ಮೈಸೂರು: ‘ಮಗಳು ಕಂಡಂತೆ ಕುವೆಂಪು’ ಕೃತಿ ಬಂದು 11 ವರ್ಷಗಳಾಯಿತು. ಈಗ ಅಮ್ಮ ಹೇಮಾವತಿ ಕುರಿತು ಬರೆಯುತ್ತಿರುವೆ. ಇದರಲ್ಲಿ ತಂದೆ ಮೂಲಕ ಅಮ್ಮನನ್ನು ಕಂಡಿದ್ದನ್ನು ದಾಖಲಿಸುವೆ. ಇದನ್ನು 2015ರೊಳಗೆ ಮುಗಿಸುವ ಯೋಜನೆಯಿದೆ’ ಎಂದು ಕುವೆಂಪು ಅವರ ಪುತ್ರಿ ತಾರಿಣಿ ತಿಳಿಸಿದರು.
ಕುವೆಂಪು ವಾಸವಿದ್ದ ‘ಉದಯರವಿ’ ಮನೆಯಲ್ಲಿ ಪತಿ, ಶಿವಮೊಗ್ಗದ ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅವರೊಂದಿಗೆ ವಾಸವಾಗಿರುವ ಅವರು, ಕುವೆಂಪು ಅವರ 111ನೇ ಜನ್ಮದಿನದ (ಡಿ. 29) ಅಂಗವಾಗಿ ಕುಪ್ಪಳಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ವೇಳೆ ಭಾನುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
‘ಅಮ್ಮನ ಹೆತ್ತವರಾದ ಸೀತಮ್ಮ ಹಾಗೂ ರಾಮಣ್ಣಗೌಡ ಅವರ ಕುರಿತು, ಅವರಿಂದ ಅಮ್ಮ ಹೇಗೆ ಪ್ರಭಾವಿತಳಾದಳು, ತಂದೆಗೆ ಹೇಗೆ ಸಹಕಾರಿಯಾದಳು. ತಂದೆಯವರು ‘ರಾಮಾಯಣ ದರ್ಶನಂ’ ಮಹಾಕಾವ್ಯ ಬರೆಯುವಾಗ ತೊಂದರೆಯಾಗದ ಹಾಗೆ ನಾಲ್ಕು ಮಕ್ಕಳನ್ನು ನೋಡಿಕೊಂಡಳು, ಅಮ್ಮನನ್ನು ಅಂತಿಮ ಸಂಸ್ಕಾರಕ್ಕಾಗಿ ಒಯ್ಯುವ ಮುನ್ನ ಆಕೆಯ ಕಾಲನ್ನು ಮುಟ್ಟಿ ತಂದೆ ನಮಸ್ಕಾರ ಮಾಡಿದ್ದನ್ನು ಬಿ.ಎಸ್. ರುಕ್ಕಮ್ಮ ಮೇಡಮ್ ಹೇಳಿದ್ದರು. ಅಮ್ಮನನ್ನು ದೇವಿ ಸ್ವರೂಪಳು ಎಂದೇ ತಂದೆ ತಿಳಿದಿದ್ದರು.
ಅಮ್ಮನ ಕುರಿತೇ ಅನೇಕ ಕವಿತೆಗಳನ್ನು ಬರೆದರು. ಹೀಗೆ, ಅಮ್ಮನ ಕುರಿತು ಪುಸ್ತಕ ಬರೆದರೂ ತಂದೆಯ ಕುರಿತಾಗಿರುತ್ತದೆ. ಮಗಳು ಕಂಡಂತೆ ಕುವೆಂಪು ಕೃತಿಯಲ್ಲೂ ಅಮ್ಮನ ಕುರಿತ ವಿವರಗಳಿವೆ. ಆದರೆ, ಅಲ್ಲಿ ಇರದ ವಿವರಗಳು ಹೊಸ ಕೃತಿಯಲ್ಲಿ ಸಿಗಲಿವೆ’ ಎನ್ನುವ ವಿವರ ಅವರದು.
‘ಪ್ರತಿ ವರ್ಷ ಡಿ. 29ರಂದು ನಮಗೆಲ್ಲ ಹಬ್ಬ. ಅಂದು, ನಮ್ಮ ತಂದೆ ಕುವೆಂಪು ಜನ್ಮದಿನ. ಆ ದಿನ ಬೆಳಿಗ್ಗೆ ಆರು ಗಂಟೆಗೆ ತಂದೆಯವರ ಆಪ್ತ ಶಿಷ್ಯ ಪ್ರಭುಶಂಕರ, ಅವರ ಪತ್ನಿ ಶಾಂತಾ ಅವರು ಬುಟ್ಟಿ ತುಂಬ ಹಣ್ಣು ತಂದು ಶುಭಾಶಯ ಕೋರುತ್ತಿದ್ದರು. ಅವರು ವಾಪಸು ಹೋಗುವಾಗ ಅಮ್ಮ ಹೇಮಾವತಿ ಹಣ್ಣು ಕೊಟ್ಟು ಕಳುಹಿಸುತ್ತಿದ್ದಳು’ ಎಂದು ಸ್ಮರಿಸಿಕೊಂಡರು.
‘ನಮ್ಮ ತಂದೆಗೆ ಶುಭ ಕೋರಲು ಬೆಳಿಗ್ಗೆ ಆರು ಗಂಟೆಯಿಂದಲೇ ಜನರು ಬರುತ್ತಿದ್ದರು. ಬಂದವರಿಗೆಲ್ಲ ತಂದೆಯವರು ಕೊಡಲಿ ಎಂದು ಅವರ ಬಳಿ ಬುಟ್ಟಿ ತುಂಬ ಕಲ್ಲುಸಕ್ಕರೆಯನ್ನು ಇಟ್ಟಿರುತ್ತಿದ್ದಳು. ಬಂದವರೆಲ್ಲ ತಂದೆಯವರಿಗೆ ಹಾರ ಹಾಕಲು ತಂದಿದ್ದರೆ ಅವರು ಹಾಕಿಸಿಕೊಳ್ಳುತ್ತಿರಲಿಲ್ಲ. ಮಂಡ್ಯ ಜಿಲ್ಲೆಯ ನಾಗಮಂಗಲದ ಜನರು ಸನ್ಮಾನ ಮಾಡಿ ನೀಡಿದ್ದ ಪಂಚಲೋಹದ ‘ನಾಟ್ಯ ಸರಸ್ವತಿ’ ಸ್ಮರಣಿಕೆ ಹಾಗೂ ಜ್ಞಾನಪೀಠ ಪ್ರಶಸ್ತಿ ನೀಡುವಾಗ ಕೊಟ್ಟಿದ್ದ ವಾಗ್ದೇವಿ ಸ್ಮರಣಿಕೆಗೆ ಹಾಕಿ ಎಂದು ಸಲಹೆ ಕೊಡುತ್ತಿದ್ದರು. ಇದೆಲ್ಲ ನೆನಪಾಗಿ ಈ ದಿನವೇ (ಡಿ. 28) ನಾಟ್ಯ ಸರಸ್ವತಿ ಹಾಗೂ ವಾಗ್ದೇವಿ ಸ್ಮರಣಿಕೆಗಳನ್ನು ಮನೆಯ ಹಜಾರದಲ್ಲಿ ಇಟ್ಟಿರುವೆ’ ಎಂದು ಖುಷಿಯಾಗಿ ಹೇಳಿದರು.
‘ತಂದೆ ತೀರಿಕೊಂಡು 20 ವರ್ಷಗಳಾಯಿತು. ಈಗ ತಾನೆ ತೀರಿಕೊಂಡರು ಎನ್ನುವ ಹಾಗೆ ಅನ್ನಿಸುತ್ತಿದೆ. ಮನೆಯ ಮುಂದೆ ಪತ್ರಿಕೆ ಓದುತ್ತ ಕುಳಿತಿದ್ದಾರೆ, ಹೊರಗೆ ಹೋಗುವಾಗ ಹೋಗಿಬರ್ತೀನಿ ಅಂತಿದ್ದರು. ಹಾಗೆ ಹೇಳಿಹೋಗಿದ್ದಾರೆ, ಇನ್ನೇನು ಬಂದಾರು ಎಂದು ಅನ್ನಿಸುತ್ತಿದೆ. ಕಾರಿನ ಕೀ ಇಡುವ ಸ್ಥಳವನ್ನು ಬದಲಾಯಿಸಿದರೆ ಕೇಳುತ್ತಿದ್ದರು. ಈಗಲೂ ಸ್ಥಳ ಬದಲಾದರೆ ಕೇಳಿಬಿಡುತ್ತಾರೆಂದೇ ಭಯ. ಬರೆಯುವಾಗ ಏನು ಬರೆಯುತ್ತಿದ್ದೀಯಾ ಎಂದು ಕೇಳುವ ಹಾಗೆ ಇಣುಕುತ್ತಿದ್ದರು. ಈಗಲೂ ಬರೆಯುವಾಗ ಹಾಗೆ ಕಾಡುವುದಿದೆ’ ಎಂದು ಅವರು ಭಾವುಕರಾದರು.
‘ಈಗಿನ ಯುವ ತಲೆಮಾರು ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡಾಗ, ಸ್ವಾತಂತ್ರ್ಯ ಕೊಟ್ಟು ತಪ್ಪು ಮಾಡದ ಹಾಗೆ ನಮ್ಮ ತಂದೆ ಬೆಳೆಸಿದ್ದು ನೆನಪಾಗುತ್ತದೆ. ವಿಶ್ವಾಸಕ್ಕೆ, ಪ್ರೀತಿಗೆ, ಸಂಸ್ಕಾರಕ್ಕೆ ಅವರ ಕೃತಿಗಳು ಎಂದಿಗೂ ಪೂರಕ’ ಎಂದು ತಾರಿಣಿ ಮಾತು ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.