ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮೇಲಿರುವ ಅತ್ಯಾಚಾರ ಪ್ರಕರಣದ ಆರೋಪಪಟ್ಟಿ ಸಲ್ಲಿಕೆ ಯಲ್ಲಿ ಆಗುತ್ತಿರುವ ವಿಳಂಬಕ್ಕೆ ಪೊಲೀಸ್ ವೈಫಲ್ಯವೂ ಕಾರಣ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸದಿರುವ ಬಗ್ಗೆ ಸಂತ್ರಸ್ತೆಯ ಮಗಳು ದೂರು ನೀಡಿದ್ದಾರೆ. ಅಲ್ಲದೆ ಬೇರೆ ಕೆಲ ಸಂಸ್ಥೆಗಳು ದೂರು ನೀಡಿವೆ. ಈ ಸಂಬಂಧ ತನಿಖೆಯ ವಿವರ ಪಡೆಯಲು ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಮಂಗಳವಾರ ಕಾನೂನು ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ’ ಎಂದ ಅವರು, ಸಚಿವರ ಜೊತೆಗಿನ ಮಾತುಕತೆ ವಿವರವನ್ನು ಬಹಿರಂಗಪಡಿಸಲಿಲ್ಲ.
‘ಆರೋಪಪಟ್ಟಿ ಸಲ್ಲಿಸದಿರುವುದರಿಂದ ಆರೋಪಗಳ ವಿವರ ನಮಗೆ ಲಭ್ಯವಿಲ್ಲ. ಆರೋಪಪಟ್ಟಿ ಸಲ್ಲಿಸುವುದು ಪೊಲೀಸರ ಕರ್ತವ್ಯ. ಅವರ ಕರ್ತವ್ಯದಲ್ಲಿ ಆಯೋಗ ಮಧ್ಯೆ ಪ್ರವೇಶ ಮಾಡುವಂತಿಲ್ಲ. ನಿರ್ದೇಶನ ನೀಡಬಹುದಷ್ಟೆ. ಆ ಕೆಲಸ ಮಾಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸುವ ಭರವಸೆ ಇದೆ’ ಎಂದರು.
ಕರ್ನಾಟಕದಲ್ಲಿ ಕಳೆದ ವರ್ಷ ಶಾಲಾ ಮಕ್ಕಳ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳು ವಿಷಾದನೀಯ ಎಂದ ಅವರು,‘ಈ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು ಸರ್ಕಾರ ಎಷ್ಟು ಜವಾಬ್ದಾರಿಯಿಂದ ನಡೆದುಕೊಂಡಿವೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ಆದರೆ ಕೆಲವು ಶಾಲೆಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿದೆ. ಇಲ್ಲಿ ಸಾರ್ವಜನಿಕರ ಜವಾಬ್ದಾರಿ ಇದೆ’ ಎಂದರು. ‘ಬ್ಯಾಡ್ ಟಚ್, ಗುಡ್ ಟಚ್ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕು. ಆದರೆ, ಮೂರು ವರ್ಷದ ಮಗುವಿಗೆ ಅದನ್ನು ಹೇಗೆ ಅರ್ಥ ಮಾಡಿಸುವುದು ಎಂದು ಪ್ರಶ್ನಿಸಿದ ಅವರು, ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಹೇಳಿದರು.
*
ಪೊಲೀಸರಿಗೆ ತರಬೇತಿ
‘ಅತ್ಯಾಚಾರ ಪ್ರಕರಣಗಳನ್ನು ನಿರ್ವಹಣೆ ಮಾಡುವ ಬಗ್ಗೆ ಕೆಳಹಂತದ ಪೊಲೀಸರಿಗೆ ತರಬೇತಿ ನೀಡುವ ಅಗತ್ಯವಿದೆ. ಪೊಲೀಸ್ ಠಾಣೆಗಳಿಗೆ ಬರುವ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುವಂತಾಗಬೇಕು. ಪೊಲೀಸ್ ಠಾಣೆಗಳಿಗೆ ಶೇಕಡ 60ರಷ್ಟು ಕೌಟುಂಬಿಕ ಕಿರುಕುಳದ ದೂರುಗಳು ಮಹಿಳೆಯರಿಂದ ಬರುತ್ತಿದೆ. ಹಾಗಾಗಿ ಪೊಲೀಸ್ ಠಾಣೆಗಳನ್ನು ಮಹಿಳಾ ಸ್ನೇಹಿಯಾಗಿಸುವ ಅಗತ್ಯವಿದೆ’ ಎಂದರು. ಮಹಾರಾಷ್ಟ್ರ ಸರ್ಕಾರ ಟಾಟಾ ಸಂಸ್ಥೆಯ ಜೊತೆ ಸೇರಿ ಪೊಲೀಸರಿಗೆ ತರಬೇತಿ ನೀಡುತ್ತಿದೆ. ಇದನ್ನು ಎಲ್ಲ ರಾಜ್ಯಗಳು ಅನುಸರಿಸುವಂತಾಗಬೇಕು ಎಂದರು.
ಈ ಪ್ರಕರಣದಲ್ಲಿ ಸಂತ್ರಸ್ತೆಯ ಮಗಳು ದೂರು ನೀಡಿರುವುದರಿಂದ ಅವರ ಮನೆಗೆ ಭೇಟಿ ನೀಡಿದ್ದೇನೆ.
- ಲಲಿತಾ ಕುಮಾರಮಂಗಲಂ,
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.