ಮೈಸೂರು: ನಗರದ ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ 2014ನೇ ಸಾಲಿನ ‘ಡಾ.ಮತ್ತೂರು ಕೃಷ್ಣಮೂರ್ತಿ ಗೌರವ ಪ್ರಶಸ್ತಿ’ಗೆ ಹಿರಿಯ ಸರ್ವೋದಯ ಕಾರ್ಯಕರ್ತರಾದ ಸುರೇಂದ್ರ ಕೌಲಗಿ ಹಾಗೂ ‘ಶ್ರೀ ವನಮಾಲಿ ಸೇವಾ ಪ್ರಶಸ್ತಿ’ಗೆ ಪ್ರೊ.ಎಸ್. ಷಟ್ಟರ್ ಅವರನ್ನು ಆಯ್ಕೆ ಮಾಡಿದೆ.
ಡಾ.ಮತ್ತೂರು ಕೃಷ್ಣಮೂರ್ತಿ ಪ್ರಶಸ್ತಿಯು ರೂ. 25 ಸಾವಿರ ನಗದು, ಡಾ.ಮತ್ತೂರು ಕೃಷ್ಣಮೂರ್ತಿ ಅವರ ಕಂಚಿನ ಪ್ರತಿಮೆ ಹಾಗೂ ಸನ್ಮಾನ ಒಳಗೊಂಡಿರುತ್ತದೆ. ವನಮಾಲಿ ಪ್ರಶಸ್ತಿಯು ವನಮಾಲಿ ಕಂಚಿನ ಪ್ರತಿಮೆ ಹಾಗೂ ಸನ್ಮಾನ ಇರುತ್ತದೆ. ಈ ಎರಡೂ ಪ್ರಶಸ್ತಿಗಳ ಪ್ರದಾನ ಸಮಾರಂಭ ಡಿ. 8ರಂದು ಸಂಜೆ 5 ಗಂಟೆಗೆ ಇಲ್ಲಿಯ ಜಯಲಕ್ಷ್ಮೀಪುರಂನ ಮಹಾಜನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಸರ್ವೋದಯ ನಾಯಕ ಜಯ ಪ್ರಕಾಶ್ ನಾರಾಯಣ ಅವರ ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸುರೇಂದ್ರ ಕೌಲಗಿ ಅವರು, ಮೇಲುಕೋಟೆಯಲ್ಲಿ ನೆಲೆಸಿ ‘ಜನಪದ ಸೇವಾ ಟ್ರಸ್ಟ್’ ಆರಂಭಿಸಿದರು. ಇದರಲ್ಲಿ ಅನಾಥ ಮಕ್ಕಳ ನಿಲಯ, ‘ಯುವಕರಿಗೆ ಹೊಸ ಜೀವನಕ್ಕಾಗಿ ದಾರಿ’ ಎನ್ನುವ ಯೋಜನೆಯ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿದ್ದಾರೆ.
ಪ್ರೊ.ಎಸ್. ಷಟ್ಟರ್ ಅವರು ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‌ನ ಅಧ್ಯಕ್ಷರಾಗಿ, ದಕ್ಷಿಣ ಭಾರತ ಶಾಖೆಯ ರಾಷ್ಟ್ರೀಯ ಕಲಾ ಕೇಂದ್ರದ ಗೌರವ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ಸದ್ಯ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.