ADVERTISEMENT

ಸ್ಯಾನಿಟರಿ ಪ್ಯಾಡ್‌ ತಂದ ವಿಶ್ವಾಸ ಜಗದಗಲ...

ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ

ಗೀರ್ವಾಣಿ
Published 7 ಮಾರ್ಚ್ 2016, 19:59 IST
Last Updated 7 ಮಾರ್ಚ್ 2016, 19:59 IST
ಸ್ಯಾನಿಟರಿ ಪ್ಯಾಡ್‌ ತಂದ ವಿಶ್ವಾಸ ಜಗದಗಲ...
ಸ್ಯಾನಿಟರಿ ಪ್ಯಾಡ್‌ ತಂದ ವಿಶ್ವಾಸ ಜಗದಗಲ...   

ಅದೊಂದು ಜಾಹೀರಾತು. ಅದರಲ್ಲಿ ಪ್ಯಾಂಟ್ ಹಾಕಿದ ಹುಡುಗಿಯೊಬ್ಬಳು ಕಾನ್ಫಿಡೆನ್ಸಿನಿಂದ ಸ್ಕೂಟಿ ಓಡಿಸಿಕೊಂಡು ಬರುತ್ತಾಳೆ ಹಾಗೂ ಮಾರುದ್ದ ಕಾಲಿಡುತ್ತ, ಜಂಪ್ ಮಾಡುತ್ತ, ಖುಷಿ, ಖುಷಿಯಾಗಿ ನಯವಾದ ಕೂದಲು ಹಾರಿಸುತ್ತ ಕಾಲೇಜ್‌ ಕಡೆ ಹೋಗುತ್ತಾಳೆ. ಇದು ಯಾವುದರ ಜಾಹೀರಾತು? ಸ್ಕೂಟಿಯದಾ? ಜೀನ್ಸ್ ಪ್ಯಾಂಟಿನದಾ? ಇಲ್ಲ ಶ್ಯಾಂಪೂವಿನದಾ? ಅಂತೆಲ್ಲ ಯೋಚಿಸುವುದರಲ್ಲಿ ಸ್ಯಾನಿಟರಿ ಪ್ಯಾಡ್‌ ಎದ್ದು ಬರುತ್ತದೆ. ‘ನನ್ನ ವಿಶ್ವಾಸ ಈಗ ಜಗತ್ತಿನಗಲ’ ಎನ್ನುತ್ತಾಳೆ ಹುಡುಗಿ. ಆಕೆಯ ಮುಖದ ಮೇಲೆ ಬಿಡುಗಡೆಯ ಕಳೆ ಹೊರಸೂಸುತ್ತದೆ.

ಇನ್ನೊಂದು ಕಡೆ ನೀರಿಲ್ಲದೇ ಒಣಗಿದ ಬಟಾಬಯಲಲ್ಲಿ ಹೆಂಗಸರಿಬ್ಬರು ತಲೆ ಮೇಲೆ ಕಟ್ಟಿಗೆ ಹೊರೆ ಹೊತ್ತು ಬರುತ್ತಿದ್ದಾರೆ. ಬಿರು ಬಿಸಿಲಿಗೆ ಬಳಲಿ ಹುಶ್‌ ಅಂತ ಕೆಳಗೆ ಕೂರುತ್ತಾರೆ. ಹಿನ್ನೆಲೆಯಿಂದ ಒಂದು ಧ್ವನಿ ಕೇಳಿಸತೊಡಗುತ್ತದೆ. ‘ಒರಳು ಕಲ್ಲಿನಿಂದ ವಿಮೋಚನೆ, ಕಟ್ಟಿಗೆ ಒಲೆಯಿಂದ ವಿಮೋಚನೆ, ಸೀಮೆ ಎಣ್ಣೆ ಮಸಿಯಿಂದ ವಿಮೋಚನೆ, ಉಸಿರುಗಟ್ಟಿಸುವ ಹೊಗೆಯಿಂದ ವಿಮೋಚನೆ,  ನೀರು ಹೊರುವುದರಿಂದ ವಿಮೋಚನೆ, ಕಟ್ಟಿಗೆ ಹೊರುವುದರಿಂದ ವಿಮೋಚನೆ.

ಆರೋಗ್ಯ, ಸುರಕ್ಷೆ, ಕಾಳಜಿ, ಶಿಕ್ಷಣ ಹಾಗೂ ಸಬಲೀಕರಣ ನಮ್ಮ ಮಂತ್ರ..’ ಯಾವುದೋ ಸರ್ಕಾರಿ ಜಾಹೀರಾತಿನ ನೆನಪಾಗುತ್ತಿದೆಯೆ?
ಎರಡೂ ಜಾಹೀರಾತುಗಳೇ. ಆದರೆ ಎಷ್ಟೊಂದು ವೈರುಧ್ಯ! ಎರಡೂ ಕಡೆ ಇರುವವಳು ಹೆಣ್ಣೇ. ಇಬ್ಬರ ಶರೀರವೂ ವರ್ತಿಸುವುದು ಒಂದೇ ಥರ. ಆದರೂ ಅದೆಂಥ ಭಿನ್ನತೆ. ಇಂದು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಯಾವುದರಿಂದ ಬಿಡುಗಡೆ ಇದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ‘ಆ ದಿನಗಳ’ ಹಿಂಸೆಯಿಂದ ಒಂದು ಹಂತದ ಬಿಡುಗಡೆ ಸಿಕ್ಕಂತಿದೆ.

ತೀರಾ ಅನಕ್ಷರಸ್ಥ, ಹೊಸತನಕ್ಕೆ ಹೊಂದಿಕೊಳ್ಳದ ಹೆಣ್ಣು ಮಕ್ಕಳನ್ನು ಹೊರತುಪಡಿಸಿ ಉಳಿದ ಹೆಣ್ಣು ಮಕ್ಕಳನ್ನು ಸ್ಯಾನಿಟರಿ ಪ್ಯಾಡ್ ನಿಜಕ್ಕೂ ಲಿಬರೇಟ್ ಮಾಡಿದೆ. ಇದಕ್ಕಾಗಿ ಯಾರಿಗೆ ಥ್ಯಾಂಕ್ಸ್ ಹೇಳಬೇಕೊ ಗೊತ್ತಿಲ್ಲ. ಏಕೆಂದರೆ ಗುರುತ್ವ ಶಕ್ತಿ ಕಂಡು ಹಿಡಿದಿದ್ದು ನ್ಯೂಟನ್‌ ಅಂತ ಗೊತ್ತು. ಫೋನ್‌ ಕಂಡು ಹಿಡಿದಿದ್ದು ಗ್ರಹಾಂ ಬೆಲ್‌ ಅಂತ ಗೊತ್ತು. ಆದರೆ, ಜಗತ್ತಿನ ಹೆಣ್ಣು ಮಕ್ಕಳ ಪಾಲಿಗೆ ಆ ದಿನಗಳನ್ನು ಕೊಂಚ ಮಟ್ಟಿಗಾದರೂ ಸಹ್ಯ ಮಾಡಿದ ಆ ಮಹಾನುಭಾವ/ಳು ಯಾರು ಎಂದು ನಿಜಕ್ಕೂ ಗೊತ್ತಿಲ್ಲ. ಎಲ್ಲಿದ್ದರೂ ಸುಖವಾಗಿರು ಜೀವವೇ!

ಮುಟ್ಟಿನ ದಿನಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಕಸಿವಿಸಿ ಎಂಥದು ಎಂದು ಗಂಡು ಪ್ರಪಂಚಕ್ಕೆ ಗೊತ್ತಿರಲು ಸಾಧ್ಯವಿಲ್ಲ. ಅದರ ಬಗ್ಗೆ ಚರ್ಚೆ ಹೋಗಲಿ, ಮಾತಾಡುವುದೂ ಮೈಲಿಗೆ ಎನ್ನುವ ಕಾಲವೊಂದಿತ್ತು. ಆದರೆ ಇವತ್ತು ಜಗತ್ತು ಹೇಗೆ ಬದಲಾಗುತ್ತಿದೆ ಎಂದರೆ ಅದ್ಯಾವುದೋ ಹೆಣ್ಣು ಮಗಳು ‘ಹ್ಯಾಪಿ ಟು ಬ್ಲೀಡ್’ ಎಂದು ಫೇಸ್‌ಬುಕ್‌ ಅಭಿಯಾನ ಆರಂಭಿಸಿದರೆ, ರಾಜದೀಪ್ ಸರದೇಸಾಯಿ ಅಂಥವರೇ ಚರ್ಚೆಗೆ ಕೂರುತ್ತಾರೆ.

ಬಟ್ಟೆಯಿಂದಲೇ ಹೆಣ್ತನ ಹಿಡಿದಿಡುವ ಕಾಲ ಒಂದಿತ್ತು. ಈಗಲೂ ಇದೆ. ಆದರೆ ಬಟ್ಟೆಯ ಜಾಗವನ್ನು ಸ್ಯಾನಿಟರಿ ಪ್ಯಾಡ್‌ಗಳು ಆಕ್ರಮಿಸಿದ್ದು ಸುಳ್ಳಲ್ಲ. ಕೊನೇ ಪಕ್ಷ ದೇಶದ ಶೇಕಡಾ 12ರಷ್ಟು ಹೆಣ್ಣು ಮಕ್ಕಳಾದರೂ ಈ ಬದಲಾವಣೆಗೆ ತೆರೆದುಕೊಂಡಿದ್ದಾರೆ. ಅಮ್ಮನ ಕಾಟನ್ ಸೀರೆ ಹಾಗೂ ಅಪ್ಪ, ಅಜ್ಜನ ಹಳೆ ಪಂಚೆಯೇ ಕೆನ್ನೀರು ಹಿಡಿದಿಡುವ ಡ್ಯಾಮ್‌ಗಳಾಗಿದ್ದವು.

ಅವನ್ನು ತೊಳೆಯುವುದು ಒಂದು ಶಿಕ್ಷೆಯಾದರೆ, ಒಣಗಿಸುವುದು ಇನ್ನೊಂದು ಮುಜುಗುರ. ಅದರಲ್ಲೂ ಪ್ರಾಯಕ್ಕೆ ಬಂದ ಗಂಡು ಮಕ್ಕಳಿರುವ ಮನೆಯಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಈ ಮುಜುಗುರಕ್ಕೆ ಯಾವ ಹೆಸರಿಡಲೂ ಬರುವುದಿಲ್ಲ. ಮೂರು ದಿನ ಹೊರಗಿರುವುದು, ಮೇಲಿಂದ ಬಟ್ಟೆ ಒಣ ಹಾಕುವುದು, ಒಣ ಹಾಕಿದ ಬಟ್ಟೆ ಯಾರಿಗೂ ಕಾಣದಂತೆ ಗೌಪ್ಯ ಕಾಪಾಡಿಕೊಳ್ಳುವುದು, ಇದರ ಜೊತೆಗೆ ಹೊಟ್ಟೆ ನೋವು, ಸುಸ್ತು ಹಾಗೂ ಮಾಡದ ತಪ್ಪಿಗೆ ಅವಮಾನ.

ಯಾರನ್ನೂ ಮುಟ್ಟಬೇಡ, ಎಲ್ಲೂ ಹೋಗಬೇಡ, ಹಾಗಿರಬೇಡ, ಹೀಗಿರಬೇಡ. ಮೊದಲೇ  ಅಸ್ಪೃಶ್ಯ ಭಾವನೆ. ಮೇಲಿಂದ ಕಟ್ಟುಪಾಡುಗಳು. ಆ ಮೂರು ದಿನ ಮನೆಯ ಕೆಲಸಗಳಿಗೇನೋ ರಜೆ. ಹಾಗಂತ ಹೊರಗಿನ ವ್ಯವಹಾರಗಳಿಗೆ ರಜೆ ಸಿಗತ್ತಾ? ಇಲ್ಲ. ಬೆಳಗಿನಿಂದ ಸಂಜೆತನಕ ಸ್ಕೂಲು ಕಾಲೇಜಿನಲ್ಲಿ ಬಟ್ಟೆ ಬದಲಿಸದೇ ಕಳೆಯುವುದು. ಎಲ್ಲಿ ಏನು ಕಂಡು ಮಾನ ಹೋಗುವುದೋ ಎಂಬ ಆತಂಕ.

ಬೆಂಚಿನಿಂದ ಏಳುವಾಗೆಲ್ಲ ಪಕ್ಕದಲ್ಲಿರುವ ಗೆಳತಿಯ ಮುಖ ನೋಡುವುದು. ಅವಳು ಹಿಂದೆ ನೋಡಿ ಏನೂ ತೊಂದರೆ ಇಲ್ಲ ಎಂದು ಸನ್ನೆ ಮಾಡುವುದು. ಕಳೆದ ದಿನಗಳೇ ಚಂದ ಎಂದು ಈ ವಿಷಯದಲ್ಲಿ ಹೇಳಲು ಸಾಧ್ಯವೆ? ಇಂದು ಕಾರ್ಪೊರೇಟ್‌ ಜಗತ್ತಿನಲ್ಲಿ, ನ್ಯೂಸ್‌ರೂಮ್‌ಗಳಲ್ಲಿ, ಶೂಟಿಂಗ್ ಲೊಕೇಶನ್‌ಗಳಲ್ಲಿ, ಸ್ಪೋರ್ಟ್ಸ್‌, ಟ್ರಾವೆಲಿಂಗ್, ಟ್ರೆಕ್ಕಿಂಗ್, ಶಾಪಿಂಗ್, ಎಲ್ಲಕಡೆ ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಓಡಾಡಲು, ಸಾಧ್ಯವಾಗಿರುವುದು ಪ್ಯಾಡ್ ಸಹಾಯದಿಂದ ಎಂದು ಡೌಟೇ ಇಲ್ಲದೇ ಹೇಳಬಹುದು.

ಹಾಗಾದರೆ ಈ ಬದಲಾವಣೆ, ಹೇಗೆ ಸಾಧ್ಯವಾಯ್ತು? ಬಟ್ಟೆಯಿಂದ ಪ್ಯಾಡಿಗೆ ಬದಲಾಗುವ ಸಂಕ್ರಮಣ ಕಾಲ ಹೇಗಿತ್ತು? ಅಮ್ಮಂದಿರು ಇದನ್ನು ಹೇಗೆ ಸ್ವೀಕರಿಸಿದರು? ಖಂಡಿತ ಅದೊಂದು ಇಂಟರೆಸ್ಟಿಂಗ್ ಸ್ಟೋರಿ. ಹಾಗೆ ನೋಡಿದರೆ ಅಮ್ಮಂದಿರು ಇದನ್ನು ತಮ್ಮ ಹೆಣ್ಣು ಮಕ್ಕಳಿಗೆ ಖುಷಿಯಿಂದಲೇ ತಂದುಕೊಟ್ಟರು. ತಾವು ಅನುಭವಿಸಿದ ಮುಜುಗುರ ನಿಮಗೆ ಬೇಡ. ಅದು ನಮ್ಮ ಕಾಲಕ್ಕೇ ಮುಗಿಯಲಿ ಎಂದು. ಆದರೆ ಪ್ಯಾಡ್‌ ಎಸೆಯುವ ಅಥವಾ ಡಿಸ್ಪೋಸ್‌ ಮಾಡುವ ವಿಚಾರದಲ್ಲಿ ಮಾತ್ರ ಭಯಕ್ಕೆ ಬಿದ್ದರು. ಇವತ್ತಿಗೂ ಎಷ್ಟೋ ಹೆಣ್ಣು ಮಕ್ಕಳು ಡಿಸ್ಪೋಸ್‌ ಮಾಡುವ ಮುನ್ನ ಪ್ಯಾಡ್ ತೊಳೆದು ಎಸೆಯುತ್ತಾರೆ. ಕಾರಣ ಅದನ್ನು ಹಾವು ಮೂಸಿಬಿಟ್ಟರೆ ನಾಗದೋಷ ಬಂದು ಬಿಡುತ್ತದೆ ಎಂದು!

ಇನ್ನು ಕೆಲವೆಡೆ ಪ್ಯಾಡ್ ಸುಡಬಾರದು. ಹೆಣ್ತನವನ್ನೇ ಸುಟ್ಟಂತೆ. ಮುಂದೆ ಮಕ್ಕಳಾಗಲ್ಲ ಎಂಬ ಭಾವನೆ. ಇಂಥ ಅದೆಷ್ಟೋ ನಂಬಿಕೆಗಳ ನಡುವೆಯೂ ಪ್ಯಾಡ್ ಹೆಣ್ಣುಮಕ್ಕಳ ಜೀವನದಲ್ಲಿ ನುಸುಳಿದೆ. ಬಸ್ಸೇ ಬಾರದ, ಕರೆಂಟೇ ಇರದ ಊರಲ್ಲೂ ಸ್ಯಾನಿಟರಿ ಪ್ಯಾಡ್ ಬಳಕೆಯಾಗುತ್ತಿದೆ. ಮೊದ ಮೊದಲು ಅಂಗಡಿಯಲ್ಲಿ ಹೋಗಿ ಹೇಗೆ ಕೇಳುವುದು ಎಂಬ ನಾಚಿಕೆ ಕಾಡುತ್ತಿತ್ತು.

ಕೊಡಲು ಅಂಗಡಿಯವನಿಗೂ ನಾಚಿಕೆ. ಅವನದನ್ನು ಪೇಪರಿನಲ್ಲಿ ಕಟ್ಟಿ, ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಕೊಡುತ್ತಿದ್ದ. ಅದೇನೋ ಸ್ಮಗ್ಲಿಂಗ್ ಮಾಡಿದ ಭಾವನೆ ಇಬ್ಬರಿಗೂ! ಈಗ ಹೆಣ್ಣು ಮಕ್ಕಳು ಅದನ್ನೂ ಮೀರಿ ನಿಂತಿದ್ದಾರೆ. ಏಕೆಂದರೆ ಇಂದು ಮಾಲ್‌ಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಹಾಗೂ ದಿನಸಿ ಅಂಗಡಿಯಲ್ಲೂ ಬಣ್ಣ ಬಣ್ಣದ ಸ್ಯಾನಿಟರಿ ಪ್ಯಾಡುಗಳನ್ನು ಸಾಲಾಗಿ ಪೇರಿಸಿಡುತ್ತಾರೆ. ಮಹಿಳೆಯರ ಈ ಪ್ರಾಡಕ್ಟಿಗೆ ಇರುವಷ್ಟು ಡಿಮ್ಯಾಂಡ್‌ ಇನ್ಯಾವುದಕ್ಕಿದೆ ಹೇಳಿ?

ಮೊದಲೆಲ್ಲ ಪ್ರಾಯಕ್ಕೆ ಬಂದಿರುವ ಹೆಣ್ಣು ಮಕ್ಕಳನ್ನು ಮುಟ್ಟಿನದಿನಗಳಲ್ಲಿ ಸ್ಕೂಲ್‌, ಕಾಲೇಜ್‌ ಪ್ರವಾಸಕ್ಕೋ, ಯಾವುದೋ ಸ್ಪರ್ಧೆಗೋ ಕಳಿಸಲು ಪೋಷಕರು ಹಿಂಜರಿಯುತ್ತಿದ್ದರು. ಪ್ಯಾಡ್‌ ಅಭಯಹಸ್ತದಿಂದ ಪೋಷಕರೂ ಅದನ್ನು ಮೀರಿ ನಿಂತಿದ್ದಾರೆ. ಮೊದಲಾದರೆ ಆ ದಿನಗಳಲ್ಲಿ ಅಮ್ಮಂದಿರನ್ನೇ ಅವಲಂಬಿಸುತ್ತಿದ್ದ ಹುಡುಗಿಯರು ಇಂದು ಅಮ್ಮಂದಿರಿಗೇ ಪ್ಯಾಡ್ ಪಾಠ ಮಾಡುತ್ತಾರೆ. ಅಮ್ಮಂದಿರೂ ಒಂದು ಕೈ ನೋಡೇ ಬಿಡೋಣ ಎಂದು ಪ್ರಯೋಗಕ್ಕೂ ಇಳಿದಿದ್ದಾರೆ.

ಸ್ಯಾನಿಟರಿ ಪ್ಯಾಡ್ ಹೆಣ್ಣು ಮಕ್ಕಳನ್ನು ಲಿಬರೇಟ್ ಮಾಡಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಮುಟ್ಟಿನ ದಿನಗಳ ಮುಜುಗುರದಿಂದ ಖಂಡಿತ ರಿಯಾಯಿತಿ ನೀಡಿದೆ. ಹೆಣ್ಣುಮಕ್ಕಳಿಗೆ ಒಗ್ಗರಣೆ ಘಾಟಿನಿಂದ ಮುಕ್ತಿ ಸಿಗದಿರಬಹುದು, ಕಟ್ಟಿಗೆ ಹೊಗೆಯಿಂದ ಮುಕ್ತಿ ಸಿಗದಿರಬಹುದು. ಅಥವಾ ಎಷ್ಟೇ ಶಿಕ್ಷಿತವಾಗಿದ್ದು,ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಮನೆಗೆ ಬಂದರೆ ಅಡುಗೆ ಮಾಡಿ ಮನೆ ಮಂದಿಗೆ ಬಡಿಸುವುದರಲ್ಲಿ ಮುಕ್ತಿ ಸಿಗದಿರಬಹುದು. ಆದರೆ ‘ಆ ದಿನಗಳು’ ಖಂಡಿತಾ ಸಹ್ಯವಾಗಿವೆ.                                                         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.