ಉಜಿರೆ: ‘ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾದ ನೇತ್ರಾವತಿ ನೀರಿನ ಬಳಕೆ ಕುರಿತು ಎರಡೂ ಪ್ರದೇಶಗಳ ರಾಜಕೀಯ ನೇತಾರರು, ವೈಜ್ಞಾನಿಕವಾಗಿ ಅಧ್ಯಯನ ಮಾಡುವ ತಜ್ಞರು ಮತ್ತು ಆಸಕ್ತ ಸಂಘಟನೆಗಳು ಜತೆಯಾಗಿ ಕುಳಿತು ಚರ್ಚಿಸುವುದು ಒಳ್ಳೆಯದು. ನಮ್ಮ ಜಿಲ್ಲೆಯ ಹಿತರಕ್ಷಣೆಗೆ ಆದ್ಯತೆ ಕೊಡುವುದು ನನ್ನ ಧೋರಣೆಯಾಗಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನೇತ್ರಾವತಿ ನದಿ ನೀರು ಬಳಕೆ ಬಗ್ಗೆ ಸಾಕಷ್ಟು ಚರ್ಚೆ, ವಿಮರ್ಶೆಗಳು ಆಗುತ್ತಿವೆ. 2009ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಉಪಯೋಗಕ್ಕೆ ಬಳಸುವ ತೀರ್ಮಾನಕ್ಕೆ ಮೊದಲು ಸಾಕಷ್ಟು ಎಚ್ಚರಿಕೆ ಮತ್ತು ಅಧ್ಯಯನ ಅಗತ್ಯ ಎಂದು ಹೇಳುತ್ತಾ ಬಂದಿದ್ದೇವೆ’ ಎಂದು ಅವರು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ಯೋಜನೆ ಬಗ್ಗೆ ಸೂಕ್ತ ಮಾಹಿತಿ ಕೊರತೆ ಎದ್ದು ಕಾಣುತ್ತಿತ್ತು. ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ನಮ್ಮ ಜಿಲ್ಲೆ ಮತ್ತು ಬಯಲು ಸೀಮೆಯ ಜನರಿಗೆ ಸೂಕ್ತ ಮಾಹಿತಿ ಒದಗಿಸಿ ವೈಜ್ಞಾನಿಕ ಅಧ್ಯಯನ ಮಾಡಬೇಕು ಎಂದು ನನ್ನ ಅಭಿಪ್ರಾಯವಾಗಿತ್ತು’ ಎಂದಿದ್ದಾರೆ.
‘ಈಗ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ಆಗಿರುವುದು ಸೂಕ್ತವಾಗಿದೆ. ಇದನ್ನು ಸ್ವಾಗತಿಸುತ್ತೇನೆ. ಇಂತಹ ಚರ್ಚೆ, ಚಿಂತನ-ಮಂಥನಗಳಿಂದ ಸಮರ್ಪಕ ಹಾಗೂ ನಿಖರವಾದ ಮಾಹಿತಿ ದೊರಕಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲು ಅನುಕೂಲವಾಗಬಹುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.