ADVERTISEMENT

‘ಕುಲಚಿಹ್ನೆಯಾಗಿ ಆಮೆ ಇಟ್ಟುಕೊಳ್ಳಿ’

‘ಕನಸಿನ ನಂತರ: ಆಸ್ಟ್ರೇಲಿಯಾ ಮೂಲನಿವಾಸಿ ಸಾಹಿತ್ಯ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಮೈಸೂರು: ‘ಆಚೆಗೆ ನೂಕಲ್ಪಟ್ಟಿ­ರು­ವ­ವರು, ನೂಕಲ್ಪಡುತ್ತಿರುವವರು, ಆದಿ­ವಾಸಿ­ಗಳು, ಅಲ್ಪಸಂಖ್ಯಾ­ತರು ಆಮೆ­ಯನ್ನು ಕುಲ­ಚಿಹ್ನೆ­ಯಾ­ಗಿಟ್ಟು­ಕೊಳ್ಳ­ಬೇಕು’ ಎಂದು ಸಾಹಿತಿ ದೇವನೂರ ಮಹಾ­ದೇವ ಹೇಳಿದರು.

ಆಸ್ಟ್ರೇಲಿಯಾ ಸರ್ಕಾರದ ಆಸ್ಟ್ರೇ­ಲಿಯಾ ಕೌನ್ಸಿಲ್ ಫಾರ್ ದಿ ಆರ್ಟ್ಸ್ ಸಹಭಾಗಿತ್ವದಲ್ಲಿ ಮಾನಸ­ಗಂಗೋ­ತ್ರಿಯ ಇಂಗ್ಲಿಷ್‌ ಅಧ್ಯಯನ ವಿಭಾಗ­ದಲ್ಲಿ ಆಯೋಜಿ­­ಸಿರುವ ‘ಕನಸಿನ ನಂತರ: ಆಸ್ಟ್ರೇಲಿಯಾ ಮೂಲ­ನಿವಾಸಿ ಸಾಹಿತ್ಯ’ ಕುರಿತ ಅಂತರ­ರಾಷ್ಟ್ರೀ­­ಯ­ಮಟ್ಟದ ವಿಚಾರ ಸಂಕಿರಣದ ಉದ್ಘಾ­ಟ­ನೆ­­ಯಲ್ಲಿ ಸೋಮ­ವಾರ ಅವರು ಆಶಯ ಭಾಷಣ ಮಾಡಿದರು.

‘ಆಮೆಯು ಚಿಪ್ಪು ಇರುವುದ­ರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಆಮೆಯ ನಿಧಾನವಾದ ನಡಿಗೆ, ಏಟು ಬಿದ್ದರೂ ಸಾಯದಂತೆ ನೋಡಿ­­ಕೊಳ್ಳುವ ಚಿಪ್ಪು, ಅಪಾಯ ಎದುರಾದಾಗ ತಲೆ­ಯನ್ನು ಒಳಗೆ ಎಳೆದುಕೊಳ್ಳುವ ಬಗೆ ಇವೆಲ್ಲ­ವನ್ನೂ ನಾವು ಮೈ­ಗೂ­­­­­ಡಿಸಿ­ಕೊಳ್ಳಬೇಕು’ ಎಂದರು. 

‘ಆಸ್ಟ್ರೇಲಿಯಾ ಬಗ್ಗೆ ಮತ್ತು ಅಲ್ಲಿನ ಜೀವನ ಹಾಗೂ ಸಾಹಿ­ತ್ಯದ ಬಗ್ಗೆ ಹೆಚ್ಚಾಗಿ ನನಗೆ ತಿಳಿ­ದಿಲ್ಲ. ನಾಲ್ಕಾರು ದಿನಗಳ ಹಿಂದೆ ಒಂದಷ್ಟನ್ನು ಓದಿ ತಿಳಿದು­ಕೊಂ­ಡಿ­ದ್ದೇನೆ ಅಷ್ಟೇ. ಆಸ್ಟ್ರೇಲಿ­ಯಾಕ್ಕೂ ಹಾಗೂ ಅಲ್ಲಿನ ಚೊಚ್ಚಲ ಮಕ್ಕ­ಳಾದ ಮೂಲವಾಸಿಗಳಿಗೂ ಸಂಬಂಧ­­­ವಿದೆ. ಆಸ್ಟ್ರೇಲಿಯಾ ಮೂಲ­­ನಿವಾಸಿಗಳ ದಂತ­ಕ­ಥೆ­­ಗ­ಳಲ್ಲಿ, ಮೂಲನಿವಾಸಿಗಳ ಮೇಲೆ ನಡೆದ ಅಮಾನುಷ ಹಾಗೂ ನರ­ಭಕ್ಷಕ ಕೃತ್ಯಗಳ ಪ್ರಸ್ತಾಪ ಇದೆ. ಐರೋಪ್ಯರ ದಾಳಿಗೆ ತತ್ತರಿಸಿದ ಅಲ್ಲಿನ ಮೂಲ­ನಿವಾಸಿ­ಗಳು ಬಹಳ ನೋವು ಅನುಭವಿಸಿ­ದ್ದಾರೆ. ಅಲ್ಲಿ ಇಂದೂ ಭೂಮಿಗೆ ಪಾಠ ಮಾಡಬಲ್ಲ ದಂತಕತೆ­ಗಳಿವೆ’ ಎಂದು ಹೇಳಿದರು.

‘ಭಾರತದಲ್ಲಿ ಅಪರಿಚಿತರು ಪರಸ್ಪರ ಭೇಟಿಯಾದಾಗ ಸಾಮಾನ್ಯ­­ವಾಗಿ ಕೇಳುವ ಮೊದಲ ಪ್ರಶ್ನೆ, ನೀವು ಯಾವ ಜನ? ಈ ರೀತಿ ಕೇಳುವವರು ಜನರೇ, ಹೇಳುವವರೂ ಜನರೇ ಆಗಿ­ರುತ್ತಾರೆ. ಆದರೆ, ಈ ಪ್ರಶ್ನೆ ಯಾಕೆ? ಪರಿಪಾಠ ಯಾಕೆ ಎಂಬುದು ನನ್ನನ್ನು ಅಸಂಗತ­ವಾಗಿ ಕಾಡುತ್ತಿರುವ ಪ್ರಶ್ನೆಯಾ­ಗಿದೆ. ನೀನು ಯಾವ ಜಾತಿ­ಯ­ವನು ಎಂಬುದು ಈ ಪ್ರಶ್ನೆಯ ಒಳಅರ್ಥ­ವಾ-ಗಿದೆ. ಒಂದು ಜಾತಿಗೆ ಸೇರಿದವರು ಒಂದು ಜನ, ಮತ್ತೊಂದು ಜಾತಿಗೆ ಸೇರಿ­ದ­ವರು ಮತ್ತೊಂದು ಜನ. ಇಂದು ಜನರ ನಡುವೆ ಸಂಬಂಧವೇ ಇಲ್ಲ, ಇಡೀ ಜಗತ್ತೇ ಬೇರೆ­ಯಾಗಿದೆ. ಇದನ್ನು ನೆನ­ಪಿ­ಸಿ­­ಕೊಂಡರೆ ತುಂಬಾ ವಿಷಾದ­ವಾ­ಗು­ತ್ತದೆ’ ಎಂದರು.

‘ಇದಕ್ಕಿಂತ ಭೀಕರವಾದುದು    ಎಂದರೆ,   1770ರಲ್ಲಿ ಆಸ್ಟ್ರೇ­ಲಿಯಾ­  ಸುತ್ತಿದ ಬ್ರಿಟನ್‌ ನಾವಿಕ ಕ್ಯಾಪ್ಟನ್‌ ಜೇಮ್ಸ್‌ ಕುಕ್‌ ಎಂಬಾತ ಸುಮಾರು 60 ಸಾವಿರ ವರ್ಷಗಳಿಂದ ಆಸ್ಟ್ರೇ­ಲಿಯಾ­­­­ದಲ್ಲಿ ವಾಸವಾಗಿದ್ದ ಲಕ್ಷಾಂತರ ಮೂಲ­ನಿವಾಸಿ­ಗ­ಳನ್ನು ಲೆಕ್ಕಿಸದೆ, ಅವರ ಅಸ್ತಿತ್ವ ಪರಿಗಣಿಸದೇ  ಆಸ್ಟ್ರೇಲಿಯಾ­ವನ್ನು ನಿರ್ಜನ ಭೂಮಿ ಎಂದು ಘೋಷಣೆ ಮಾಡಿದ್ದು. ಈ ಐರೋ­ಪ್ಯನ ಕಣ್ಣಿಗೆ ಮೂಲ ನಿವಾಸಿ­ಗಳು ಜನರಾಗಿ ಕಾಣು­ವು­ದಿಲ್ಲ. ಇದು ಮನುಷ್ಯತ್ವದ ಭೀಕರ ದುರಂತ’ ಎಂದರು

ನೋವಿಗೆ ಒಳಗಾದವರು ದೇಹಕ್ಕೆ ಮನಸ್ಸಿಗೆ ಶರಣಾಗು­ವು­ದರ ಅನಿವಾ­ರ್ಯತೆ, ವಿವೇಕ ಪಡೆ­­ಯುತ್ತಾರೆ. ದೈಹಿಕ ಹಸಿವು, ನೋವು ಮತ್ತು ಭಯದ ಪರಿ­ಣಾಮ ನಿಯಂತ್ರಿಸಿಕೊಳ್ಳು­­ವುದು ಒಂದು ಸಾಮರ್ಥ್ಯ. ಆದರೆ, ನಾವು ಇಂದು ನಮ್ಮ ಮಕ್ಕಳಿಗೆ ಹಸಿ­­ವಾ­ಗ­ದಂತೆ, ನೋವಾ­­­ಗ­ದಂತೆ ಮತ್ತು ಭಯ­ವಾಗ­ದಂತೆ ಬೆಳೆ­ಸುತ್ತಿದ್ದೇವೆ. ಹೀಗೆ, ಮಕ್ಕ­ಳನ್ನು ಬೆಳೆ­ಸುತ್ತಿರುವ ಜನಾಂಗಕ್ಕೆ ಆಸ್ಟ್ರೇ­ಲಿಯಾ ಮೂಲ­ವಾಸಿ­ಗಳ ಕಥೆ ಕಪಾಳಕ್ಕೆ ಹೊಡೆ­ಯು­­ವಂತಿದೆ’ ಎಂದರು.

ಆಸ್ಟ್ರೇಲಿಯಾದ ಮೂಲನಿ­ವಾ­­ಸಿ­­ಗಳ ಕುರಿತ ವಿವಿಧ ದಂತ­ಕಥೆ­ಗಳ ಬಗ್ಗೆ ಅವರು ಉಲ್ಲೇಖಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ. ಬೆಳ್ಳಿ­ಯಪ್ಪ, ಪ್ರೊ.ಸಿ.ಪಿ. ರವಿ­ಚಂದ್ರ ಮಾತ­ನಾ­­ಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.­ಮಹದೇವ ಅಧ್ಯಕ್ಷತೆ ವಹಿ­ಸಿದ್ದರು. ಪ್ರೊ.ಸುಮಿತ್ರಾಬಾಯಿ, ಪ್ರೊ.ಕೆ.ಟಿ. ಸುನೀತಾ ಇದ್ದರು.

ನಂತರ ಸಂವಾದ ನಡೆಯಿತು. ಆಸ್ಟ್ರೇಲಿಯಾ ಆದಿವಾಸಿ ಬರಹಗಾರ­ರಾದ ಮೇರಿ ಮುಂಕಾರ, ಡಾ.ಜೀಯಾ­ನೈನ್ ಲೀಯಾನೆ, ಡಾ.ಡೈಲಾನ್ ಕೋಲ್ಮನ್, ಬ್ರೆಂಟನ್ ಮೆಕೆನ್ನ ಮೊದ­ಲಾ­ದ­ವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.