ಮೈಸೂರು: ವಿಜಯದಶಮಿ ಅಂಗವಾಗಿ ಶನಿವಾರ ಇಲ್ಲಿ ನಡೆದ ನಾಡದೇವಿ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ಮತ್ತು ಜಂಬೂಸವಾರಿಯ ಸೊಬಗನ್ನು ದೇಶ ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಜನ ಕಣ್ತುಂಬಿಕೊಂಡರು.
ಸುಮಾರು 750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊತ್ತ ಆನೆ ‘ಅರ್ಜುನ’ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ ನಯನ ಮನೋಹರವಾಗಿತ್ತು. ಅರಮನೆಯ ಬಲರಾಮ ದ್ವಾರದಲ್ಲಿ ‘ನಂದಿಧ್ವಜ’ಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ೩.೧೩ಕ್ಕೆ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ವಿಗ್ರಹಕ್ಕೆ ಮೂರು ಬಾರಿ ಕನಕಾಂಬರ, ಮಲ್ಲಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಪುಷ್ಪಾರ್ಚನೆಗೂ ಕ್ಷಣ ಮುಂಚೆ ಪೊಲೀಸ್ ವಾದ್ಯ ತಂಡ ನುಡಿಸಿದ ಸುಶ್ರಾವ್ಯ ರಾಷ್ಟ್ರಗೀತೆಗೆ ಹಿಮ್ಮೇಳದಂತೆ ಸಿಡಿಸಿದ ೨೧ ಕುಶಾಲು ತೋಪುಗಳು ಅರಮನೆಯ ಆವರಣದಲ್ಲಿ ಅನುರಣಿಸಿದವು.
ನಂದಿ ಪೂಜೆಯೊಂದಿಗೆ ವೀರಭದ್ರನ ಕುಣಿತ ಪ್ರಾರಂಭವಾಯಿತು. ಅದರ ಬೆನ್ನಲ್ಲಿಯೇ ಮೆರವಣಿಗೆಯ ಮುಂಚೂಣಿಯಲ್ಲಿ ನಿಶಾನೆ ಆನೆ ಬಲರಾಮ, ಪಟ್ಟದ (ನೌಪತ್) ಆನೆ ಗಜೇಂದ್ರನನ್ನು ಗೋಪಿ, ಪ್ರಶಾಂತ, ವರಲಕ್ಷ್ಮೀ ಆನೆಗಳು ಅನುಸರಿಸಿದವು. ಸಾಲಾನೆಗಳ ಹಿಂದೆಯೇ ನೂರಕ್ಕೂ ಹೆಚ್ಚು ಕಲಾತಂಡಗಳು, ಸ್ತಬ್ಧ ಚಿತ್ರಗಳಿದ್ದವು. ಕರ್ನಾಟಕ ವಾದ್ಯವೃಂದ ಇದ್ದ ಅರಮನೆ ಆನೆಗಾಡಿಯನ್ನು ಎಳೆಯುವ ಜವಾಬ್ದಾರಿ ಅಭಿಮನ್ಯು ಆನೆಯ ಹೆಗಲಿಗಿತ್ತು.
ಕಳೆದ ಬಾರಿಯಷ್ಟೇ ದಸರಾ ಗಜಪಡೆಗೋಸ್ಕರ ಕೇರಳದ ತ್ರಿಶೂರಿನಿಂದ ತಂದಿದ್ದ ಮುಂದಲೆ ಪಟ್ಟಿ, ಕತ್ತಿನ ಗಂಟೆ, ಕತ್ತಿನ ಸರ, ಸಿಂಗೋಟಿ, ಚಮರೀ ಬಾಲ, ವರ್ಣರಂಜಿತ ಛತ್ರಿ, ರೇಷ್ಮೆ ಕುಸುರಿಯ ಜೂಲಾಗಳಿಂದ ಆನೆಗಳನ್ನು ಅಲಂಕರಿಸಲಾಗಿತ್ತು.
ಮಧ್ಯಾಹ್ನ ೩.೧೦ರ ಹೊತ್ತಿಗೆ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಪೂಜೆಗಾಗಿ ನಿರ್ಮಿಸಿದ್ದ ಅಟ್ಟಣಿಗೆಯತ್ತ ಎಡಕ್ಕೆ ಮೇರಿ ಹಾಗೂ ಬಲಕ್ಕೆ ಕಾವೇರಿ ಕುಮ್ಕಿ ಆನೆಗಳೊಂದಿಗೆ ಸರ್ವಾಲಂಕೃತನಾಗಿ ಠೀವಿಯಿಂದ ಬಂದ 53ರ ಹರೆಯದ ಅರ್ಜುನ, ಮೂರನೇ ಬಾರಿಗೆ ದಸರಾ ಅಂಬಾರಿ ಹೊತ್ತ ಹೆಗ್ಗಳಿಕೆಯೊಂದಿಗೆ ಪೂಜೆಗೆ ಸಹಕರಿಸಿದ.
ಯಾವ ಬದಿಗೂ ವಾಲದಂತೆ ಈ ಬಾರಿ ಅಂಬಾರಿ ಕಟ್ಟಲಾಗಿತ್ತು. ಬಲರಾಮ ದ್ವಾರದ ಮೂಲಕ ಹೊರಟ ಜಂಬೂಸವಾರಿಯು ಚಾಮರಾಜೇಂದ್ರ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವಿದ್ಯಾಲಯ, ಬಂಬೂ ಬಜಾರ್, ಹೈ ವೇ ವೃತ್ತ, ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಹಾದು
4.7 ಕಿಲೋ ಮೀಟರ್ ಮಾರ್ಗ ಕ್ರಮಿಸಿ ಸಂಜೆ 5.05ಕ್ಕೆ ನಿರಾತಂಕವಾಗಿ ಬನ್ನಿಮಂಟಪ ತಲುಪಿತು.
ಪ್ರತಿ ಬಾರಿ ಎರಡು ಕಂಬಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ, ಈ ಬಾರಿ ಒಂದೇ ಕಂಬಕ್ಕೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಬಲರಾಮ ದ್ವಾರದಲ್ಲಿ ಮಧ್ಯಾಹ್ನ 12.57ಕ್ಕೆ ಶಿಷ್ಟಾಚಾರದಂತೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ದಸರಾದಲ್ಲಿ ನಾವೆಲ್ಲರೂ ದುರ್ಗಾ ಮಾತೆ ಮತ್ತು ಚಾಮುಂಡೇಶ್ವರಿಯನ್ನು ಪೂಜೆ ಮಾಡುತ್ತೇವೆ. ಇದರ ಉದ್ದೇಶ ಶಿಷ್ಟರ ರಕ್ಷಣೆ ಮತ್ತು ದುಷ್ಟರನ್ನು ಶಿಕ್ಷಿಸುವುದಾಗಿದೆ’ ಎಂದರು.
ಉದ್ಘಾಟನೆ ವಿಳಂಬ
ವಿಜಯ ದಶಮಿ ಮೆರವಣಿಗೆ ಮಧ್ಯಾಹ್ನ 1.40ರಿಂದ 2.10ಕ್ಕೆ ನಿಗದಿಯಾಗಿತ್ತು. ಅಂಬಾರಿ ಕಟ್ಟುವ ಕಾರ್ಯ ತಡವಾದ ಕಾರಣಕ್ಕೆ ಮೆರವಣಿಗೆ ಉದ್ಘಾಟನೆ ಸುಮಾರು 1 ಗಂಟೆ ತಡವಾಯಿತು.
ನಂದಿಧ್ವಜ ಹಿಡಿದು ಕುಣಿದ ಸಿ.ಎಂ
ಅರಮನೆಯ ಬಲರಾಮ ದ್ವಾರದ ಆಂಜನೇಯ ದೇಗುಲದ ಮುಂಭಾಗದಲ್ಲಿ ಶುಭ ಧನುರ್ ಲಗ್ನದಲ್ಲಿ ಮಧ್ಯಾಹ್ನ 1.08ಕ್ಕೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ನಂದಿಧ್ವಜದ ಕಂಬವನ್ನು ಹಿಡಿದು ಹೆಜ್ಜೆ ಹಾಕಿ ಗಮನ ಸೆಳೆದರು.
ಕಿಟಕಿಯಿಂದಲೇ ನಮನ
ಚಾಮುಂಡೇಶ್ವರಿ ಮೂರ್ತಿಯ ಪುಷ್ಪಾರ್ಚನೆಗೆ ರಾಜವಂಶಸ್ಥೆ ಪ್ರಮೋದಾದೇವಿ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ರಾಜಪರಿವಾರದವರು ಯಾರೂ ಪಾಲ್ಗೊಳ್ಳಲೇ ಇಲ್ಲ. ಪ್ರಮೋದಾದೇವಿ ಅವರು ಅಂಬಾವಿಲಾಸ ಅರಮನೆಯ ಮಹಡಿಯ ಕಿಟಕಿಯಿಂದಲೇ ಅಂಬಾರಿಗೆ ನಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.