ಗುಲ್ಬರ್ಗ: ಕೊಳೆಗೇರಿಯಲ್ಲಿನ ಅಂಬಾನಿ ಮನೆ ಹಾಗೂ ಬೆಂಗಳೂರಿನ ಹತ್ತಿರ ನೂರಾರು ಎಕರೆಗಳಲ್ಲಿ ತಲೆ ಎತ್ತುತ್ತಿ ರುವ ಬ್ರಾಹ್ಮಣ ಮತ್ತು ಲಿಂಗಾಯತ ಟೌನ್‌ಷಿಪ್‌ಗಳೆರಡು ಕಾರ್ಪೊರೇಟ್ ವಲಯ ಮತ್ತು ಜಾತಿಯ ವಿಕಾರ ರೂಪಗಳಾಗಿದ್ದು, ಇವುಗಳಿಗೆ ಜೀವಾಪಾಯ ಆಗದಂತೆ ಬಾಂಬ್ ಹಾಕಬೇಕಾಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಮಂಗಳವಾರ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಕರ್ನಾಟಕ ದಲಿತ ಚಳವಳಿ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ಭಾರತ ಮುಂದಿಡುವ, ಭಾರತವನ್ನೇ ನುಂಗಿ ನೊಣೆದು ಬಿಡಬಹುದಾದ ಇಂದಿನ ಎರಡು ದುಃಸ್ವಪ್ನಗಳು ಇವಾಗಿವೆ. ಭಾರತವನ್ನು ಸಾಯಿಸಿ ಬಿಡಲು ಹುಟ್ಟಿಕೊಂಡ ದುಷ್ಟ ಪ್ರಾಣಿಯೊಂದರ ಎರಡು ಕೊಂಬುಗಳಂತೆ ಇವೆ. ಜಾತಿ ಮತ್ತು ಹಣ ಹೆಚ್ಚಾದರೆ ಭಾರತದ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ಆಶಯಗಳೇ ನಗೆಪಾಟಿಲು ಆಗುತ್ತವೆ. ಬಹುಶಃ ಉಳಿಯಲಾರವು’ ಎಂದು ಆತಂಕ ವ್ಯಕ್ತಪಡಿಸಿದರು.
‘ದಲಿತ ಸಂಘಟನೆಗಳು ಛಿದ್ರವಾಗಿವೆ ಹಾಗೂ ಏಟು ಬಿದ್ದಾಗ ಮಾತ್ರ ಅವಕ್ಕೆ ಪ್ರಜ್ಞೆ ಬರುತ್ತದೆ. ಸಮಾಜವಾದಿಗಳು ಅಲ್ಲಿ ಇಲ್ಲಿ ನಾಪತ್ತೆಯಾಗಿದ್ದರೆ, ಪ್ರಜ್ಞಾವಂತರು ಒಂಟಿಯಾಗಿದ್ದಾರೆ. ಸಮಷ್ಟಿಯ ಅಭಿವ್ಯಕ್ತಿಯಾಗಿ ಅವರು ದನಿ ನೀಡುತ್ತಿಲ್ಲ. ಕಮ್ಯುನಿಸ್ಟರು ತಮ್ಮ ಜಡತ್ವದಿಂದಾಗಿ ವಿಸ್ತರಿಸಿಕೊಳ್ಳುತ್ತಲೂ ಇಲ್ಲ. ಇನ್ನು ಯಾರು? ಅಥವಾ ಹೇಗೆ?’ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು.
‘ದಲಿತ ಮತ್ತು ತಳವರ್ಗದ ಸಂಘ ಟನೆಗಳು ಮಲಗಿದ ತಮ್ಮ ಸಮುದಾಯಗಳನ್ನು ಎಚ್ಚರಗೊಳಿಸಿ ನಡೆಸುವ ಸಲುವಾಗಿ ಅನಿವಾರ್ಯವಾಗಿ ಮಾಡಲೇಬೇಕಾದ ಐಡೆಂಟಿಟಿ ಕ್ರಿಯೆ ಎಚ್ಚರಿಸುವುದಷ್ಟಕ್ಕೆ ಸೀಮಿತವಾಯಿತೇ? ಹೇಗೆ? ಎಂದು ವಿಷಾದದಿಂದ ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.