ADVERTISEMENT

‘ಕನ್ನಡ ಕೆಲಸ ಮಾಡಿದ್ದೇನೆ’

ಉದಯ ಯು.
Published 3 ಫೆಬ್ರುವರಿ 2015, 19:30 IST
Last Updated 3 ಫೆಬ್ರುವರಿ 2015, 19:30 IST
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ   

ಶ್ರವಣ ಬೆಳಗೊಳ: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದ­ರ್ಭ­ದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಣ್ಣಪುಟ್ಟ ಕುಂದು­ಕೊರತೆಗಳ ಹೊರತಾಗಿಯೂ ಯಶಸ್ವಿಯಾಗಿದೆ ಎಂಬ ಭಾವ ಒಟ್ಟಾರೆಯಾಗಿ ಮೂಡಿದೆ.

ಈ ಯಶಸ್ಸಿನಲ್ಲಿ ಕನ್ನಡ ಸಾಹಿತ್ಯ ಪರಿ­ಷತ್ತಿನಷ್ಟೇ ಪಾಲು ಅಥವಾ ಅದಕ್ಕಿಂತ ಒಂದು ಕಣದಷ್ಟಾದರೂ ಹೆಚ್ಚು ಪಾಲು ಶ್ರವಣಬೆಳಗೊಳ ಮಠ ಹಾಗೂ ಚಾರು­ಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಸಲ್ಲು­ತ್ತದೆ. ಎರಡೂವರೆ ತಿಂಗಳ ಅತಿ ಸಣ್ಣ ಅವ­ಧಿ­ಯಲ್ಲಿ ಬೃಹತ್‌ ಜಾತ್ರೆ ಆಯೋಜಿ­ಸುವಾಗ ಎದುರಾಗ­ಬಹುದಾದ ಸವಾ­ಲು­ಗಳು ಮತ್ತು ಸಮಸ್ಯೆಗಳನ್ನು ಗಮನ­ದಲ್ಲಿಟ್ಟುಕೊಂಡೇ ಸ್ವಾಮೀಜಿ ಈ ದೊಡ್ಡ ಜವಾಬ್ದಾರಿ ಒಪ್ಪಿಕೊಂಡಿದ್ದರು. ರಾತ್ರಿ ಹಗಲು ನಿದ್ದೆ ಬಿಟ್ಟು, ಮಠದ ಕಾರ್ಯ­ಕರ್ತರ ನಿದ್ದೆ ಬಿಡಿಸಿ ಸಾಹಿತ್ಯ ಪರಿ­ಷತ್ತಿನ ಶತಮಾನೋತ್ಸವ ಸಂದರ್ಭದ ಸಮ್ಮೇ­ಳನ ಸ್ಮರಣೀಯವಾಗುವಂತೆ ಮಾಡಿ­ದ್ದಾರೆ. ಈ ಕೈಂಕರ್ಯದ ಬಗ್ಗೆ ಚಾರು­ಕೀರ್ತಿ ಭಟ್ಟಾರಕ ಸ್ವಾಮೀಜಿ ‘ಪ್ರಜಾ­ವಾಣಿ’ ಜತೆ ಮಂಗಳವಾರ ಅನಿಸಿಕೆ ಹಂಚಿಕೊಂಡರು.

ಧಾರ್ಮಿಕ ಕ್ಷೇತ್ರದಲ್ಲಿ ಕನ್ನಡದ ಕೆಲಸ ನಡೆದಿದೆ, ಇದರಲ್ಲಿ ತಮ್ಮ ಕಾಣಿಕೆಯೂ ಇದೆ. ಬೆಳಗೊಳದಿಂದ ನಾಡಿಗೆ ಹೋದ ಸಂದೇಶವೇನು?

‘ಧರ್ಮ ಮತ್ತು ಸಾಹಿತ್ಯದ ಪರಿಸರ­ಗಳು ವಿಭಿನ್ನ. ಒಂದಕ್ಕೆ ಇನ್ನೊಂದನ್ನು ತಳುಕು ಹಾಕಬಾರದು. ಧಾರ್ಮಿಕ ಕ್ಷೇತ್ರ­ದಲ್ಲಿ ನಡೆದ ಮಾತ್ರಕ್ಕೆ ಸಮ್ಮೇಳನವನ್ನು ಧರ್ಮದ ಹಿನ್ನೆಲೆಯಲ್ಲಿ ನೋಡುವ ಅಗತ್ಯವೂ ಇಲ್ಲ. ಧರ್ಮದ ಹೊರತಾ­ಗಿಯೂ ಶ್ರವಣ ಬೆಳಗೊಳದಲ್ಲಿ ಕನ್ನಡಕ್ಕೆ ಶಾಶ್ವತ ನೆಲೆ ಇದೆ. 500ಕ್ಕೂ ಹೆಚ್ಚು ಕನ್ನಡ ಶಿಲಾ ಶಾಸನಗಳು, ನಾಲ್ಕುಮುಖ ಶಾಸನಗಳು ಸಹ ಇಲ್ಲಿವೆ. ಬೆಳಗೊಳದ ಹಿಂದಿನ ಸ್ವಾಮೀಜಿಗಳೆಲ್ಲರೂ ಕನ್ನಡಕ್ಕೆ ನಿಷ್ಠರಾಗಿದ್ದರು. ಆ ಪರಂಪರೆಯನ್ನು ಮುಂದುವರಿಸಿದ್ದೇವೆ. ಮಠದ ಧಾರ್ಮಿಕ ಹಿನ್ನೆಲೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಮಠದಿಂದ ಸ್ವಲ್ಪ ದೂರದ ಜಾಗವನ್ನು ಸಮ್ಮೇಳನಕ್ಕೆ ಆಯ್ಕೆ ಮಾಡಿದ್ದೇವೆ.

ಕಾಲಾವಕಾಶ ಇಲ್ಲದ ಕಾರಣಕ್ಕೆ ಇಷ್ಟು ದೊಡ್ಡ ಜವಾಬ್ದಾರಿ ಒಪ್ಪಿಕೊಳ್ಳಲು ಹಿಂಜರಿಕೆ ಆಗಲಿಲ್ಲವೇ?
ಇಲ್ಲ, ಜನಸಮೂಹವನ್ನು ನಿಯಂತ್ರಿ­ಸು­ವುದು ಒಂದು ಕಲೆ. ಮಸ್ತಕಾಭಿಷೇಕ ಮಾಡಿದ ಅನುಭವ ಇರುವುದರಿಂದ ನಿಸ್ಸಂಕೋಚವಾಗಿ ಒಪ್ಪಿಕೊಂಡೆ. ಅದ­ಕ್ಕಿಂತ ಮುಖ್ಯವಾಗಿ ‘ಇದು ಕನ್ನಡದ ಸೇವೆ’­ಯಾಗಿದ್ದರಿಂದ ಸಂತೋಷದಿಂದ ಒಪ್ಪಿಕೊಂಡೆ. ಕಾರ್ಯಕರ್ತರು, ಸ್ವಯಂ­ಸೇವಕರ ಪಡೆ ನನ್ನ ಬೆನ್ನಿಗೆ ಇತ್ತು. ಸಣ್ಣ­ಪುಟ್ಟ ಲೋಪದೋಷಗಳು ಆಗಿವೆ. ಜನರು ಅವುಗಳನ್ನು ಮನ್ನಿಸಿದ್ದಾರೆ. ಸಮ್ಮೇ­ಳನ ಯಶಸ್ವಿಯಾಗಿದೆ ಎಂಬ ಮಾತು ಕೇಳಿ ಧನ್ಯತೆ ಮೂಡಿದೆ.

ಕಿರು ಅವಧಿಯಲ್ಲಿ ಸಮ್ಮೇಳನ ಆಯೋ­ಜ­ನೆಯಲ್ಲಿ ಎದುರಾದ ಸವಾಲು­ಗಳೇನು ಮತ್ತು ಅದನ್ನು ಹೇಗೆ ನಿಭಾಯಿಸಿದಿರಿ ?
ವ್ಯವಸ್ಥೆ ಮಾಡುವುದಲ್ಲ, ಎಲ್ಲವುಗಳ ನಡುವೆ ಸಮನ್ವಯ ಸಾಧಿಸುವುದೇ ದೊಡ್ಡ ಸವಾಲು. ಕಸಾಪ ಅಧ್ಯಕ್ಷ ಹಾಲಂಬಿ ಬಂದು ಕೇಳಿದಾಗ ಸಮ್ಮೇಳನ ಮಾಡಲು ಒಪ್ಪಿಕೊಂಡೆ. ಬಳಿಕ ಹಂತ­ಹಂತವಾಗಿ ಸಂಸದ, ಶಾಸಕ, ಉಸ್ತು­ವಾರಿ ಸಚಿವರನ್ನೂ ಒಳಗೊಳ್ಳುವಂಥ ಸಮಿತಿಗಳನ್ನು ಮಾಡಿ, ಹಂತಹಂತವಾಗಿ ಒಂದೊಂದೇ ಮೆಟ್ಟಿಲುಗಳನ್ನು ಏರಿದೆವು. ಅಡುಗೆ ಮನೆ ಹೇಗಿರಬೇಕು, ಎಷ್ಟಿರ­ಬೇಕು ಎಂದು ಮೊದಲು ತೀರ್ಮಾನಿ­ಸಿ­ದೆವು. ಪ್ರತಿ ಅಡುಗೆ ಮನೆಗೂ ಒಂದೊಂದು ಸಮಿತಿ, ಅವರ ಕೆಳಗೆ ಅಡು­ಗೆ­ಯವರು, ಅದಕ್ಕೆ ಉಪಸಮಿತಿ, ಮೇಲ್ವಿ­ಚಾ­ರಣೆಗೆ ಒಬ್ಬ ವ್ಯಕ್ತಿ... ಹೀಗೆ ಒಂದೊಂದೇ ಕೊಂಡಿ ಸೇರಿಸುತ್ತ ಸರಪಳಿ ನಿರ್ಮಿಸಿದೆವು. ಕೊಂಡಿ ಕಳಚಿದಲ್ಲಿ ಮಾತ್ರ ಸಣ್ಣ ಸಮಸ್ಯೆಯಾಗಿದೆ. ಸಮ್ಮೇಳ­ನದ ಜಾಗದಲ್ಲಿ ಐದು ಅಡುಗೆಮನೆಗಳ ಜೊತೆಗೆ ಮಠದ ಆವರಣದಲ್ಲಿ ಆರನೇ ಅಡುಗೆ ಮನೆ ಮಾಡಿದ್ದೆವು. ಬೆಟ್ಟಕ್ಕೆ ಬರುವವರಿಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು, ಪ್ರತಿದಿನ ಸುಮಾರು 15ಸಾವಿರ ಜನ ಇಲ್ಲಿ ಊಟ ಮಾಡಿದ್ದಾರೆ.
ಪಾರ್ಕಿಂಗ್‌ ಮತ್ತಿತರ ವ್ಯವಸ್ಥೆಗಳ ಬಗ್ಗೆಯೂ ಪ್ರತ್ಯೇಕ ಅಧ್ಯಯನ ಮಾಡಿ, ಸೂಕ್ತ ವ್ಯವಸ್ಥೆ ಮಾಡಿದ್ದೇವೆ.

ಸಮ್ಮೇಳನದ ಈ ವ್ಯವಸ್ಥೆಗೆ ಮಠ­ದಿಂದ ಎಷ್ಟು ಖರ್ಚು ಮಾಡಿದ್ದೀರಿ?
ಕನ್ನಡದ ಕೆಲಸಕ್ಕೆ ಹಣದ ಲೆಕ್ಕ ಹಾಕುತ್ತಾರೆಯೇ? ಮನೆಗೆ ಅತಿಥಿಗಳು ಬಂದಾಗ ಹಣದ ಮುಖ ನೋಡದೆ ಬೇಕಾದ್ದನ್ನು ಮಾಡಬೇಕು ಅಷ್ಟೇ. ಅದನ್ನು ನಾವು ಮಾಡಿದ್ದೇವೆ. ಖರ್ಚು ವೆಚ್ಚದ ವಿಚಾರ ಬರುವುದಿಲ್ಲ.

ರಾತ್ರಿ ನಿದ್ದೆ–ಊಟ ಬಿಟ್ಟು ಕೆಲಸ ಮಾಡಲು ಕಷ್ಟವಾಗಲಿಲ್ಲವೇ?
ಸಂಸ್ಥೆಯವರು ಯಾವತ್ತೂ ಕಷ್ಟದ ಕೆಲಸ­ವನ್ನೇ ವಹಿಸಿಕೊಳ್ಳಬೇಕು. ಸಣ್ಣ­ಪುಟ್ಟ ಮತ್ತು ಸುಲಭದ ಕೆಲಸಗಳನ್ನು ಜನರೇ ಮಾಡುತ್ತಾರೆ. ಸಾಮಾನ್ಯರಿಂದ ಸಾಧ್ಯವಾಗದ ಕೆಲಸಗಳನ್ನು ಸಂಸ್ಥೆಗಳು ಮಾಡಬೇಕು. ನಿದ್ದೆ ಸ್ವಲ್ಪ ಕಡಿಮೆ ಆಗಿದೆ ನಿಜ, ಮೊದಲ ದಿನ ರಾತ್ರಿ ನಾನಾಗಲಿ, ನಮ್ಮ ಕಾರ್ಯಕರ್ತರಾಗಲಿ ಒಂದು ಕ್ಷಣವೂ ನಿದ್ದೆ ಮಾಡಿಲ್ಲ. ನಿದ್ದೆ ಮಾಡಿ­ದರೆ ಎಲ್ಲಿ ನಮ್ಮ ಯೋಜನೆ ಕೈಕೊಡು­ವುದೋ ಎಂಬ ಭಯ ಇತ್ತು. ರಾತ್ರಿ­ಯಲ್ಲೂ ಆಗಾಗ ಸ್ಥಳಕ್ಕೆ ಭೇಟಿಕೊಟ್ಟು ಪರಿ­ಶೀಲನೆ ಮಾಡಿದ್ದೇವೆ. ಅದು ಫಲ ನೀಡಿದೆ’ ಎಂದು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಮಂಗಳವಾರವೂ ಸ್ವಾಮೀಜಿ ನಸುಕಿ­ನಲ್ಲೇ ಎಲ್ಲ ಅಡುಗೆ ಮನೆಗಳಿಗೆ ಭೇಟಿ ಕೊಟ್ಟು ಅಡುಗೆಯವರು, ಕಾರ್ಯ­ಕರ್ತರ ಬೆನ್ನು ತಟ್ಟಿ ‘ಇನ್ನು ಒಂದು ದಿನ ಗೆಲ್ಲಬೇಕು’ ಎಂದು ಹುರಿದುಂಬಿಸುತ್ತಿ­­ದ್ದರು. ಸಂಜೆಯೂ ಎಲ್ಲ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.