ಬಾಗಲಕೋಟೆ: ತುಮಕೂರಿನಲ್ಲಿ ಸೋಮವಾರಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಅಂತಿಮ ಕ್ರಿಯಾವಿಧಿಗೆ ಬಾಗಲಕೋಟೆಯಿಂದ ಒಯ್ದ ಕ್ರಿಯಾ ವಿಭೂತಿ ಬಳಸಲಾಗಿದೆ.
ಇಲ್ಲಿನ ಟೆಂಗಿನಮಠದ ವಿಭೂತಿ ತಯಾರಕ ವೀರಯ್ಯ ಹಿರೇಮಠ ತಾವು ತಯಾರಿಸಿದ 10 ಸಾವಿರ ವಿಭೂತಿ ಗಟ್ಟಿಗಳನ್ನು ಕ್ರಿಯಾ ವಿಧಿಗೆ ಕಳುಹಿಸಿಕೊಟ್ಟಿದ್ದಾರೆ. ಸಿದ್ಧಗಂಗಾ ಮಠದ ಕಿರಿಯ ಶ್ರೀಗಳ ಸೂಚನೆಯ ಮೇರೆಗೆ ವಿಭೂತಿಗಳನ್ನು ಮಂಗಳವಾರ ಮುಂಜಾನೆ ಕೊಂಡೊಯ್ಯಲಾಗಿದೆ.
ವೀರಯ್ಯ ಹಿರೇಮಠ ಅವರು ಸಮೀಪದ ಮುಚಖಂಡಿಯಲ್ಲಿ ವೀರಭದ್ರೇಶ್ವರ ವಿಭೂತಿ ತಯಾರಿಕೆ ಘಟಕ ಹೊಂದಿದ್ದಾರೆ. ‘ಇಲ್ಲಿ ಸಿದ್ಧಪಡಿಸುವ ವಿಭೂತಿ ಗಟ್ಟಿಗಳನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದ ಎಲ್ಲ ಮಠಗಳಿಗೂ ಪೂರೈಸುತ್ತಾರೆ.
‘ಸಿದ್ಧಗಂಗಾ ಮಠಕ್ಕೆ ಮೂರು ತಲೆಮಾರುಗಳಿಂದ ವಿಭೂತಿ ಪೂರೈಸುತ್ತಿದ್ದೇವೆ. ನನ್ನ ಅಜ್ಜ ಗುರುಸಂಗಯ್ಯ ಮುಚಖಂಡಿಯಲ್ಲಿ ಮೊದಲಿಗೆ ವಿಭೂತಿ ತಯಾರಿಕೆ ಘಟಕ ಆರಂಭಿಸಿದ್ದರು. ಅಪ್ಪ ಮಹಾಲಿಂಗಯ್ಯ ಹಾಗೂ ನಾನು ಅದೇ ವೃತ್ತಿ ಮುಂದುವರೆಸಿದ್ದೇವೆ. ಅಂಗಡಿಗಳಿಗೆ ಸಗಟು ಮಾರಾಟಕ್ಕೆ ವಿಭೂತಿ ಕೊಡುವುದಿಲ್ಲ’ ಎನ್ನುತ್ತಾರೆ.
ದೇಸಿ ಆಕಳ ಸಗಣಿಯಿಂದ ಕ್ರಿಯಾ ವಿಭೂತಿ ಸಿದ್ಧಪಡಿಸುವುದಾಗಿ ಹೇಳುವವೀರಯ್ಯ, ಶಿವಕುಮಾರ ಶ್ರೀಗಳ ಕ್ರಿಯಾವಿಧಿಯ ನಂತರದ ಧಾರ್ಮಿಕ ಪ್ರಕ್ರಿಯೆಗಳ ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಿದ್ಧಗಂಗಾ ಮಠದಲ್ಲಿಯೇ ಉಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.