ADVERTISEMENT

‘ಎಂದೆಂದೂ ಮುಗಿಯದ ಕಥೆ’ಯಾಗಿ ಮೂರ್ತಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2014, 19:30 IST
Last Updated 24 ಆಗಸ್ಟ್ 2014, 19:30 IST

ಮೈಸೂರು: ಹಿರಿಯ ಸಾಹಿತಿ ಯು.ಆರ್‌.ಅನಂತ­ಮೂರ್ತಿ ಅವರ ಬದುಕು ಹಾಗೂ ಅವರ ಕೃತಿಗಳ ಕುರಿತ ‘ಎಂದೆಂದೂ ಮುಗಿಯದ ಕಥೆ’ ನಾಟಕ­ವನ್ನು ರಾಜ್ಯದಾದ್ಯಂತ ಪ್ರದರ್ಶಿಸಲು ಇಲ್ಲಿನ ‘ಪರಿವರ್ತನ’ ರಂಗ ತಂಡ ಸಜ್ಜಾಗಿದೆ.

ನಗರದ ಸೋಮಾನಿ ಕಾಲೇಜಿನಲ್ಲಿ ಪ್ರಾಂಶುಪಾ­ಲ­­ರಾಗಿರುವ, ರಂಗಕರ್ಮಿ ಎಸ್‌.ಆರ್‌. ರಮೇಶ್ ಅವರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇ­ಶನದ ‘ಎಂದೆಂದೂ ಮುಗಿಯದ ಕಥೆ’ ನಾಟಕ ಈಗಾ­ಗಲೇ 18 ಪ್ರದರ್ಶನ­ಗ­ಳನ್ನು ಕಂಡಿದೆ. 2011­ರಲ್ಲಿ ಪ್ರದರ್ಶನ­ಗೊಂಡ ಈ ಪ್ರಯೋಗವನ್ನು ಅನಂತ­ಮೂರ್ತಿ ಇಲ್ಲಿಯ ರಂಗಾ­ಯಣದ ಭೂಮಿಗೀತ ರಂಗ­­ಮಂದಿರ­ದಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಈ ಪ್ರಯೋಗ ಚೆನ್ನಾಗಿದೆ. ಎಲ್ಲೂ ಅತಿರೇಕಕ್ಕೆ ಹೋಗದೆ, ಹೊಗಳದೆ, ತೆಗಳದೆ ಯಥಾವತ್ತಾಗಿ ನಿರೂಪಿಸಿ­ದ್ದಾರೆ ಎಂದು ಮೆಚ್ಚುಗೆಯಾಡಿದ್ದರು. ಬೆಂಗ­ಳೂರಿನ ರಂಗ ಶಂಕರ ರಂಗ­ಮಂದಿರ­­ದಲ್ಲಿ ನಡೆದ ಪ್ರದರ್ಶನ­ದಲ್ಲಿ ಕುಟುಂಬ ಸಮೇತರಾಗಿ ಬಂದು ನೋಡಿ­ದ್ದರು. ಹೀಗೆಯೇ ಸಮಕಾಲೀನ ಸಾಹಿತಿ­ಗಳ ಬದುಕು ಹಾಗೂ ಕೃತಿಗಳ ಕುರಿತು ನಾಟಕವಾದರೆ ಹೆಚ್ಚು ಜನರಿಗೆ ತಲು­ಪಲು ಸಾಧ್ಯ ಎಂದಿದ್ದರು’ ಎಂದು ಸ್ಮರಿಸಿ­ಕೊಳ್ಳುತ್ತಾರೆ ಎಸ್‌.ಆರ್‌. ರಮೇಶ್‌.

ನಾಟಕದಲ್ಲಿ ಏನೇನಿದೆ?: ಅನಂತ­ಮೂರ್ತಿ ಅವರ ‘ಅವಸ್ಥೆ’ ಕಾದಂಬರಿ­ಯಲ್ಲಿಯ ಚಿತ್ರಣವನ್ನು 45 ನಿಮಿಷ­ಗಳ­ವರೆಗೆ ನಾಟಕದಲ್ಲಿ ಕಟ್ಟಿಕೊಡ­ಲಾಗಿದೆ. ನಂತರ ‘ಸಂಸ್ಕಾರ’ ಕಾಂದಬರಿಯ ನಾರಾಣಪ್ಪ ಹಾಗೂ ಪ್ರಾಣೇಶಾ­ಚಾರ್ಯರ ನಡುವಣ ಬೌದ್ಧಿಕ ಸಂಘ­ರ್ಷದ ದೃಶ್ಯಗಳಿವೆ. ‘ಭಾರತೀಪುರ’ ಕಾದಂಬ­ರಿಯ ನಾಯಕ ಜಗನ್ನಾಥ್‌, ಕೆಳವರ್ಗದವರಿಗೆ ಸಾಲಿಗ್ರಾಮ ಮುಟ್ಟಿ­ಸುವ ಮೂಲಕ ಜಾತಿ ವ್ಯವಸ್ಥೆ ಮೀರುವ ಪ್ರಯತ್ನದ ದೃಶ್ಯವಿದೆ.

ನಂತರ ‘ಆಕಾಶ ಮತ್ತು ಬೆಕ್ಕು’ ಕಥೆಯ ತಂದೆ ಹಾಗೂ ಮಗನ ನಡುವೆ ನಡೆಯುವ ಸಂಘರ್ಷ, ‘ಕ್ಲಿಪ್‌ ಜಾಯಿಂಟ್‌’ ಕಥೆಯ ಪಾಶ್ಚಾತ್ಯ ಹಾಗೂ ದೇಸಿ ಸಂಸ್ಕೃತಿಗಳ ವೈರುಧ್ಯ ಅನಾವರಣದ ದೃಶ್ಯಗಳಿ­ರುತ್ತವೆ. ನಾಟಕದ ಕೊನೆಗೆ ‘ಎಂದೆಂದೂ ಮುಗಿ­ಯದ ಕಥೆ’ ನಿರೂಪಣೆ ಇರುತ್ತದೆ. ಯಾವುದೇ ಕಥೆಯು ನಿರಂತರವಾಗಿ ಸಾಗುತ್ತಿರುತ್ತದೆ ಎನ್ನುವು­ದನ್ನು ಬಿಂಬಿಸುವ ದೃಶ್ಯವಿರುತ್ತದೆ.

ಇದರೊಂದಿಗೆ ಅನಂತಮೂರ್ತಿ ಅವರ ವಿಮರ್ಶೆ, ಸಾಮಾಜಿಕ ಚಿಂತನೆ, ಪರಿಸರ ಕಾಳಜಿ ಕುರಿತ ಲೇಖನಗಳ ನಿರೂಪಣೆ ಇರುತ್ತದೆ. ಅಲ್ಲದೆ, ಅವರ ಬಾಲ್ಯ, ವಿದ್ಯಾಭ್ಯಾಸದ ವಿವರಗಳನ್ನು ಕೊಲಾಜ್ ಮಾಡಲಾಗಿದೆ. ಒಟ್ಟು ಒಂದು ಗಂಟೆ 45 ನಿಮಿಷಗಳ ಈ ನಾಟಕದಲ್ಲಿ ಅನಂತ­ಮೂರ್ತಿ­ಯಾಗಿ ಹಾಗೂ ಕಥೆ, ಕಾದಂಬರಿಗಳ ಪಾತ್ರಗಳಾಗಿ ಜಯರಾಮ್‌ ತಾತಾ­ಚಾರ್ಯ ಪಾತ್ರ ನಿರ್ವಹಿಸು­ತ್ತಾರೆ. ಜತೆಗೆ, ‘ಅಧ್ಯಾಪಕ’ ಎನ್ನುವವರು ಅಭಿನಯಿಸುತ್ತಾರೆ. ಉಳಿದ ಕೆಲ ಪಾತ್ರಗಳಲ್ಲಿ ಹೊಸಬರು ಇರುತ್ತಾರೆ.

ಅರುಣ್‌ಕುಮಾರ್‌ ಅವರ ಬೆಳಕು, ಮಾಧವ ಖರೆ ಅವರ ರಂಗಸಜ್ಜಿಕೆ, ಬಿ.ಎಂ. ರಾಮಚಂದ್ರ ಅವರ ಪ್ರಸಾಧನ ಇರುತ್ತದೆ.
‘ರಮೇಶ್ ಅವರು ನಾಟಕ ಕುರಿತು ಹೇಳಿದಾಗ ಹೇಗೆ ನಾಟಕ ಮಾಡು­ವು­ದೆಂಬ ಚಿಂತೆಯಾಗಿತ್ತು. ಆಮೇಲೆ ಒಂದೊಂದೇ ಕೃತಿಗಳನ್ನು ಆಯ್ದು­ಕೊಂಡೆವು. ಅದರಲ್ಲೂ ಸಂಸ್ಕಾರ ಕಾದಂಬರಿಯ ನಾರಾಣಪ್ಪ ಪಾತ್ರ ಮಾಡಿದಾಗ ಥ್ರಿಲ್‌ ಆಗಿದ್ದೆ. ನಾಟಕ­­­ದೊಳಗೆ ಅನಂತಮೂರ್ತಿ ಪಾತ್ರವಾ­ಗುತ್ತಿದ್ದೆ. ಇದೊಂದು ಸವಾ­ಲಿನ ಪಾತ್ರ. ನಟನಾಗಿ ಒಳ್ಳೆಯ ಅನುಭವ ನನಗೆ. ಮೂಲ ಅನಂತ­ಮೂರ್ತಿ ಎದುರಿಗೆ ಅನಂತಮೂರ್ತಿ ಪಾತ್ರಧಾರಿ­ಯಾಗಿ ಹಾಗೂ ಅವರ ಕಥೆ, ಕಾದಂಬ­ರಿ­ಗಳಲ್ಲಿಯ ಅನಂತಮೂರ್ತಿಯಾಗಿ ಅಭಿನಯಿಸಿದ್ದು ಖುಷಿ ಕೊಟ್ಟಿತ್ತು’ ಎಂದು ಸ್ಮರಿಸುತ್ತಾರೆ ಜಯರಾಮ್‌ ತಾತಾಚಾರ್.

‘ಅನಂತಮೂರ್ತಿ ಅವರಿಗೆ ಶ್ರದ್ಧಾಂ­ಜಲಿ ಸಲ್ಲಿಸುವ ಸಲುವಾಗಿ ರಾಜ್ಯದಾ­ದ್ಯಂತ ಈ ಪ್ರಯೋಗವನ್ನು ಪ್ರದರ್ಶಿ­ಸಲು ಸಜ್ಜಾಗುತ್ತಿದ್ದೇವೆ. ಈ ಪ್ರಯೋ­ಗದ ಮೂಲಕ ಅನಂತ­ಮೂರ್ತಿ ಅವರ ಬದುಕು ಕಥೆ, ಕಾದಂಬರಿ, ವಿಮರ್ಶೆ ಅರಿಯಲು ಪ್ರೇಕ್ಷಕರಿಗೆ ಸಾಧ್ಯವಾಗುತ್ತದೆ. ಆಸಕ್ತರು ನಮ್ಮ ಪರಿವರ್ತನ ತಂಡದ ನಟ ಹಾಗೂ ಸಂಘಟಕ ಮಾಧವ ಖರೆ (98451 11038) ಅವರನ್ನು ಸಂಪರ್ಕಿಸ­ಬಹುದು’ ಎಂದು ಹಂಬಲ ನಾಟಕದ ನಿರ್ದೇಶಕ ರಮೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.