ಶ್ರವಣಬೆಳಗೊಳ: ‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಆದರೆ, ಅದು ಇನ್ನೂ ದಕ್ಕಿಲ್ಲ’ ಎಂದು ಭಾಷಾತಜ್ಞ ಪ್ರೊ.ಷ. ಶೆಟ್ಟರ್ ವಿಶ್ಲೇಷಿಸಿದರು.
ಇಲ್ಲಿನ ಸಮಾನಂತರ ವೇದಿಕೆ ಡಾ.ಎಸ್.ಕೆ. ಕರೀಂಖಾನ್ ಮಹಾಮಂಟಪದ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ಸೋಮವಾರ ನಡೆದ ‘ಕನ್ನಡ ಶಾಸ್ತ್ರೀಯ ಭಾಷೆ– ಮುಂದಿನ ಹೆಜ್ಜೆಗಳು’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
‘ಇದಕ್ಕೆ ಕನ್ನಡಿಗರು ಕೇವಲ ಮನಸ್ಸು ಮಾಡಿದರೆ ಸಾಲದು, ಶ್ರದ್ಧೆಯಿಂದ ದುಡಿಯಬೇಕು. ಆಗ ಮಾತ್ರ ಶಾಸ್ತ್ರೀಯ ಸ್ಥಾನಮಾನದ ಪ್ರಯೋಜನಗಳು ನಮ್ಮನ್ನು ಮುಟ್ಟುತ್ತವೆ’ ಎಂದು ತಿಳಿಸಿದರು.
ಸಂಸ್ಕೃತವು ಅಂದುಕೊಂಡಷ್ಟು ಹಳತಲ್ಲ!: ‘ಭಾರತದಲ್ಲಿ ಮೊದಲು ಬರವಣಿಗೆಗೆ ಬಂದ ಭಾಷೆ ಪ್ರಾಕೃತ. ಇದು ಕ್ರಿ.ಪೂ. 3ನೇ ಶತಮಾನದಷ್ಟು ಹಳೆಯದು. ಇದಕ್ಕೂ ಮುಂಚೆ ಪಾಲಿ, ಮಾಗದಿ ಮೊದಲಾದ ಭಾಷೆಗಳಿದ್ದರೂ, ಅವುಗಳಿಗೆ ಲಿಪಿ ಇರಲಿಲ್ಲ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಗಾಂಧಾರ ಪ್ರದೇಶದಿಂದ ಚಿತ್ರದುರ್ಗಕ್ಕೆ ಲಿಪಿಕಾರನನ್ನು ಕಳುಹಿಸಿದ ಅಶೋಕ ಬ್ರಾಹ್ಮಿ ಲಿಪಿಯಲ್ಲಿ ಶಾಸನ ಬರೆಸಿದ’ ಎಂದು ಅವರು ಐತಿಹಾಸಿಕತೆಯನ್ನು ವಿವರಿಸಿದರು.
‘ಆ ನಂತರವಷ್ಟೇ ಸಂಸ್ಕೃತ ಬಳಕೆಗೆ ಬಂತು. ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ ಸಂಸ್ಕೃತದ ಒಂದೇ ಒಂದು ಶಾಸನ ಸಿಗುವುದಿಲ್ಲ. ನಂತರ ನಾಗರಿ ಲಿಪಿಯಲ್ಲಿ ಸಂಸ್ಕೃತವನ್ನು ಬರೆಯಲಾಯಿತು. ದೇವಭಾಷೆಯನ್ನು ಬರೆದ ಕಾರಣಕ್ಕೆ ಅದಕ್ಕೆ ದೇವನಾಗರಿ ಲಿಪಿ ಎಂಬ ಹೆಸರು ಬಂತು‘ ಎಂದು ತಿಳಿಸಿದರು.
ತಮಿಳಿಗಿಂತ ಹೆಚ್ಚಿನ ಇತಿಹಾಸ ಕನ್ನಡಕ್ಕಿದೆ: ‘ತಮಿಳಿನ ಸಂಗಂ ಸಾಹಿತ್ಯಕ್ಕೆ ತಮಿಳರು ಮಾತ್ರವಲ್ಲ ಕನ್ನಡಿಗರೂ ಕಾರಣರಾಗಿದ್ದಾರೆ. ಇದರಲ್ಲಿ ಉತ್ತರದಲ್ಲಿನ ಆನೆ ಪಳಗಿಸುವವರ ಭಾಷೆ ಅರ್ಥವಾಗದು ಎಂಬ ಮಾತು ಬರುತ್ತದೆ. ಈ ಉತ್ತರ ಎಂಬುದು ಕರ್ನಾಟಕ. ಇದಕ್ಕೆ ಸೇರಿದ ನೀಲಗಿರಿ ಪ್ರದೇಶದ ಕೊಂಕಣಿಗರು, ಬಡಗರು, ತುಳುವರ ಕಾಣಿಕೆ ಇದೆ ಎಂಬುದಕ್ಕೆ ಸಂಗಂ ಸಾಹಿತ್ಯದಲ್ಲೇ ಹಲವು ಆಧಾರ ದೊರೆಯುತ್ತವೆ. ಇವೇ ಮೊದಲಾದ ಆಧಾರಗಳ ಮೇಲೆ ತಮಿಳಿಗಿಂತ ಹೆಚ್ಚಿನ ಭಾಷಾ ಇತಿಹಾಸ ಕನ್ನಡಕ್ಕಿದೆ’ ಎಂದು ಅವರು ಪ್ರತಿಪಾದಿಸಿದರು.
ಅಂಬೆಗಾಲಿನ ನಡೆ: ‘ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ಮೇಲೆ ರಾಜ್ಯದ ರಾಜಕಾರಣಿಗಳು ಹಾಗೂ ಸಾಹಿತಿಗಳದು ಅಂಬೆಗಾಲಿನ ನಡೆಯಾಗಿದೆ’ ಎಂದು ಅವರು ಟೀಕಿಸಿದರು.
‘ಇದಕ್ಕೆ ಪ್ರತಿವರ್ಷ ಐದು ಕೋಟಿ ರೂಪಾಯಿ ಅನುದಾನ ಸಿಗುತ್ತದೆ. ದೇಶದಾದ್ಯಂತ ನೂರು ವಿವಿಗಳಲ್ಲಿ ಭಾಷಾ ಬೋಧನೆಗೆ ಅವಕಾಶ. ಪಂಡಿತರನ್ನು ಗೌರವಿಸಲು ಪ್ರತಿ ವರ್ಷ ಐದು ಲಕ್ಷ ರೂಪಾಯಿ ದೊರೆಯುತ್ತದೆ. ಆದರೆ, ಇದ್ಯಾವುದನ್ನೂ ಸಮರ್ಪಕವಾಗಿ ರಾಜ್ಯ ಬಳಸಿಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿರುವ ಶಾಸ್ತ್ರೀಯ ಭಾಷಾ ಕೇಂದ್ರಕ್ಕೆ ನಿವೇಶನ ಹುಡುಕುವಂತೆ ಕೇಂದ್ರ ಸರ್ಕಾರ ಕೇಳಿತು. ಕೇವಲ ನಿವೇಶನ ಹುಡುಕುವುದಕ್ಕೆ ನಮಗೆ ಐದು ವರ್ಷ ಬೇಕಾಯಿತು. ಈಗ ಬೆಂಗಳೂರು ವಿವಿಗೆ ಸೇರಿದ ಮೂರು ಎಕರೆ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣ’ ಎಂದು ವಿಶ್ಲೇಷಿಸಿದರು.
‘ವಿಶ್ವವಿದ್ಯಾಲಯಗಳೂ ಈ ಕುರಿತು ಅಸಡ್ಡೆಯಿಂದ ಇವೆ. ಕನ್ನಡದ ಕೆಲಸಕ್ಕೆ ನೀಡಿದ ಎರಡು ಕೋಟಿ ರೂಪಾಯಿಯನ್ನು ಕೆಲವು ವಾಪಸ್ ನೀಡಿದ್ದರೆ, ಮತ್ತೆ ಕೆಲವು ಹಳೆಯ ಪುಸ್ತಕಗಳ ಮರುಮುದ್ರಣಕ್ಕೆ ಬಳಸಿಕೊಂಡಿವೆ’ ಎಂದು ತಿಳಿಸಿದರು.
ಪಂಡಿತರು ಯಾರಿದ್ದಾರೆ?: ‘ಕನ್ನಡ ಭಾಷೆಯನ್ನು ಸಮರ್ಪಕವಾಗಿ ದುಡಿಸಿಕೊಂಡು ಮೂಲಭೂತ ಸಂಶೋಧನೆಯಾಗಬೇಕಾಗಿದೆ. ಇದಕ್ಕೆ ಪಂಡಿತರು ಯಾರಿದ್ದಾರೆ’ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.
‘ಪಂಪ, ರನ್ನ ಮೊದಲಾದ ಹಳೆಯ ಕವಿಗಳು ನಮಗೆ ಕೇವಲ ಭಾಷಣಕ್ಕಾಗಿ ಮಾತ್ರ ಬೇಕಾಗಿದ್ದಾರೆಯೇ ಹೊರತು ಓದಿಗೆ ಬೇಕಿಲ್ಲ. ಈಗಿನ ತಲೆಮಾರೂ ಹಳಗನ್ನಡದತ್ತ ವಾಲುತ್ತಿಲ್ಲ. ಹಿರಿಯರಾದ ನಾವೂ ಅವರಿಗೆ ಈ ಕ್ಷೇತ್ರದಲ್ಲಿ ಯಾವುದೇ ಆಕರ್ಷಣೆಯನ್ನು ಒದಗಿಸಿಕೊಟ್ಟಿಲ್ಲ’ ಎಂದು ವಿವರಿಸಿದರು.
‘ಕಠಿಣ ಕಾವ್ಯವನ್ನು ಅದರ ಶಿಸ್ತನ್ನು ಉಲ್ಲಂಘಿಸದೇ ಭಾಷಾಂತರ ಮಾಡುವ ಒಳ್ಳೆಯ ಭಾಷಾಂತರಕಾರರು ಬೇಕಾಗಿದ್ದಾರೆ. ಅಷ್ಟೇ ಅಲ್ಲ, ನಮ್ಮಲ್ಲಿನ ಸಾಹಿತ್ಯವನ್ನು ಭಾರತ ಹಾಗೂ ವಿದೇಶದ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸುವಂತಹ ಉಭಯ ಭಾಷಾ ತಜ್ಞರು ಬೇಕಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಬೇಡ
‘ಸಿಎಂಗೆ ಶಾಸ್ತ್ರೀಯ ಭಾಷಾ ಕೇಂದ್ರದ ಅಧ್ಯಕ್ಷ ಸ್ಥಾನ ಬೇಡ. ಅವರು ಎಷ್ಟೇ ಮೇಧಾವಿ ಮುಖ್ಯಮಂತ್ರಿಯಾದರೂ ಬೇಡ. ಮುಖ್ಯವಾಗಿ ರಾಜಕೀಯವನ್ನು ಇದರಿಂದ ದೂರ ಇಡಬೇಕು. ಕನ್ನಡದ ಸಾಹಿತಿಗಳು ಇದಕ್ಕಾಗಿ ಟೊಂಕ ಕಟ್ಟಿ ನಿಲ್ಲಬೇಕು’ ಎಂದು ಶೆಟ್ಟರ್ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.