ಕಲಬುರ್ಗಿ: ‘ರಾಜ್ಯದಲ್ಲಿ ನಾವು ಎದುರಿಸುತ್ತಿರುವುದು ಉಪ ಚುನಾವಣೆ ಮಾತ್ರ. ಈಗ ಮುಖ್ಯಮಂತ್ರಿ ಆಯ್ಕೆಯೇನೂ ನಡೆಯುತ್ತಿಲ್ಲ. ಹಾಗಾಗಿ, ಲೋಕಾಭಿರಾಮವಾಗಿ ಯಾರೇ ಏನೇ ಹೇಳಿದರೂ ಅದಕ್ಕೆ ವಿಶೇಷ ಅರ್ಥ ಕಲ್ಪಸಬೇಕಿಲ್ಲ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
‘ಕಾಂಗ್ರೆಸ್‌ನಲ್ಲಿ ನನ್ನನ್ನೂ ಸೇರಿಸಿ ಬಹಳ ಮಂದಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿದ್ದೇವೆ. ಅದೇನು ತಪ್ಪಲ್ಲವಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಕುಮಾರಸ್ವಾಮಿ ಅವರು ಅಭಿಮಾನದಿಂದ ಹೇಳಿದ್ದಾರೆ. ಅದೇ ರೀತಿ, ಎಚ್.ಡಿ.ರೇವಣ್ಣ ಕೂಡ ಮುಖ್ಯಮಂತ್ರಿ ಆಗಬಲ್ಲರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಷ್ಟೇ’ ಎಂದು ಪ್ರತಿಕ್ರಿಯಿಸಿದರು.
‘ಮೊನ್ನೆ ಡಿ.ಕೆ.ಶಿವಕುಮಾರ್ ಕೂಡ ನಾನೇನು ಸನ್ಯಾಸಿ ಆಗಲು ಬಂದಿದ್ದೇನೆಯೇ ಎಂದು ಮಾತನಾಡಿದ್ದಾರೆ. ಅವರೂ ಆಕಾಂಕ್ಷಿ ಆಗಿದ್ದರೆ ತಪ್ಪೇನು? ಈಗ ಗೃಹ ಖಾತೆ ಹೊಂದಿರುವ ಎಂ.ಬಿ. ಪಾಟೀಲರನ್ನೇ ನಾಳೆ ಮುಖ್ಯಮಂತ್ರಿ ಮಾಡಿದರೆ ಅವರೇನು ಬೇಡ ಎನ್ನತ್ತಾರೆಯೇ? ಇದೆಲ್ಲ ಲೋಕಾಭಿರಾಮದ ಮಾತುಗಳು ಅಷ್ಟೇ. ಮಾಧ್ಯಮಗಳು ಗೊಂದಲ ಹುಟ್ಟಿಸಬಾರದು’ ಎಂದರು.
ಲೋಕಾಭಿರಾಮದ ಮಾತಾಗಿದ್ದರೆ ಬಹಿರಂಗವಾಗಿ ಹೇಳಬಹುದಿತ್ತು, ನೇರವಾಗಿ ಟ್ವೀಟ್ ಮಾಡುವ ಉದ್ದೇಶವೇನು? ಎಂಬ ಪ್ರಶ್ನೆಗೆ ಚುಟುಕಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ‘ಸಿದ್ದರಾಮಯ್ಯ ಹಾಗೂ ರೇವಣ್ಣ ಅವರ ನಡುವೆ ಅಷ್ಟೊಂದು ಗಾಢ ಪ್ರೀತಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.