ಬೆಂಗಳೂರು: ಒಮ್ಮೆ ಗೋಪಾಲಕೃಷ್ಣ ಅಡಿಗರು, ‘ಇವನ ಅನುಭವ ತೆಳುವು’ ಎಂದು ಟೀಕಿಸುತ್ತಾರೆ. ಅದಕ್ಕೆ ತಿರುಗೇಟು ನೀಡುವ ಕೆ.ಎಸ್.ನರಸಿಂಹಸ್ವಾಮಿ (ಕೆ.ಎಸ್.ನ), ‘ಇವನ ಅನುಭವ ತೆಳುವು ಎಂಬ ಟೀಕೆಗೆ ನಕ್ಕೆ. ಎಂಟು ಮಕ್ಕಳು ನನಗೆ, ಉತ್ತರಿಸಿದೆ’ ಎಂದಿದ್ದರು.
ಮತ್ತೊಮ್ಮೆ ಅಡಿಗರು ‘ನಡೆದುಬಂದ ದಾರಿ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎನ್ನುತ್ತಾರೆ. ಅದಕ್ಕೆ ಎದಿರೇಟು ನೀಡುವ ಕೆ.ಎಸ್.ನ, ‘ನಡೆದ ದಾರಿಯ ತಿರುಗಿ ನೋಡಬಾರದು ಏಕೆ?’ ಎಂದು ಪ್ರಶ್ನಿಸುತ್ತಾರೆ.
ಅಲ್ಲಿಗೇ ವಾಗ್ವಾದ ನಿಲ್ಲುವುದಿಲ್ಲ. ‘ಅವರ ದನಿ ಯಕ್ಷಗಾನದ ರೀತಿ; ನನ್ನ ದನಿ ತಂಪಾದ ಸಂಜೆಯಲ್ಲಿ ಗೆಳಯರಿಬ್ಬರು ಕುಳಿತು ಎತ್ತರಕ್ಕೇರದೆಯೇ ಮಾತನಾಡುವ ರೀತಿ’ ಎಂದು ಅಡಿಗರ ‘ಭೂಮಿಗೀತ’ಕ್ಕೆ ತಮ್ಮ ‘ಕುಂಕುಮ ಭೂಮಿ’ಯಲ್ಲಿ ಸಮರ್ಥ ಉತ್ತರ ನೀಡಿದ್ದು ನರಸಿಂಹಸ್ವಾಮಿ.
ಅಡಿಗರು ಹಾಗೂ ನರಸಿಂಹಸ್ವಾಮಿ ನಡುವಿನ ವಾಗ್ವಾದವನ್ನು ಈ ರೀತಿ ಬಿಚ್ಚಿಟ್ಟಿದ್ದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.
ಕೆ.ಎಸ್.ನ ಜನ್ಮಶತಮಾನೋತ್ಸವ ಅಂಗವಾಗಿ ಸಾಹಿತ್ಯ ಅಕಾಡೆಮಿ ಹಾಗೂ ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಕನ್ನಡದಲ್ಲಿ ಅಡಿಗರು ಒಂದು ಮಾದರಿಯಾದರೆ ಕೆ.ಎಸ್.ನ ಮತ್ತೊಂದು ಮಾದರಿ. ಯಾವುದೇ ಚಳವಳಿಗೆ ಸೇರದ ಕೆ.ಎಸ್.ನ ಅವರು ನವ್ಯದ ಪ್ರಖರ ಪ್ರತಿಭೆ ಅಡಿಗರ ಜೊತೆ ಕಾವ್ಯದ ಮೂಲಕವೇ ವಾಗ್ವಾದ ನಡೆಸಿದರು’ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.
‘ಯು.ಆರ್.ಅನಂತಮೂರ್ತಿ ಹೇಳುವಂತೆ ಅಡಿಗರದ್ದು ಗಣಿಗಾರನ ಕೆಲಸವಾದರೆ ನರಸಿಂಹಸ್ವಾಮಿ ಅವರದ್ದು ಬೇಸಾಯಗಾರನ ಕೆಲಸ. ಕೃಷಿಕಾಯಕದಲ್ಲಿ ನಂಬಿದ ಕವಿ. ಬದುಕನ್ನು, ನೆಲವನ್ನು ಗಾಢವಾಗಿ ಪ್ರೀತಿಸಿದವರು. ನೆಲವನ್ನೇ ದೇವರು ಎಂದವರು. ಆದರೆ, ಅಡಿಗರು ನೆಲದಲ್ಲಿ ಕಾಲಿಟ್ಟು, ಆಕಾಶಕ್ಕೆ ಕೈ ಚಾಚಿದ ಕವಿ’ ಎಂದು ವ್ಯಾಖ್ಯಾನಿಸಿದರು. ‘ರತ್ನಾಕರವರ್ಣಿ ಬಿಟ್ಟರೆ ಶೃಂಗಾರವನ್ನು ಕೆ.ಎಸ್.ನ ರೀತಿ ವರ್ಣಿಸಿದವರು ಮತ್ತೊಬ್ಬರಿಲ್ಲ. ಶೃಂಗಾರವನ್ನು ವರ್ಣಿಸುವುದು ಕಷ್ಟದ ಕೆಲಸ. ಕೊಂಚ ಹದ-ಗೆಟ್ಟರೆ ಅಶ್ಲೀಲವಾಗಿಬಿಡುತ್ತದೆ. ಸ್ವಲ್ಪ ಗಂಭೀರವಾದರೆ ನೀರಸವಾಗಿಬಿಡುತ್ತದೆ. ಹಾಗೇ, ನೋವನ್ನು ಅರಗಿಸಿಕೊಂಡು ಅದರಾಚೆಯ ಚೆಲುವನ್ನು ಹಿಡಿಯುವ ಪ್ರಯತ್ನವನ್ನು ಕೆ.ಎಸ್.ನ ಮಾಡಿದ್ದಾರೆ’ ಎಂದು ವಿಶ್ಲೇಷಿಸಿದರು.
ಮಾದಕತೆ ತಂದುಕೊಟ್ಟರು: ಹಿರಿಯ ಕವಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಕಾವ್ಯಕ್ಕೆ ಮಾದಕತೆ ತುಂಬಿದ್ದು ನರಸಿಂಹಸ್ವಾಮಿ. ದಾಂಪತ್ಯ ಗೀತೆಗಳ ಮೂಲಕ ಕನ್ನಡ ಭಾಷೆಯನ್ನು ಹದಗೊಳಿಸಿದ್ದಾರೆ. ಕನ್ನಡ ಕಾವ್ಯಕ್ಕೆ ಸೊಗಸು, ಕೋಮಲತೆ, ಮಾಧುರ್ಯ ತುಂಬಿದ್ದಾರೆ’ ಎಂದು ಬಣ್ಣಿಸಿದರು.
‘ಅಡಿಗರು ಅಬ್ಬರದ ಕವಿ. ಬೇಂದ್ರೆ ಲೌಕಿಕ ದೃಷ್ಟಿಯಿಂದ ನೋಡಿದವರು. ಆದರೆ, ಕಾವ್ಯಗಳನ್ನು ಮಾದಕತೆ ದೃಷ್ಟಿಯಲ್ಲಿ ಕೃಷಿ ಮಾಡಿದ್ದು ಕೆ.ಎಸ್.ನ’ ಎಂದು ಅಭಿಪ್ರಾಯಪಟ್ಟರು.
ನಮ್ಮೊಳಗಿನ ಕವಿ: ಹಿರಿಯ ಲೇಖಕಿ ಕಮಲಾ ಹಂಪನಾ ಅವರು, ‘ಕೆ.ಎಸ್.ನ ಕಾವ್ಯಗಳಲ್ಲಿ ಪರಿಶುದ್ಧ ದಾಂಪತ್ಯದ ಚಿತ್ರಣಕಾಣಬಹುದು. ನವಿರಾದ ಭಾವನೆಗಳಿವೆ. ಸಜ್ಜನಿಕೆಯಿಂದ ಕೂಡಿದ್ದು ಎಲ್ಲೂ ಅಶ್ಲೀಲತೆ ನುಸುಳದಂತೆ ನೋಡಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ನರಸಿಂಹಸ್ವಾಮಿ ನಮ್ಮೊಳಗಿನ ಕವಿ. ಮಣ್ಣಿನ ವಾಸನೆ ಹಿಡಿದು ಬರೆದ ದೇಸಿ ಕವಿ. ಜನರ ಭಾವನೆ ಅರ್ಥ ಮಾಡಿಕೊಂಡು ಬದುಕಿನ ಸೌಂದರ್ಯ ಕಟ್ಟಿಕೊಟ್ಟವರು’ ಎಂದರು.
ಕಾರ್ಯಕ್ರಮದಲ್ಲಿ ನರಸಿಂಹಸ್ವಾಮಿ ಪುತ್ರಿ ತುಂಗಾಭದ್ರ, ಪುತ್ರ ಹರಿಹರ, ಮೊಮ್ಮಗಳು ಮೇಕಲಾ ಹಾಗೂ ಜೈನ್ ಕಾಲೇಜಿನ ಡೀನ್ ಶಾಂತಿ ಅಯ್ಯರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.