ವಿದ್ಯಾಗಿರಿ (ಮೂಡುಬಿದಿರೆ): ‘ಪ್ರಜಾಪ್ರಭುತ್ವದ ಪೋಷಾಕಿನಲ್ಲಿ ಸರ್ವಾಧಿಕಾರ ತಲೆ ಎತ್ತಿ ದೇಶವನ್ನು ವಿನಾಶದತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಈ ಆತಂಕ ನಿಜವಾಗಬಾರದು ಎಂದಾದರೆ ಜನಪರ ಹೋರಾಟ ಆರಂಭವಾಗಲೇಬೇಕು’ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಇಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಮೂರನೇ ದಿನವಾದ ಭಾನುವಾರ ‘ರಾಜಕಾರಣ: ವರ್ತಮಾನದ ತಲ್ಲಣಗಳು’ ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡಿದರು. ‘ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಕಪ್ಪು ಜನಾಂಗದ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ಪ್ರತಿಭಟಿಸಿ ಯಶಸ್ವಿಯಾದುದು ಇಂತಹ ಜನಪರ ಹೋರಾಟದಿಂದಲೇ. ಈಗ ನಮ್ಮಲ್ಲೂ ಅಂತಹ ಹೋರಾಟ ರೂಪುಗೊಳ್ಳಬೇಕಾದ ಅಗತ್ಯ ಎದುರಾಗುವ ಲಕ್ಷಣ ಕಾಣಿಸುತ್ತಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ‘ಅಭಿವೃದ್ಧಿ’ ಎಂಬ ಪದವನ್ನು ಅತಿಯಾಗಿ ಬಳಸಲಾಗುತ್ತಿದೆ. ಇದು ಅಭಿವೃದ್ಧಿಯಲ್ಲ, ಅತಿ ಹುಚ್ಚು. ಇದು ನಮ್ಮ ಸ್ವಾರ್ಥ ಸಾಧನೆಗೆ, ನಮ್ಮ ದೇಶದ ಸ್ವಾಭಿಮಾನ ಕೊಲ್ಲಲು ಮಾಡಿದ ಸಂಚಿನಂತೆಯೇ ಕಾಣಿಸುತ್ತಿದೆ. ಇದರಿಂದ ದೇಶದ ಏಕತೆಗೆ ಧಕ್ಕೆ ಒದಗುವ ಅಪಾಯ ಇದೆ. ಏಕತೆ ಅತಿಯಾದಾಗ ವಿವಿಧತೆ ಕಳೆದುಕೊಳ್ಳುತ್ತ ಹೋಗುತ್ತದೆ. ನಮಗೆ ಬೇಕಿರುವುದು ಗಾಂಧಿ ದೃಷ್ಟಿಯ ಅಭಿವೃದ್ಧಿ’ ಎಂದರು.
‘ಕಪ್ಪು ಹಣ ವಾಪಸ್ ತರುತ್ತೇವೆ ಎಂಬುದು ದೊಡ್ಡ ವಿಪರ್ಯಾಸ. ಕಪ್ಪು ಹಣದ ಜನಕರೇ ಕಾರ್ಪೊರೆಟ್ ಸಂಸ್ಥೆಗಳು. ಅವರ ಕೃಪಾಕಟಾಕ್ಷದಿಂದ ಚುನಾವಣೆಯಲ್ಲಿ ಗೆದ್ದು ಬಂದ ನಾವು ಅವರ ಹಿಡಿತದಿಂದ ಬಿಡಿಸಿಕೊಳ್ಳುವುದು ಉಂಟೇ. ರಾಜಕೀಯದಲ್ಲಿ ಕಪ್ಪು ಹಣ ಎಂಬುದೊಂದು ದೊಡ್ಡ ದ್ವಂದ್ವ. ಇದರ ವಿರುದ್ಧ ನಮ್ಮಲ್ಲಿ ಮಾನಸಿಕ ತಲ್ಲಣ ಕೆಲಸ ಮಾಡಬೇಕಾಗಿದೆ’ ಎಂದರು.
‘1916ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಗಾಂಧಿ ಅವರು ಅಭಿವೃದ್ಧಿಯ ತಾರತಮ್ಯದ ಬಗ್ಗೆ ಮಾತೆತ್ತಿದಾಗ ಅವರ ಮಾತನ್ನು ತಡೆಹಿಡಿಯಲಾಯಿತು. ಈಗಲೂ ಅಂತಹದೇ ಪರಿಸ್ಥಿತಿ ದೇಶದಲ್ಲಿ ಇದೆ’ ಎಂದರು.
ಲೋಭ: ‘ರಾಜಕಾರಣ ಎಂದ ತಕ್ಷಣ ‘ದುಡ್ಡು‘, ‘ಲೋಭ’ ಎಂಬ ಮಾತೂ ಜತೆಯಾಗುತ್ತದೆ. ಈ ಲೋಭ ಎಂಬುದು ಕಾರ್ಲ್ ಮಾರ್ಕ್ಸ್ ಅವರಿಗೆ ಹೋರಾಟದ ಹುಟ್ಟಿಗೆ ಕಾರಣವಾಗಿತ್ತು, ಗಾಂಧಿ ಪಾಲಿಗೆ ಲೋಭ ಎಂಬುದು ರೋಗಕ್ಕೆ ಕಾರಣ ಎಂಬುದಾಗಿತ್ತು. ಆದರೆ ಇಂದಿನ ರಾಜಕಾರಣಿಗಳಿಗೆ ಲೋಭ ಎಂಬುದು ರಾಜಕೀಯ ಅಸ್ತಿತ್ವಕ್ಕೆ ಇರುವ ದಾರಿಯಾಗಿದೆ. ಈ ವಿಷ ವರ್ತುಲದಿಂದ ರಾಜಕಾರಣಿ ಹೊರಬರುವುದು ಸಾಧ್ಯವೇ ಇಲ್ಲ’ ಎಂದು ವಿಶ್ಲೇಷಿಸಿದರು.
‘ನಿರಾಶೆಯಲ್ಲೂ ಕರ್ತವ್ಯ ಮರೆಯಬಾರದು ಎಂಬುದು ಲೋಹಿಯಾ ಅವರ ಸಲಹೆ. ಪ್ರಸ್ತುತ ರಾಜಕೀಯಕ್ಕೆ ಅವರ ಮಾತೇ ಅತ್ಯಂತ ಸೂಕ್ತವಾದುದು. ಭಗವದ್ಗೀತೆ ಸಹ ವಿಷಾದದಿಂದ ಪ್ರಸಾದ ಸಿಗುತ್ತದೆ ಎಂಬ ಸಂದೇಶ ಸಾರಿದೆ. ರಾಜಕೀಯದಲ್ಲೂ ಅಷ್ಟೇ, ಅಂತಹ ಶುಭ ದಿನಕ್ಕೆ ಇಂದಿನ ವಿಷಾದ ನಾಂದಿಯಾಗುತ್ತದೆ ಎಂಬ ಆಶಾಭಾವನೆ ನನ್ನದು’ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.