ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ, ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಬೇಕಿತ್ತು ಎಂದು ಬಿಜೆಪಿ ಶಾಸಕ ಜಗದೀಶ ಶೆಟ್ಟರ್ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹೊರಟ್ಟಿ ಅವರಂತಹ ಮುತ್ಸದ್ದಿಯನ್ನು ಸಚಿವ ಸ್ಥಾನಕ್ಕೆ ಪರಿಗಣಿಸದೇ ಇರುವುದು ಆಶ್ಚರ್ಯ ತಂದಿದೆ. ಶಿಕ್ಷಣ ಸಚಿವರಾಗಿದ್ದಾಗ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅಂಥವರನ್ನು ನಿರ್ಲಕ್ಷಿಸಿರುವುದು ಸರಿಯಲ್ಲ’ ಎಂದರು.
‘ಕೇವಲ 8ನೇ ಕ್ಲಾಸ್ ಓದಿರುವ ಜಿ.ಟಿ. ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ಕೊಟ್ಟಿದ್ದಾರೆ. ಅಂಥವರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ, ಡಬಲ್ ಡಿಗ್ರಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಏನು ತಾನೇ ಮಾತನಾಡುತ್ತಾರೆ? ಅವರ ಬದಲು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವ ಹೊರಟ್ಟಿ ಅವರನ್ನು ಸಚಿವರನ್ನಾಗಿ ಮಾಡಿದ್ದರೆ, ಆ ಸ್ಥಾನಕ್ಕೆ ಘನತೆ ಸಿಗುತ್ತಿತ್ತು. ಮುಂದೆಯಾದರೂ ಸಿಗುತ್ತದೆಯೇ ಎಂದು ಕಾದು ನೋಡೋಣ’ ಎಂದು ಹೇಳಿದರು.
ಅನಿಶ್ಚಿತ ಸರ್ಕಾರ: ‘ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಅನಿಶ್ಚಿತತೆಯಿಂದ ಕೂಡಿದೆ. ಹದಿನೈದು ದಿನಗಳಾದರೂ ಸಚಿವ ಸ್ಥಾನದ ಬಿಕ್ಕಟ್ಟು ಬಗೆಹರಿದಿಲ್ಲ. ಹೀಗಾದರೆ, ಇವರು ಏನು ಕೆಲಸ ಮಾಡುತ್ತಾರೋ? ಈ ಎಲ್ಲಾ ಬೆಳವಣಿಗೆಗಳನ್ನು ಬಿಜೆಪಿ ಗಮನಿಸುತ್ತಿದೆ. ಪಕ್ಷಕ್ಕೆ ಬರುವವರಿಗೆ ನಾವು ಬೇಡ ಎನ್ನುವುದಿಲ್ಲ. ಆದರೆ, ನಾವಾಗಿಯೇ ಯಾರನ್ನೂ ಕರೆಯುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.