ಕಳಸ (ಚಿಕ್ಕಮಗಳೂರು): ಹಾವು ಹಿಡಿಯುವ ಹವ್ಯಾಸದಿಂದ ಮನೆಮಾತಾಗಿದ್ದ ಪಟ್ಟಣದ ಪ್ರಫುಲ್ಲದಾಸ್ ಭಟ್ (64) ಹಾವು ಕಡಿತದಿಂದಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಕಳಕೋಡಿನ ಕಾಂಗ್ರೆಸ್ ಮುಖಂಡ ಕೆ.ಸಿ.ಧರಣೇಂದ್ರ ಅವರ ತೋಟದ ಮನೆಯ ಸಮೀಪ ಮಂಗಳವಾರ ಮಧ್ಯಾಹ್ನ ಕಾಳಿಂಗ ಸರ್ಪವೊಂದು ಕಂಡು ಬಂದಿತ್ತು. ಆ ಹಾವನ್ನು ಹಿಡಿಯಲು ಪ್ರಫುಲ್ಲದಾಸ್ ಭಟ್ ಅವರ ನೆರವು ಪಡೆಯಲಾಗಿತ್ತು. ಕಾಳಿಂಗ ಸರ್ಪವನ್ನು ಭಟ್ಟರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ತಮ್ಮ ಮೊಬೈಲ್ ಫೋನ್ ಮೂಲಕ ಹಾವಿನೊಂದಿಗೆ ಚಿತ್ರ ತೆಗೆಯುವಂತೆ ಭಟ್ಟರು ಸ್ಥಳದಲ್ಲಿದ್ದವರನ್ನು ಕೋರಿದ್ದಾರೆ. ಚಿತ್ರ ತೆಗೆಯುವ ಸಂದರ್ಭ ಸ್ವಲ್ಪ ಅಜಾಗರೂಕರಾಗಿದ್ದ ಪ್ರಫುಲ್ಲದಾಸ ಭಟ್ಟರಿಗೆ ಕಾಳಿಂಗ ಸರ್ಪ ಕಡಿದಿದೆ. ಕೈ ಮತ್ತು ಭುಜಕ್ಕೆ ಹಾವು ಕಡಿದಿದ್ದು ಸ್ಥಳದಲ್ಲೇ ಕುಸಿದುಬಿದ್ದ ಭಟ್ಟರನ್ನು ಕಳಸ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಕಳೆದ ಹಲವಾರು ವರ್ಷಗಳಿಂದ ನೂರಾರು ಕಾಳಿಂಗ ಸರ್ಪ ಮತ್ತು ಲೆಕ್ಕವಿಲ್ಲದಷ್ಟು ಸರ್ಪಗಳನ್ನು ಭಯವೇ ಇಲ್ಲದಂತೆ ಭಟ್ಟರು ಲೀಲಾಜಾಲವಾಗಿ ಹಿಡಿದಿದ್ದರು. ಕಳಸ ಹೋಬಳಿಯ ಜೊತೆಗೆ ದೂರದ ಊರುಗಳಲ್ಲಿಯೂ ಹಾವುಗಳನ್ನು ಹಿಡಿಯಲು ಭಟ್ಟರಿಗೆ ಕರೆ ಬರುತ್ತಿತ್ತು. ಪ್ರತಿಫಲಾಪೇಕ್ಷೆ ಇಲ್ಲದೆ ಈ ಕಾಯಕ ನಡೆಸುತ್ತಿದ್ದ ಭಟ್ಟರಿಗೆ ಮಂಗಳವಾರ ಅವರ ಪ್ರಚಾರದ ವ್ಯಾಮೋಹವೇ ಮುಳುವಾಗಿ ಪರಿಣಮಿಸಿತು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.