ADVERTISEMENT

‘ಪ್ರಾಚೀನ ಪಠ್ಯಗಳು ಆಧುನಿಕ ಭಾಷೆಯಲ್ಲಿ ಬರದಿದ್ದರೆ ಆಪತ್ತು’

ಜೆಎನ್‌ಯುದಲ್ಲಿ ಕನ್ನಡ ಅಧ್ಯಯನ ಪೀಠ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ನವದೆಹಲಿ: ‘ಭೌಗೋಳಿಕ ಕಾರಣಗಳಿಗಾಗಿ ಶತಮಾನಗಳಿಂದ ಅನೇಕ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಸಂಗಮವಾಗಿರುವ ಕರ್ನಾಟಕದ ಸಾಹಿತ್ಯ ಸಂಪತ್ತನ್ನು ಹೊರ ಜಗತ್ತಿಗೆ ಪರಿಚಯಿಸಲು ನಾವು ವಿಫಲರಾಗಿದ್ದೇವೆ’ ಎಂದು ಖ್ಯಾತ ಸಂಶೋಧಕ ಡಾ. ಎಸ್‌.ಶೆಟ್ಟರ್‌ ಗುರುವಾರ ವಿಷಾದಿಸಿದರು.

ಇಲ್ಲಿಯ ಪ್ರತಿಷ್ಠಿತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಭಾರತೀಯ ಭಾಷಾ ಕೇಂದ್ರದಲ್ಲಿ ಕನ್ನಡ ಅಧ್ಯಯನ ಪೀಠ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ, ಯಾಂತ್ರಿಕವಾಗಿ ಭಾಷಾಂತರ ಮಾಡಲಾಗಿದೆ. ಅದರಿಂದ ಏನೂ ಪ್ರಯೋಜನವಾಗಿಲ್ಲ ಎಂದರು.

ಕನ್ನಡ ಸಾಹಿತ್ಯ ಸಂಪತ್ತು ಭಾಷಾಂತರಕ್ಕೆ ರಾಜ್ಯ ಸರ್ಕಾರ ಬೇಕಾದಷ್ಟು ಹಣ ಖರ್ಚು ಮಾಡುತ್ತಿದೆ. ಅದಕ್ಕಾಗಿ ಪ್ರತ್ಯೇಕ ವಿಭಾಗ ತೆರೆದಿದೆ. ವಿಶ್ವವಿದ್ಯಾಲಯದೊಳಗೆ ಹಾಗೂ ಹೊರಗೆ ಸಿಕ್ಕಾಪಟ್ಟೆ ಭಾಷಾಂತರ ಕೆಲಸ ನಡೆಯುತ್ತಿದೆ. ಆದರೂ ನಮಗೆ ನಿರೀಕ್ಷಿತ ಫಲ ದೊರೆತಿಲ್ಲ ಎಂದು ಶೆಟ್ಟರ್‌ ಅಭಿಪ್ರಾಯಪಟ್ಟರು.

ಈ ಕೊರತೆಯಿಂದ ಹೊರಬರಲು ಭಾಷಾಂತರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಅದಕ್ಕಾಗಿ ಕಾರ್ಯಾಗಾರಗಳನ್ನು ನಡೆಸಬೇಕು. ತರಬೇತಿ ಕೇಂದ್ರಗಳನ್ನು ಏರ್ಪಡಿಸಬೇಕು. ವಿವಿಧ ಭಾಷೆಗಳ ವಿದ್ವಾಂಸರ ಜತೆ ಸಂವಾದ, ಚರ್ಚೆಗಳನ್ನು ವ್ಯವಸ್ಥೆ ಮಾಡಬೇಕು. ಮೊದಲಿಗೆ ಕನ್ನಡದ ಪಠ್ಯಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸಬೇಕು ಎಂದು ಸಲಹೆ ಮಾಡಿದರು.

ಅನಂತರ ದೊಡ್ಡ ಕಾವ್ಯಗಳು, ಮಹಾಕಾವ್ಯಗಳ ಬಗ್ಗೆ ಚಿಂತಿಸಬೇಕು. ನಮ್ಮ ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯವನ್ನು ಆಧುನಿಕ ಭಾಷೆಯಲ್ಲಿ ದೊರಕಿಸದಿದ್ದರೆ ನಮ್ಮ ಪರಂಪರೆಯೇ ನಮಗೆ ಅಪರಿಚಿತವಾಗಿಬಿಡುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಾಚೀನ ಕನ್ನಡ ಹಾಗೂ ತಮಿಳು ಪಠ್ಯಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಸಮರ್ಥ ಭಾಷಾಂತರಕಾರರ ಕೊರತೆಯಿಂದ ಸಮಸ್ಯೆ ಎದುರಾಗಿದೆ. ಭಾಷಾ, ಸಾಹಿತ್ಯ ಮತ್ತು ಸಂಸ್ಕೃತಿ ಕೇಂದ್ರಗಳು ಭಾಷಾಂತರದ ಸವಾಲನ್ನು ಸಮರ್ಥವಾಗಿ ನಿರ್ವಹಣೆ ಮಾಡಬೇಕು ಎಂದು ಹಿರಿಯ ವಿದ್ವಾಂಸರು ಕಿವಿಮಾತು ಹೇಳಿದರು.

ಕನ್ನಡ ಅಧ್ಯಯನ ಪೀಠಕ್ಕೆ ಕರ್ನಾಟಕ ಸರ್ಕಾರ ಹೆಚ್ಚಿನ ಅನುದಾನ ಒದಗಿಸದಿದ್ದರೆ ಅದು ಉಳಿಯುವುದು, ಬೆಳೆಯುವುದು ಕಷ್ಟ. ಸರ್ಕಾರ ಸದ್ಯ ಕೊಡುತ್ತಿರುವ ಅನುದಾನವು ಅಧ್ಯಯನ ಪೀಠದ ಅಧ್ಯಕ್ಷರ ಸಂಬಳಕ್ಕೆ ಮಾತ್ರ ಸಾಕಾಗಲಿದೆ. ಮುಂದಿನ ತಿಂಗಳಿಂದ ಶೇ. 25ರಷ್ಟು ಏರಿಕೆಯಾಗಲಿದೆ ಎಂದು ಭಾವಿಸಿದರೂ, ಒಬ್ಬರೇ ವಿದ್ವಾಂಸರು ಎಲ್ಲ ಕೆಲಸಗಳನ್ನು ಮಾಡಲಾಗದು. ತಕ್ಷಣಕ್ಕೆ ಮತ್ತೊಬ್ಬರು ಶಿಕ್ಷಕರು, ಸಂಶೋಧನಾ ಸಹಾಯಕರನ್ನು ನೇಮಕ ಮಾಡಬೇಕಾದ ಅಗತ್ಯವಿದೆ ಎಂದು ನುಡಿದರು.

ಜೆಎನ್‌ಯು ಕುಲಾಧಿಪತಿ ಡಾ. ಕೆ. ಕಸ್ತೂರಿ ರಂಗನ್ ಮಾತನಾಡಿ, ದೇಶದ ಅತ್ಯುತ್ತಮ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಪೀಠ ಆರಂಭವಾಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು. ಜೆಎನ್‌ಯು ಉಪ ಕುಲಪತಿ ಡಾ. ಸುಧೀರ್‌ ಸೊಪೋರಿ, ರಿಕ್ಟರ್ ಸುಧಾ ಪೈ, ಡೀನ್‌ ಡಾ. ರೇಖಾ ರಾಜನ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.