ಹಾಸನ: ‘ಹಲ್ಮಿಡಿ ಶಾಸನ ಲಭಿಸದಿರುತ್ತಿದ್ದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದು ಕಷ್ಟವಾಗುತ್ತಿತ್ತು’ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಹೇಳಿದರು. ಕನ್ನಡ ಭಾಷೆಯ ಪ್ರಾಚೀನತೆಗೆ ಸಾಕ್ಷಿ ಒದಗಿಸಿದ, ಶಿಲಾ ಶಾಸನ ಲಭಿಸಿದ ಹಲ್ಮಿಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ‘ಹಲ್ಮಿಡಿ ಉತ್ಸವ’ಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕರ್ನಾಟಕವನ್ನು ಆಳಿದ ಮೊದಲ ಕನ್ನಡ ಅರಸರು ಕದಂಬರು. ಕ್ರಿ.ಶ. 350ರಲ್ಲಿ ಕನ್ನಡವನ್ನೇ ಆಡಳಿತ ಭಾಷೆಯಾಗಿಸಿದ ಕದಂಬರು, ಕನ್ನಡ ಭಾಷೆ ಮತ್ತು ಕನ್ನಡಿಗರ ಅಸ್ಮಿತೆಯನ್ನು ಸಾರಿದರು. ಹಲ್ಮಿಡಿ ಶಾಸನ ಈ ಅಸ್ಮಿತೆಗೆ ಸಿಕ್ಕಿದ ಪುರಾವೆ. ಶಾಸನದ ಆರಂಭದಲ್ಲಿ ಬರುವ ಸಂಸ್ಕೃತ ಶ್ಲೋಕವನ್ನು ಬಿಟ್ಟರೆ, ಮುಂದೆ ಇರುವ ಕನ್ನಡದ 15 ಸಾಲುಗಳು ಹಲವು ವಿಚಾರಗಳನ್ನು ತಿಳಿಸುತ್ತವೆ.
ಅತ್ಯಂತ ಸಂಕ್ಷಿಪ್ತವಾದ ಹಾಗೂ ಮಹತ್ವದ ವಿಚಾರಗಳನ್ನು ತಿಳಿಸುವ ಕನ್ನಡ ಶಾಸನ ಇದಾಗಿದೆ. ಈ ಸಂದರ್ಭದಲ್ಲಿ ಹಲ್ಮಿಡಿ ಉತ್ಸವ ನಡೆಯುತ್ತಿರುವುದು ಸಕಾಲಿಕ, ಪ್ರಶಂಸಾರ್ಹ’ ಎಂದು ಶ್ಲಾಘಿಸಿದರು. ‘ಹಲ್ಮಿಡಿ ಶಾಸನದಲ್ಲಿ ನಮ್ಮ ಭಾಷೆಯ ಪ್ರಾಚೀನತೆಗೆ ದಾಖಲೆ ಲಭಿಸಿದ್ದು ಒಂದೆಡೆಯಾದರೆ ನಮ್ಮದು ವೀರ, ಶೂರ ಹಾಗೂ ಧೈರ್ಯವಂತರ ನಾಡು ಎಂಬುದನ್ನೂ ಈ ಶಾಸನ ಸಾರುತ್ತದೆ. ಎರಡೂ ವಿಚಾರಗಳಿಗೆ ನಾವು ಹೆಮ್ಮೆ ಪಡಬೇಕು.
ಶಾಸನದಲ್ಲಿ ಉಲ್ಲೇಖವಾಗಿರುವ ‘ವಿಜಾ ಅರಸ’ನೆಂಬ ಯೋಧ ಹಲ್ಮಿಡಿಯವನೇ ಆಗಿದ್ದರಿಂದ ಅಂದಿನ ಅರಸರು ಅವನಿಗೆ ಎರಡು ಗ್ರಾಮಗಳನ್ನು ದತ್ತಿಯಾಗಿ ನೀಡಿದ್ದರು ಎಂಬುದು ಗಮನಾರ್ಹ’ ಎಂದು ಚಿದಾನಂದಮೂರ್ತಿ ತಿಳಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ‘ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ಹಲ್ಮಿಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪರಿಷತ್ತಿಗೂ ಹೆಮ್ಮೆಯ ವಿಚಾರ.
ರಾಜ್ಯ ಸರ್ಕಾರ ಶತಮಾನೋತ್ಸವ ಕಾರ್ಯಕ್ರಮಕ್ಕೆ ₨ 1.5 ಕೋಟಿ ದೇಣಿಗೆ ನೀಡುವ ಮೂಲಕ ಕನ್ನಡಿಗರ ಆಶಯಕ್ಕೆ ಸ್ಪಂದಿಸಿದೆ. ಈ ಊರಿನ ಜನರ ಕನ್ನಡ ಪ್ರೀತಿ ಅನುಕರಣೀಯ’ ಎಂದರು. ಸಂಶೋಧಕಿ ವೈ.ಸಿ. ಭಾನುಮತಿ ಆಶಯ ಭಾಷಣ ಮಾಡಿದರು. ಹಲ್ಮಿಡಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಹಲ್ಮಿಡಿ ಗ್ರಾಮದಲ್ಲಿ ನಿರ್ಮಿಸಿರುವ ಕನ್ನಡ ಭವನವನ್ನು ಶಾಸಕ ವೈ.ಎನ್. ರುದ್ರೇಶ್‌ಗೌಡ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.