ADVERTISEMENT

ಹೊಯ್ಸಳರ ಕಾಲದ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 20:05 IST
Last Updated 15 ಫೆಬ್ರುವರಿ 2017, 20:05 IST
ಬೇಲೂರು ತಾಲ್ಲೂಕು ಬೆಟ್ಟದಕೇಶವಿ ಗ್ರಾಮದ ಪುಟ್ಟೇಗೌಡರ ಕಾಫಿ ತೋಟದಲ್ಲಿ ಪತ್ತೆಯಾದ ಹೊಯ್ಸಳರ ಕಾಲದ ಅಪ್ರಕಟಿತ ಶಾಸನವನ್ನು ಪರಿಶೀಲಿಸುತ್ತಿರುವ ಸಂಶೋಧಕ ಹಾಗೂ ಶಾಸನ ತಜ್ಞ ಡಾ.ಶ್ರೀವತ್ಸ ಎಸ್‌.ವಟಿ
ಬೇಲೂರು ತಾಲ್ಲೂಕು ಬೆಟ್ಟದಕೇಶವಿ ಗ್ರಾಮದ ಪುಟ್ಟೇಗೌಡರ ಕಾಫಿ ತೋಟದಲ್ಲಿ ಪತ್ತೆಯಾದ ಹೊಯ್ಸಳರ ಕಾಲದ ಅಪ್ರಕಟಿತ ಶಾಸನವನ್ನು ಪರಿಶೀಲಿಸುತ್ತಿರುವ ಸಂಶೋಧಕ ಹಾಗೂ ಶಾಸನ ತಜ್ಞ ಡಾ.ಶ್ರೀವತ್ಸ ಎಸ್‌.ವಟಿ   

ಬೇಲೂರು: ತಾಲ್ಲೂಕಿನ ಬೆಟ್ಟದಕೇಶವಿ ಗ್ರಾಮದಲ್ಲಿ ಹೊಯ್ಸಳರ ಕಾಲದ ಅಪ್ರಕಟಿತ ಶಾಸನ ಬುಧವಾರ ಪತ್ತೆಯಾಗಿದೆ.

ಬೇಲೂರಿನ ಶಾಸನ ತಜ್ಞ, ಸಂಶೋಧಕ ಡಾ.ಶ್ರೀವತ್ಸ ಎಸ್.ವಟಿ ಅವರು ಇದನ್ನು ಪರಿಶೀಲಿಸಿದ್ದು, ‘ಇದು ಇಲ್ಲಿಯವರೆಗೆ ಶಾಸನ ಸಂಪುಟದಲ್ಲಿ ಅಧಿಕೃತವಾಗಿ ದಾಖಲಾಗಿಲ್ಲ’ ಎಂದು ತಿಳಿಸಿದ್ದಾರೆ.

ಬೇಲೂರಿನ ಪ್ರವಾಸಿ ಮಾರ್ಗದರ್ಶಿ ತೊ.ಚ.ಶಶಿಕುಮಾರ್ ಅವರ ಕೋರಿಕೆಯಂತೆ ಪರಿಶೀಲಿಸಿದಾಗ ಬೆಟ್ಟದಕೇಶವಿ ಗ್ರಾಮದ ಪುಟ್ಟೇಗೌಡ ಅವರ ಕಾಫಿತೋಟದಲ್ಲಿ ಈ ಶಾಸನ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

‘ಸುಮಾರು ಮೂರು ಅಡಿ ಉದ್ದ, ಒಂದೂವರೆ ಅಡಿ ಅಗಲದ ಕ್ಲೊರೇಟಿಕ್‌ಶಿಷ್ಟ್ ಮಿದುಕಲ್ಲಿನ ಶಾಸನ ಇದಾಗಿದೆ. 25 ಸಾಲುಗಳ ಸಾಹಿತ್ಯವಿದೆ. ವಿಷ್ಣುವರ್ಧನನ ಮರಿಮಗ ಎರಡನೇ ನರಸಿಂಹನ ಅಧಿಕಾರಿ ಮಾದ ಎಂಬಾತನು ಚೆನ್ನ ಗೋಪಾಲನಾಥ ದೇವರಿಗೆ ಬೆಟ್ಟದಕೇಶವಿ ಗ್ರಾಮವನ್ನು ದಾನವಾಗಿ ಕೊಟ್ಟ ಬಗ್ಗೆ ದಾಖಲಿಸಲಾಗಿದೆ. ಶಾಲಿವಾಹನ ಶಕೆ 1144 ಚಿತ್ರಭಾನು ಸಂವತ್ಸರದ ಜ್ಯೇಷ್ಠ ಶುದ್ಧ ಪಂಚಮಿ ಭಾನುವಾರ ಎಂಬ ಕಾಲ ನಿರೂಪಣೆ ಇದ್ದು, ಇದು ಕ್ರಿ.ಶ 1222ರ ಆಗಸ್ಟ್ 15 ಗುರುವಾರಕ್ಕೆ ಸಮೀಕೃತವಾಗುತ್ತದೆ’ ಎಂದು  ಸ್ಪಷ್ಟಪಡಿಸಿದ್ದಾರೆ.

‘ಈ ಶಾಸನವು ಹೊಯ್ಸಳರ ಕಾಲದ ಅತಿಸುಂದರ ಲಿಪಿಯನ್ನೂ, ಶುದ್ಧವಾದ ಸಂಸ್ಕೃತ ಭೂಯಿಷ್ಠ ಕನ್ನಡ ಭಾಷೆಯನ್ನೂ, ಶ್ಲೋಕ, ಕಂದ, ವೃತ್ತ ಮುಂತಾದ ಛಂದೋಬದ್ಧ ಭಾಷಾ ಸಾಹಿತ್ಯವನ್ನೂ, ಕಾವ್ಯಚಮತ್ಕಾರಗಳನ್ನೂ ಹೊಂದಿದ ಪುಟ್ಟ ಚಂಪೂ ಕಾವ್ಯದಂತಿದೆ’ ಎಂದು ವಿವರಿಸಿದ್ದಾರೆ.
ಸಮೀಪದಲ್ಲೇ ಗಂಗರ ಕಾಲದ ಮತ್ತೊಂದು ವೀರಗಲ್ಲು ಸಂಶೋಧಿಸಿದ್ದು ಅದು ಬಹಳ ಸವೆದಿರುವುದರಿಂದ ಪ್ರಸ್ತುತ ಓದಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.