ADVERTISEMENT

ಹತ್ತು ಸಂಪುಟಗಳಲ್ಲಿ 2,300 ಶಾಸನ

ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಷ.ಶೆಟ್ಟರ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:56 IST
Last Updated 25 ಜೂನ್ 2016, 19:56 IST
ಸಂವಾದದಲ್ಲಿ ಷ.ಶೆಟ್ಟರ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಷ.ಶೆಟ್ಟರ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕ್ರಿ.ಶ. ಒಂದನೇ ಶತಮಾನದಿಂದ 10ನೇ ಶತಮಾನದವರೆಗಿನ 2,300 ಶಾಸನಗಳನ್ನು ಹತ್ತು ಸಂಪುಟಗಳಲ್ಲಿ ಸಂಪಾದಿಸಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದು ಇತಿಹಾಸಕಾರ ಷ.ಶೆಟ್ಟರ್‌ ಹೇಳಿದರು.

ಸಾಹಿತ್ಯ ಅಕಾಡೆಮಿ ಶನಿವಾರ ಆಯೋಜಿಸಿದ್ದ ‘ವ್ಯಕ್ತಿ ಮತ್ತು ಪುಸ್ತಕಗಳು’ ಕಾರ್ಯಕ್ರಮದಲ್ಲಿ ತಮ್ಮನ್ನು ಪ್ರಭಾವಿಸಿದ ಪುಸ್ತಕಗಳ ಕುರಿತು ಅವರು ಮಾತನಾಡಿದರು.

‘ಕನ್ನಡ ಶಾಸನಗಳನ್ನು ಹೊಸ ಪೀಳಿಗೆಗೆ ಮುಟ್ಟಿಸಬೇಕೆಂಬ ಉದ್ದೇಶದಿಂದ ಪ್ರಾಚೀನ ಕಾಲದ ಶಾಸನಗಳನ್ನು ಸಂಪಾದಿಸಿದ್ದೇನೆ. ಈ ಪೈಕಿ 2,300 ಶಾಸನಗಳನ್ನು  ಹೊಸಗನ್ನಡದ ರೂಪಕ್ಕಿಳಿಸಿದ್ದೇನೆ. ಅಲ್ಲದೆ, ಪ್ರತಿಯೊಂದು ಶಾಸನಕ್ಕೂ ಅರ್ಥ ವಿವರಣೆ ನೀಡಿದ್ದೇನೆ. ಇದಕ್ಕಾಗಿ 30 ವರ್ಷಗಳು ಹಿಡಿದಿವೆ’ ಎಂದು ಹೇಳಿದರು.

‘ತಮಿಳು ಭಾಷೆಯಲ್ಲಿ ಒಟ್ಟು 30 ಸಾವಿರ ಶಾಸನಗಳಿದ್ದರೆ, ಕನ್ನಡದಲ್ಲಿ 20 ಸಾವಿರ ಶಾಸನಗಳಿವೆ. ಆದರೆ, ಕ್ರಿ.ಶ. ಒಂದನೇ ಶತಮಾನದಿಂದ 10ನೇ ಶತಮಾನದವರೆಗಿನ ಅವಧಿಯಲ್ಲಿ ತಮಿಳಿಗಿಂತ ಕನ್ನಡದಲ್ಲಿ ಹೆಚ್ಚಿನ ಶಾಸನಗಳು ರಚನೆಯಾಗಿವೆ. ಈ ಶಾಸನಗಳನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯವನ್ನು ಮರು ರೂಪಿಸಬೇಕಿದೆ’ ಎಂದರು.

‘ಶಾಸನಗಳು ಎಂದೂ ಇತಿಹಾಸವಾಗುವುದಿಲ್ಲ. ಶಾಸನಗಳನ್ನು ಅರ್ಥೈಸುವುದು, ವ್ಯಾಖ್ಯಾನಿಸಿದರೆ ಮಾತ್ರ ಇತಿಹಾಸವಾಗುತ್ತದೆ. ಆದರೆ, ನಮ್ಮ ಇತಿಹಾಸಕಾರರಿಗೆ ಇರುವ ದೌರ್ಬಲ್ಯವೆಂದರೆ ಮೂಲ ಆಕರಗಳಿಗೆ ಹೋಗದೇ ಇರುವುದು. ಕನ್ನಡ ಸಾಹಿತ್ಯ ಚರಿತ್ರೆಯನ್ನು ತೆಗೆದುಕೊಂಡರೆ ಇಂದಿಗೂ ರಂ. ಶ್ರೀ. ಮುಗಳಿ ಅವರ ಕೃತಿಯನ್ನೇ ಆಕರ ಗ್ರಂಥವಾಗಿ ಬಳಸಿಕೊಳ್ಳಲಾಗುತ್ತಿದೆ. ಅದನ್ನು ಬಿಟ್ಟು ಹೊಸ ಸಂಶೋಧನೆಗೆ ತೊಡಗುತ್ತಿಲ್ಲ’ ಎಂದರು.

ಭಾರತೀಯರಿಗೆ ಹಿಂಜರಿಕೆ: ‘ಅಮೆರಿಕನ್‌ ಇಂಗ್ಲಿಷ್‌, ಆಫ್ರಿಕನ್‌ ಇಂಗ್ಲಿಷ್‌ ಎಂದು ಗುರುತಿಸುವಂತೆ ಭಾರತೀಯ ಇಂಗ್ಲಿಷ್‌ ಎಂದು ಕರೆದುಕೊಳ್ಳಲು ನಮ್ಮವರು ಹಿಂಜರಿಯುತ್ತಿದ್ದಾರೆ. ಭಾರತೀಯ ಇಂಗ್ಲಿಷ್‌ಗೆ ತನ್ನದೇ ಆದ ಗುಣಲಕ್ಷಣಗಳಿವೆ. ಈ ಇಂಗ್ಲಿಷ್‌ ನಮ್ಮದು ಎಂದು ಹೇಳಿಕೊಳ್ಳುವ ಧೈರ್ಯ ಪ್ರಾಧ್ಯಾಪಕರಿಗೆ ಇಲ್ಲ’ ಎಂದು ಹೇಳಿದರು.

‘ಕನ್ನಡದ ಅ.ನ.ಕೃ, ತ.ರಾ.ಸು, ಅಮೆರಿಕದ ಸಾಹಿತಿ ಹೆಮಿಂಗ್ವೆ ಅವರ ಪ್ರಭಾವ ನನ್ನ ಮೇಲೆ ಗಾಢವಾಗಿ ಬೀರಿದೆ. ಅನಕೃ ಅವರ 20 ಕಾದಂಬರಿಗಳನ್ನು ಓದಿದ್ದೇನೆ. ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚನೆಗೆ ಹೆಚ್ಚಿನ ಒಲವು ತೋರಿಸಿದ್ದೆ. ಈಗ ಕನ್ನಡದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಕನ್ನಡದಲ್ಲಿ ಬರೆದಿದ್ದರಿಂದ ಪ್ರಶಸ್ತಿಗಳು ಬಂದವು. ಬಹುಶಃ ಇಂಗ್ಲಿಷ್‌ನಲ್ಲೇ ಬರೆದಿದ್ದರೆ ಪ್ರಶಸ್ತಿಗಳು ಬರುತ್ತಿರಲಿಲ್ಲ’ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದರು.

‘ಕನ್ನಡದಲ್ಲಿ ಪ್ರಶಸ್ತಿಗಳನ್ನು ನೀಡಿ ಬರವಣಿಗೆಯನ್ನು ಕೆಡಿಸಲಾಗುತ್ತಿದೆ. ಕೆಲವರು ಲಾಬಿ ಮಾಡಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
*
ಯುವ ಪೀಳಿಗೆ ಶಾಸನ ಕ್ಷೇತ್ರಕ್ಕೆ ಬರಬಾರದು ಎಂಬ ಮನೋಭಾವದಲ್ಲಿ ಶಾಸನ ತಜ್ಞರಿದ್ದಾರೆ. ಹಳಗನ್ನಡ ಗೊತ್ತಿದ್ದರೂ ಶಾಸನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ.
–ಷ.ಶೆಟ್ಟರ್‌,
ಇತಿಹಾಸಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.