ADVERTISEMENT

ಹೆಣ್ಣು ಎಂಬುದೇ ಹೆಮ್ಮೆ

ಮಾಲತಿ ಭಟ್ಟ
Published 7 ಮಾರ್ಚ್ 2016, 19:45 IST
Last Updated 7 ಮಾರ್ಚ್ 2016, 19:45 IST
ಹೆಣ್ಣು ಎಂಬುದೇ ಹೆಮ್ಮೆ
ಹೆಣ್ಣು ಎಂಬುದೇ ಹೆಮ್ಮೆ   

ಯುವ ರಾಜಕಾರಣಿಯೂ ಆಗಿರುವ ಚಿತ್ರನಟಿ ರಮ್ಯಾ ಸಿಡಿಯುವ ಸಾಸಿವೆ ಕಾಳಿನಂತಹ ವ್ಯಕ್ತಿತ್ವದವರು. ಚಿತ್ರರಂಗವಿರಲಿ, ರಾಜಕೀಯವೇ ಇರಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ ಎಂದಾಗ ಗಟ್ಟಿ ದನಿಯಲ್ಲಿ ಪ್ರತಿಭಟಿಸುವವರು. ಮಹಿಳಾ ದಿನದ ಹೊತ್ತಿನಲ್ಲಿ ‘ಪ್ರಜಾವಾಣಿ’ಗೆ ನೀಡಿದ ಚುಟುಕು ಸಂದರ್ಶನ ಇಲ್ಲಿದೆ.

* ರಮ್ಯಾ ಅಂದ್ರೆ ಗಟ್ಟಿಗಿತ್ತಿ ಎಂಬ ಭಾವನೆ ಇದೆ. ಈ ಗಟ್ಟಿತನ ಎಲ್ಲಿಂದ ಬಂತು.
ಅನುಭವ. ಅನುಭವ ಎಲ್ಲರನ್ನೂ ಗಟ್ಟಿಗೊಳಿಸುತ್ತದೆ. ಬದುಕು ಮತ್ತು ಅದರ ವಿವಿಧ ಮಜಲುಗಳಲ್ಲಿ ಸಂಚಿತವಾದ ಅನುಭವದಿಂದ ಕಲಿತ ಪಾಠ ಇದು. ಕೆಲವು ಅಪ್ರಜ್ಞಾಪೂರ್ವಕವಾಗಿ ಜತೆಯಾಗಿವೆ. ಇನ್ನು ಕೆಲವನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ.

* ಗ್ಲಾಮರಸ್ ನಟಿ ನೀವು. ಒಂದೆಡೆ ರಾಜಕಾರಣಿಯಾಗಿ ಹಳ್ಳಿ ಜನರ ಜತೆ ಅವರಂತೆ ಬೆರೆಯುತ್ತಿದ್ದೀರಿ. ಮತ್ತೊಂದೆಡೆ ಟ್ವಿಟರ್‌ನಂತಹ ತಾಣಗಳಲ್ಲಿ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುತ್ತೀರಿ. ಇದೆಲ್ಲ ಹೇಗೆ ಸಾಧ್ಯ?
ಲೈಫ್ ಅಂದ್ರೆ ಸಿಹಿ, ಕಹಿ ಎರಡೂ ಇರುತ್ತೆ.  ಹಳ್ಳಿಲೈಫ್‌, ಸಿಟಿಲೈಫ್‌ ಎಲ್ವೂ ಇರ್ಬೇಕು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೇ ಬದುಕು.

* ಹೆಣ್ಣು ಎಂಬ ಕಾರಣಕ್ಕೆ ತಾರತಮ್ಯಕ್ಕೆ ಒಳಗಾಗಿದ್ದೇನೆ ಎಂದು ಅನಿಸಿದ್ದು ಯಾವಾಗ?
ಚಿತ್ರರಂಗಕ್ಕೆ ಬಂದಾಗ. ಸಂಭಾವನೆಯಿಂದಲೇ ಇದು ಶುರುವಾಗುತ್ತೆ. ಹೀರೊಗಳಿಗೆ ಕೋಟಿಗಟ್ಲೇ ಕೊಡ್ತಾರೆ. ನಮ್ಗೆ ಲಕ್ಷಗಳಲ್ಲಿ. ಬರೀ ಕನ್ನಡ ಚಿತ್ರರಂಗದ ಬಗ್ಗೆ ಮಾತಾಡ್ತಿಲ್ಲ. ಎಲ್ಲ ಚಿತ್ರೋದ್ಯಮಗಳಲ್ಲೂ ಈ ಸಮಸ್ಯೆ ಇದೆ. ಫೈಟಿಂಗ್ ಸೀನ್ ಬಿಟ್ಟು ಮತ್ತೆಲ್ಲವನ್ನೂ ನಾವೂ ಮಾಡ್ತೀವಿ, ಮತ್ಯಾಕೆ ಈ ವ್ಯತ್ಯಾಸ?

* ಹೆಣ್ಣು ಎಂಬ ಹೆಮ್ಮೆ ಅನುಭವಿಸಿದ್ದು ಯಾವಾಗ?
ಇತ್ತೀಚೆಗೆ ಎಚ್‌.ಡಿ. ಕುಮಾರಸ್ವಾಮಿ ಜತೆ ವಾಗ್ವಾದವಾದಾಗ ಅದನ್ನು ನಿಭಾಯಿಸಿದ ರೀತಿಗೆ ನಮ್ಮ ಪಕ್ಷದವರೆಲ್ಲ ನನ್ನನ್ನು ‘ಮಂಡ್ಯದ ಗಂಡು’ ಎಂದು ಹೊಗಳಿದರು. ಹಾಗೆ ಕರೀಬೇಡಿ ನಾನು ಹೆಣ್ಣು ಎಂದು ಹೇಳ್ಕೊಳಕ್ಕೆ ಹೆಮ್ಮೆಪಡ್ತೇನೆ ಎಂದೆ. ನಿಜವಾಗ್ಲೂ ಆ ಹೆಮ್ಮೆ ನನ್ನಲ್ಲಿದೆ.

* ಅತ್ಯಂತ ಕಡಿಮೆ ಅವಧಿಗೆ ಸಂಸದೆಯಾಗಿದ್ದರೂ ಸಂಸತ್ತಿನಲ್ಲಿ ನಿಮ್ಮನ್ನು ಯೂತ್ ಐಕಾನ್ ಎಂದೇ ಗುರುತಿಸಲಾಗಿತ್ತು. ಅಲ್ಲಿನ ಅನುಭವದ ಬಗ್ಗೆ ಹೇಳಿ.
ಒಳ್ಳೆ ಎಕ್ಸ್‌ಪೀರಿಯನ್ಸ್ . ನಾನು ಹೊಸಬಳು ಎಂದು ಎಲ್ರೂ ಹೆಲ್ಪ್‌ ಮಾಡ್ತಿದ್ರು. ಸದನದಲ್ಲಿ ಹೇಗೆ ನಡ್ಕೋಬೇಕು ಅಂತ ಹೇಳ್ಕೊಡ್ತಿದ್ರು.

* ಯುವತಿಯರಿಗೆ ನಿಮ್ಮ ಸಂದೇಶ?
ಬದುಕು ಅಂದ್ರೆ ಅನುಭವಗಳ ಮೂಟೆ.  ಎಂಥದ್ದೇ ಸಂದರ್ಭ, ಯಾವುದೇ ಕಷ್ಟ ಎದುರಾದರೂ  ಧೃತಿಗೆಡಬೇಡಿ. ಯಾವಾಗಲೂ ಬದುಕನ್ನು ಪಾಸಿಟಿವ್ ಆಗಿ ತಗೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.