ಬೆಳಗಾವಿ: ಒಂದೆಡೆಗೆ ಮೌಢ್ಯತೆ ವಿರುದ್ಧ ಚಿಂತನೆಯ ಕಿಡಿ ಹೊತ್ತಿಕೊಳ್ಳುತ್ತಿದ್ದರೆ, ಅಲ್ಲೇ ಪಕ್ಕದ ಚಿತಾಗಾರದಲ್ಲಿ ಶವವೊಂದು ಉರಿದು ಬೂದಿಯಾಗುತ್ತಿತ್ತು. ಮಂಕುಬೂದಿ ಎರಚಿ ವಂಚಿಸುವ ಬಾಬಾಗಳ ಪವಾಡಗಳು ಬಯಲಾಗುತ್ತಿದ್ದವು. ಆಗಾಗ ಕ್ರಾಂತಿಗೀತೆಗಳು ಮೊಳಗುತ್ತಿದ್ದವು, ಸ್ಮಶಾನ ಎಂದರೆ ಬೆಚ್ಚಿ ಬೀಳುವ ಜನರೂ ಅಲ್ಲಿಯೇ ಭೂರಿ ಭೋಜನ ಸವಿದು ತಮ್ಮನ್ನು ಚಿಂತನೆಯ ಒರೆಗಲ್ಲಿಗೆ ಉಜ್ಜಿಕೊಂಡರು...!
ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಬುದ್ಧ, ಬಸವ, ಅಂಬೇಡ್ಕರ್ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಸದಾಶಿವ ನಗರದ ‘ವೈಕುಂಠ ಧಾಮ’ದಲ್ಲಿ ಪ್ರಗತಿಪರ ಮಠಾಧೀಶರು, ಚಿಂತಕರು ‘ಮೌಢ್ಯತೆ’ ವಿರುದ್ಧ ಸಮರ ಸಾರುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ‘ಪರಿವರ್ತನೆಯ ದಿನ’ವನ್ನಾಗಿ ಆಚರಿಸಿದರು.
‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ’ ಮಂಡನೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಬಕಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಶನಿವಾರ ನಡೆದ ‘ಮೂಢನಂಬಿಕೆ ವಿರುದ್ಧ ಜನಜಾಗೃತಿ ಸಮಾವೇಶ’ವು ವೈಚಾರಿಕ ಚಳವಳಿಗೆ ನಾಂದಿ ಹಾಡಿತು. ಸ್ಮಶಾನಕ್ಕೆ ಬಂದ ಶವವೊಂದಕ್ಕೆ ಸಚಿವರು ಅಗ್ನಿ ಸ್ಪರ್ಶ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕಲಾ ತಂಡಗಳು ಚನ್ನಮ್ಮ ವೃತ್ತದಿಂದ ಬೆಳಿಗ್ಗೆ ಮೆರವಣಿಗೆಯಲ್ಲಿ ಹೊರಟು ‘ವೈಕುಂಠ ಧಾಮ’ಕ್ಕೆ ಬಂದವು. ನಂತರ ಸತೀಶ ಜಾರಕಿಹೊಳಿ ಅವರು ಪ್ರಗತಿಪರ ಚಿಂತಕ ಹುಲಿಕಲ್ ನಟರಾಜ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬಳ ತಲೆ ಮೇಲೆ ಕರ್ಪೂರ ಉರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.
ಮೌಢ್ಯತೆಯ ಭಯೋತ್ಪಾದಕರು: ಇಪ್ಟಾ ಸಂಸ್ಥೆಯ ಸಂಚಾಲಕ ಸಿದ್ಧನಗೌಡ ಪಾಟೀಲ, ‘ಉಗ್ರರು ಬಾಹ್ಯ ಭಯೋತ್ಪಾದನೆ ನಡೆಸುತ್ತಿದ್ದರೆ, ಕೆಲವು ಮಠಾಧೀಶರು, ಮೌಢ್ಯತೆಯ ಪ್ರತಿಪಾದಕರು ಆಂತರಿಕ ಭಯೋತ್ಪಾದನೆ ಮಾಡುತ್ತಿದ್ದಾರೆ. ಮೌಢ್ಯವು ವ್ಯಾಪಾರವಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಂಜಲು ಎಲೆ ಮೇಲೆ ಉರುಳಾಡಿದರೆ ಚರ್ಮರೋಗ ನಿವಾರಣೆಯಾಗುವುದಾದರೆ ಕರ್ನಾಟಕದಲ್ಲಿ ಚರ್ಮರೋಗ ವೈದ್ಯರ ಅಗತ್ಯವೇ ಇರುತ್ತಿರಲಿಲ್ಲ. ಸಮೀಪದಲ್ಲೇ ಇರುವ ಪೇಜಾವರ ಶ್ರೀಗಳು ಇದನ್ನು ತಡೆಯುತ್ತಿಲ್ಲ. ಇದನ್ನು ಪ್ರತಿಪಾದಿಸುವ ಎಲ್ಲ ಮಠಾಧೀಶರು ‘ಮೌಢ್ಯತೆಯ ಭಯೋತ್ಪಾದಕ’ರಾಗಿದ್ದಾರೆ. ಎಲ್ಲ ಧರ್ಮಗಳಲ್ಲಿನ ಮತಾಂಧತೆಗಳಿಂದ ಜನರನ್ನು ಕಾಪಾಡಬೇಕು’ ಎಂದು ಪ್ರತಿಪಾದಿಸಿದರು.
ಚಿರ್ತದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು, ‘ಬುದ್ಧ–ಬಸವ– ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ವೈಚಾರಿಕ ಆಂದೋಲನ ನಡೆಸಿದರೆ ‘ಮೌಢ್ಯತೆ’ಯನ್ನು ನಿವಾರಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಾ. ಬಸವಲಿಂಗ ಸ್ವಾಮೀಜಿ, ಸಯ್ಯದ್ ಮುಸ್ತಫಾ ಖಾದ್ರಿ, ನಿಜಗುಣಾನಂದ ಸ್ವಾಮೀಜಿ ಅವರು ತಮ್ಮ ವಿಚಾರಗಳನ್ನು ಪ್ರತಿಪಾದಿಸಿದರು.
ಜನಜಾಗೃತಿ ಅಗತ್ಯ: ‘ಸಾವಿರಾರು ವರ್ಷಗಳಿಂದ ಇರುವ ಮೌಢ್ಯತೆಯನ್ನು ಜನಜಾಗೃತಿ ಮೂಲಕ ನಿವಾರಿಸವ ಹೋರಾಟ ಆರಂಭಿಸಿದ್ದೇವೆ. ಇನ್ನೂ 10ರಿಂದ 20 ವರ್ಷಗಳ ಕಾಲ ಈ ಹೋರಾಟ ನಡೆಸಬೇಕಾಗುತ್ತದೆ. ಕೇವಲ ಕಾನೂನು ಜಾರಿಗೆ ತಂದರೆ ಪ್ರಯೋಜನ ಇಲ್ಲ. ಜಾಗೃತಿ ಮೂಲಕ ಜನರಲ್ಲಿ ಬದಲಾವಣೆ ತರಬೇಕಾಗಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಸಮಾಜದಲ್ಲಿ ಶೋಷಣೆ ನಡೆದಾಗ ಜನರು ಆರ್ಥಿಕವಾಗಿ ದುರ್ಬಲಗೊಳ್ಳುತ್ತಾರೆ. ಆಗ ಅವರು ತಮ್ಮ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಕೊಡಿಸುವುದಿಲ್ಲ. ಬಡವರು ‘ಮೌಢ್ಯತೆ’ಗೆ ಒಳಗಾಗಿ ಹಿಂದುಳಿಯುತ್ತಿದ್ದಾರೆ. ಹೀಗಾಗಿ ಮೌಢ್ಯತೆ ಕುರಿತು ಜಾಗೃತಿ ಮೂಡಿಸುವುದನ್ನು ಶಿಕ್ಷಣದ ಭಾಗವಾಗಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವ ಇಡುತ್ತೇನೆ’ ಎಂದರು.
ಸ್ಮಶಾನದಲ್ಲೇ ಊಟ: ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಸ್ಮಶಾನದಲ್ಲೇ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸ್ಮಶಾನದಲ್ಲಿ ವಾಸ್ತವ್ಯ
ಸಚಿವ ಸತೀಶ ಜಾರಕಿಹೊಳಿ, ಅವರ ಬೆಂಬಲಿಗರು ಮತ್ತು ದಲಿತ ಸಂಘಟನೆಯ ಪದಾಧಿಕಾರಿಗಳು ಶನಿವಾರ ರಾತ್ರಿ ಬೆಳಗಾವಿಯ ವೈಕುಂಠ ಧಾಮ (ಸ್ಮಶಾನ) ದಲ್ಲಿ ವಾಸ್ತವ್ಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.