಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡಿನ ಕಾರ್ಮಿಕರು ದುಡಿಯುತ್ತಿದ್ದಾರೆ.

‘ವೇದಿಕೆ ಮತ್ತು ಸಭಾಂಗಣ ನಿರ್ಮಾಣದ ಗುತ್ತಿಗೆಯನ್ನು ರಾಜ ಎಂಟರ್‌ಪ್ರೈಸಸ್‌ಗೆ ನೀಡಲಾಗಿದ್ದು, ಈ ಸಂಸ್ಥೆಯಡಿ ಸ್ಥಳೀಯರು 150, ಈಶಾನ್ಯ ರಾಜ್ಯಗಳ ಹಲವರು ಸೇರಿದಂತೆ 150 ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ’ ಎಂದು ಸಭಾ ಮಂಟಪದ ನಿರ್ಮಾಣ ಹೊಣೆ ವಹಿಸಿಕೊಂಡಿರುವ ಸಂಸ್ಥೆಯ ಅಧಿಕಾರಿ ಆರ್‌.ಅನಿಲಕುಮಾರ ತಿಳಿಸಿದರು.

*
ಜಿಲ್ಲಾಡಳಿತದ ಸೂಚನೆಯಂತೆ ನಮ್ಮ ಲಾಡ್ಜ್‌ನ ಎಲ್ಲ ಕೊಠಡಿಗಳನ್ನು ಬಿಟ್ಟುಕೊಟ್ಟಿದ್ದೇವೆ. ಹೀಗಾಗಿ ‘ಇಲ್ಲಿ ರೂಂ ಖಾಲಿ ಇಲ್ಲ’ ಎಂಬ ಫಲಕ ಹಾಕಿದ್ದೇವೆ.
-ರಾಕೇಶ್‌, ರಾಕೇಶ್‌, ಶ್ರದ್ಧಾ ಇನ್‌ ಲಾಡ್ಜ್‌ನ ಸಹ ಮಾಲೀಕ, ಶಕ್ತಿನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT