ಬೆಂಗಳೂರು: ‘ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕನ್ನಡ ಭಾಷೆಯ ಮೇಲೆ ಆಗಬಹುದಾದ ಪರಿಣಾಮಗಳನ್ನು ತಪ್ಪಿಸಲು ರಾಜ್ಯ ಸರ್ಕಾರವೇ ಕಾನೂನು ರೂಪಿಸುವ ಸಾಧ್ಯತೆ ಕುರಿತು ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಲಿಕಾ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ ಅವರು ಶುಕ್ರವಾರ ವಿಧಾನಸೌಧದಲ್ಲಿ ಕಾನೂನು ತಜ್ಞರು, ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದರು. ಎಲ್ಲರ ಅಭಿಪ್ರಾಯ ಆಲಿಸಿದ ಬಳಿಕ ಸಿದ್ದರಾಮಯ್ಯ ಈ ನಿರ್ಧಾರ ಪ್ರಕಟಿಸಿದರು.
‘ಈಗ ನಮ್ಮ ಎದುರು ಇರುವ ಮಾತೃಭಾಷಾ ಕಲಿಕಾ ಮಾಧ್ಯಮ ವಿವಾದ ಅತ್ಯಂತ ಗಂಭೀರವಾದುದು. ಈ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲು ಸುಪ್ರೀಂಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂಬ ಅಭಿಪ್ರಾಯ ಹಲವು ವಲಯಗಳಿಂದ ವ್ಯಕ್ತವಾಗಿದೆ. ಅದಕ್ಕೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಕಾನೂನು ತಜ್ಞರು ಮತ್ತು ಶಿಕ್ಷಣ ತಜ್ಞರ ಜೊತೆ ಮತ್ತಷ್ಟು ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದರು.
ವಿರೋಧಾಭಾಸದ ತೀರ್ಪು: ಸುಪ್ರೀಂಕೋರ್ಟ್ನ ಸಂವಿಧಾನ ಪೀಠವು ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದೇ ದಿನ ನೀಡಿರುವ ಎರಡು ತೀರ್ಪುಗಳಲ್ಲಿ ವಿರೋಧಾಭಾಸದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದ ತೀರ್ಪಿನಲ್ಲೂ ಸಾಕಷ್ಟು ವೈರುಧ್ಯಗಳಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿಗೂ ಸಂವಿಧಾನ ಪೀಠದ ತೀರ್ಪು ವಿರುದ್ಧವಾಗಿದೆ. ಈ ಎಲ್ಲ ಅಂಶಗಳನ್ನೂ ಪುನರ್ ಪರಿಶೀಲನಾ ಅರ್ಜಿಯಲ್ಲಿ ಉಲ್ಲೇಖಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಲಿಕಾ ಮಾಧ್ಯಮವನ್ನು ಕಡ್ಡಾಯಗೊಳಿಸಲು ಕೇಂದ್ರದ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು ಅಥವಾ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಕಲಿಕಾ ಮಾಧ್ಯಮ ಮತ್ತು ಕನ್ನಡ ಭಾಷೆಯ ಮೇಲೆ ಆಗುವ ಪರಿಣಾಮಗಳನ್ನು ತಡೆಯಲು ರಾಜ್ಯ ಸರ್ಕಾರ ಕಾನೂನು ರೂಪಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಕಾನೂನು ತಜ್ಞರಿಂದ ಉತ್ತರ ಪಡೆಯಲಾಗುವುದು. ನಂತರ ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನಕ್ಕೆ ಬರುತ್ತದೆ ಎಂದರು
ಎನ್‌ಡಿಸಿ ಸಭೆಯಲ್ಲಿ ಪ್ರಸ್ತಾಪ: ಕಲಿಕಾ ಮಾಧ್ಯಮದ ವಿಷಯ ಕೇವಲ ಕನ್ನಡ ಅಥವಾ ಕರ್ನಾಟಕಕ್ಕೆ ಸೀಮಿತವಾದುದಲ್ಲ. ಇತರೆ ಎಲ್ಲ ಪ್ರಾದೇಶಿಕ ಭಾಷೆಗಳು ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಅನ್ವಯವಾಗುತ್ತದೆ. ಹೀಗಾಗಿ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಬೆಂಬಲ ಪಡೆದು ಕಾನೂನು ಹೋರಾಟ ರೂಪಿಸಬೇಕೆಂಬ ಸಲಹೆಯೂ ಬಂದಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸಲಿದೆ ಎಂದು ಭರವಸೆ ನೀಡಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರದ ಮೇಲೆ ಒತ್ತಡ ತರುವಂತೆ ಹಲವರು ಸಲಹೆ ಮಾಡಿದ್ದಾರೆ. ಈ ವಿಷಯವನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಬೇಕೆಂಬ ಒತ್ತಾಯವೂ ಇದೆ. ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಹೆಜ್ಜೆ ಇರಿಸಲಿದೆ ಎಂದರು.
ವಿರೋಧಾಭಾಸ ಪ್ರಶ್ನಿಸಿ ಅರ್ಜಿ: ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಕಲಿಕಾ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ ಸಂವಿಧಾನ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಅದು ವಿಫಲವಾದರೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
‘ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರ ಅಧಿಕಾರ ಚಲಾಯಿಸುವಂತಿಲ್ಲ ಎಂಬ ಅಭಿಪ್ರಾಯವನ್ನು ಸಂವಿಧಾನ ಪೀಠ ವ್ಯಕ್ತಪಡಿಸಿದೆ. ಅದೇ ದಿನ, ಕಡ್ಡಾಯ ಶಿಕ್ಷಣ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಹೇಳಿದೆ. ಈ ವಿರೋಧಾಭಾಸಗಳನ್ನೇ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರಶ್ನಿಸಬಹುದು’ ಎಂದರು.
ಹೊಸ ಮೂಲ ದಾವೆಗೆ ಸಲಹೆ: ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ಜಾರಿಗೊಳಿಸುವುದಕ್ಕೆ ಮುನ್ನ ನಡೆದ ಬೆಳವಣಿಗೆಗಳನ್ನು ಸಂವಿಧಾನ ಪೀಠವು ಹೆಚ್ಚು ಮಾನ್ಯ ಮಾಡಿದೆ. ಈ ಪ್ರಕರಣದ ತೀರ್ಪಿನಲ್ಲಿ ಆರ್‌ಟಿಇ ಕಾಯ್ದೆ ಪ್ರಸ್ತಾಪವೇ ಇಲ್ಲ. ಈ ಅಂಶವನ್ನು ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಬೇಕು ಎಂದು ನಿವೃತ್ತ ನ್ಯಾಯಾಧೀಶ ಕೋ.ಚೆನ್ನಬಸಪ್ಪ ಸಲಹೆ ನೀಡಿದರು.
ಕಲಿಕಾ ಮಾಧ್ಯಮ ವಿಚಾರ ಕೇವಲ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಈ ವಿಷಯದಲ್ಲಿ ಇತರೆ ರಾಜ್ಯಗಳ ಅಭಿಪ್ರಾಯವನ್ನೂ ನ್ಯಾಯಪೀಠ ಆಲಿಸಬೇಕಿತ್ತು. ಕೇಂದ್ರ ಸರ್ಕಾರದ ಅಭಿಪ್ರಾಯವನ್ನೂ ಪಡೆಯಬೇಕಿತ್ತು. ಈ ಪ್ರಕ್ರಿಯೆಯ ನಂತರವೇ ಅಂತಿಮ ನಿರ್ಧಾರಕ್ಕೆ ಬರುವಂತೆ ಪುನರ್ ಪರಿಶೀಲನಾ ಅರ್ಜಿಯಲ್ಲಿ ಮನವಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಿಸ್ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ಸಲಹೆ ಮಾಡಿದರು.
ಎಜಿ – ಕಾಗೇರಿ ವಾಕ್ಸಮರ
ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ವಕೀಲರ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅಡ್ವೊಕೇಟ್ ಜನರಲ್ (ಎಜಿ) ನಡುವೆ ವಾಕ್ಸಮರ ನಡೆಯಿತು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಮಾಜಿ ಸಚಿವರಾದ ಕಾರಣ ಕಾಗೇರಿ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಹಿರಿಯ ವಕೀಲ ಪಿ.ಪಿ.ರಾವ್ ಅವರ ಬದಲಿಗೆ ರವಿವರ್ಮಕುಮಾರ್ ಅವರೇ ವಾದ ಮಂಡಿಸಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇದು ಮಕ್ಕಳನ್ನು ಕೇಂದ್ರವಾಗಿ ಇರಿಸಿಕೊಂಡು ನೀಡಿದ ತೀರ್ಪಲ್ಲ. ಪೋಷಕರು ಮತ್ತು ಶಾಲೆಗಳೇ ತೀರ್ಪಿನ ಕೇಂದ್ರ ಬಿಂದುವಾಗಿವೆ. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗುವವರೆಗೂ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಈ ತೀರ್ಪು ಜಾರಿಯಾದರೆ ದೇಶದ ಒಕ್ಕೂಟ ವ್ಯವಸ್ಥೆಗೆ ಆತಂಕ ಸೃಷ್ಟಿಯಾಗುತ್ತದೆ. ಅದನ್ನು ತಡೆಯಬೇಕು.
–ಡಾ.ಯು.ಆರ್.ಅನಂತಮೂರ್ತಿ
ಈ ಸಮಸ್ಯೆಗೆ ತಕ್ಷಣದ ಪರಿಹಾರವಾಗಿ ಎಲ್ಲ ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸಬೇಕು. ಎಲ್ಲ ಇಂಗ್ಲಿಷೇತರ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸಬೇಕು.
–ಪ್ರೊ.ಸಿ.ಎನ್.ರಾಮಚಂದ್ರನ್
ಈ ವಿಷಯದ ಬಗ್ಗೆ ರಾಷ್ಟ್ರಮಟ್ಟದ ಚರ್ಚೆ ನಡೆಯಬೇಕು. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಜನರು ಚಳವಳಿಗೆ ಸಿದ್ದರಿದ್ದಾರೆ. ಸಾಧ್ಯವಾದರೇ ರಾಜ್ಯ ಸರ್ಕಾರವೇ ಹೋರಾಟದ ನೇತೃತ್ವ ವಹಿಸಬೇಕು. ಆದರೆ, ಆರ್.ಗುಂಡೂರಾವ್ ಅವರ ಸರ್ಕಾರದಂತೆ ಕನ್ನಡ ವಿರೋಧಿ ನಿಲುವು ತಳೆಯುವುದು ಬೇಡ.
–ಪ್ರೊ.ಚಂದ್ರಶೇಖರ ಪಾಟೀಲ
ನೌಕರಿ ಮತ್ತು ಬೆಳವಣಿಗೆ ಜೊತೆ ಇಂಗ್ಲಿಷ್‌ಗೆ ಸಂಬಂಧ ಸೃಷ್ಟಿಯಾಗಿದೆ. ಅದು ಕನ್ನಡಕ್ಕೂ ಪ್ರಾಪ್ತವಾಗಬೇಕು. ಆ ದಿಸೆಯಲ್ಲಿ ಕನ್ನಡ ಮಾಧ್ಯಮದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ಯೋಚಿಸಬೇಕು. ಇಲ್ಲವಾದರೆ ಮಕ್ಕಳು ಕನ್ನಡ ಮಾಧ್ಯಮದ ಶಾಲೆಗಳಿಂದ ದೂರ ಹೋಗುವುದು ಹೆಚ್ಚುತ್ತದೆ.
–ಗಿರೀಶ್ ಕಾರ್ನಾಡ್
ಕಲಿಕಾ ಮಾಧ್ಯಮದ ವಿಷಯದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಹೊರತುಪಡಿಸಿ ಇಡೀ ಕರ್ನಾಟಕ ನಿಮ್ಮ (ಮುಖ್ಯಮಂತ್ರಿಯವರ) ಜೊತೆ ಇದೆ. ಧೈರ್ಯದಿಂದ ಹೋರಾಟ ಮುಂದುವರಿಸಿ.
– ಡಾ.ಕೆ.ಚಿದಾನಂದಮೂರ್ತಿ.
ತೀರ್ಪು ಜಾರಿಯಾಗದಂತೆ ತಡೆಯಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನೂ ಸರ್ಕಾರ ಮಾಡಬೇಕು. ಈ ದಿಸೆಯಲ್ಲಿ ಪೂರ್ಣ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕನ್ನಡಕ್ಕೆ ಇಂತಹ ಸ್ಥಿತಿ ಬರುವುದಾದರೆ ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿ ಉಳಿಯಬೇಕೆ ಎಂಬ ಪ್ರಶ್ನೆಯನ್ನೂ ಎತ್ತಬೇಕಾಗುತ್ತದೆ.
–ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.