ADVERTISEMENT

ಹೊರ ರಾಜ್ಯಗಳಲ್ಲಿ ಕೋರ್ಸ್‌ ಸ್ಥಗಿತಕ್ಕೆ ಕೆಎಸ್‌ಒಯುಗೆ ಸೂಚನೆ

ಉನ್ನತ ಶಿಕ್ಷಣ ಇಲಾಖೆ ಚಾಟಿ: ತಕ್ಷಣ ವರದಿ ಸಲ್ಲಿಸಲು ಕುಲಪತಿಗೆ ನಿರ್ದೇಶನ

ಬಿ.ಜೆ.ಧನ್ಯಪ್ರಸಾದ್
Published 21 ಜೂನ್ 2015, 20:21 IST
Last Updated 21 ಜೂನ್ 2015, 20:21 IST

ಮೈಸೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ರಾಜ್ಯದ ಹೊರಭಾಗದಲ್ಲಿ ನಡೆಸುತ್ತಿರುವ ಎಲ್ಲ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವಂತೆ ಮತ್ತು ಈ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸದಂತೆ ಉನ್ನತ ಶಿಕ್ಷಣ ಇಲಾಖೆಯು ತಾಕೀತು ಮಾಡಿದೆ.

ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಅವರು ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್‌ ಅವರಿಗೆ ಪತ್ರ ಬರೆದಿದ್ದಾರೆ.

ಜೂನ್‌ 19ರಂದು ಬರೆದಿರುವ ಈ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕೆಎಸ್‌ಒಯು ತನ್ನ ಎಲ್ಲ ಕಾರ್ಯ ಚಟುವಟಿಕೆಗಳನ್ನು ಕರ್ನಾಟಕ ರಾಜ್ಯಕ್ಕೇ ಸೀಮಿತಗೊಳಿಸಬೇಕು. ವೃತ್ತಿ ಶಿಕ್ಷಣ ಕೋರ್ಸ್‌ಗಳಾದ ತಾಂತ್ರಿಕ, ವೈದ್ಯಕೀಯ, ಪ್ಯಾರಾ ಮೆಡಿಕಲ್‌ ಮತ್ತು ನರ್ಸಿಂಗ್‌ ಕೋರ್ಸ್‌ಗಳನ್ನು ಸ್ಥಗಿತಗೊಳಿಸಬೇಕು. ಈಗಾಗಲೇ ಸ್ಥಗಿತಗೊಳಿಸಿದ್ದರೆ, ಆ ಕುರಿತ ವರದಿಯನ್ನು ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಬೇಕು ಎಂದು ಪತ್ರದಲ್ಲಿ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ.

ಹಿಂದೆಯೇ ಸೂಚನೆ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮಗಳನ್ನು ಉಲ್ಲಂಘಿಸಿ ಬಿ.ಇ, ಬಿ.ಟೆಕ್‌ ಇನ್ನಿತರ ತಾಂತ್ರಿಕ ಕೋರ್ಸ್‌ಗಳು ನಡೆಸುತ್ತಿರುವುದು, ಯುಜಿಸಿ 2009ರ ಪ್ರಾದೇಶಿಕ ವ್ಯಾಪ್ತಿ ಮಾನದಂಡ ಉಲ್ಲಂಘಿಸಿ ದೂರ ಶಿಕ್ಷಣ ಪದ್ಧತಿಯಲ್ಲಿ ಎಂ.ಫಿಲ್‌ ಮತ್ತು ಪಿಎಚ್‌.ಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂಬ ತಕರಾರಿಗೆ ಸಂಬಂಧಿಸಿ ವಿಸ್ತೃತವಾದ ವರದಿ ಸಲ್ಲಿಸಲು ಈ ಹಿಂದೆಯೇ ಇಲಾಖೆ ಸೂಚಿಸಿತ್ತು. ಆದರೆ, ಕೆಎಸ್‌ಒಯು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ.

ಮುಕ್ತ ವಿಶ್ವವಿದ್ಯಾಲಯಗಳು ತನ್ನ ವ್ಯಾಪ್ತಿಯನ್ನು ಮೀರಿ ಹೊರ ರಾಜ್ಯಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಪ್ರೊ.ಯಶ್‌ಪಾಲ್‌ ವಿರುದ್ಧದ ಛತ್ತೀಸಗಡ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಈ ತೀರ್ಪು ನೀಡಿತ್ತು. ಅದರಂತೆ ವಿಶ್ವವಿದ್ಯಾಲಯಗಳು ನಿಯಮಗಳ ಅನುಸಾರ ಭೌಗೋಳಿಕ ವ್ಯಾಪ್ತಿ ಮೀರುವಂತಿಲ್ಲ ಎಂಬ ಅಂಶವನ್ನು ಯುಜಿಸಿಯು ಮಾರ್ಗಸೂಚಿಯಲ್ಲಿ ನಿಗದಿಪಡಿಸಿದೆ.

ಆದಾಗ್ಯೂ, ಕೆಎಸ್‌ಒಯು ವ್ಯಾಪ್ತಿ ಮೀರಿ ಚಟುವಟಿಕೆಗಳನ್ನು ವಿಸ್ತರಿಸಿರುವುದು ಹಾಗೂ ತಾಂತ್ರಿಕ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ, ಕೇಂದ್ರ ಮಾನವ ಸಂಪನ್ಮೂಲ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ.

ಮುಕ್ತ ವಿ.ವಿ. ವಿದ್ಯಾರ್ಥಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ತೊಂದರೆಯಾಗುವುದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಆದ್ದರಿಂದ ಈ ಅಂಶಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಖ್ಯಾಂಶಗಳು
* ಅನ್ಯರಾಜ್ಯಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸುವಂತಿಲ್ಲ
* ವೃತ್ತಿಶಿಕ್ಷಣ ಕೋರ್ಸ್‌ ಸ್ಥಗಿತಗೊಳಿಸಿರುವ ಬಗ್ಗೆ ವರದಿ ಸಲ್ಲಿಸಿ
* ವ್ಯಾಪ್ತಿ ಮೀರಿ ಚಟುವಟಿಕೆ; ಸರ್ಕಾರ ಗಂಭೀರ ಪರಿಗಣನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.