ಬೆಂಗಳೂರು: 2014ನೇ ಸಾಲಿನ ಮಾಸ್ತಿ ಕಥಾ ಪುರಸ್ಕಾರಕ್ಕೆ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು ಬರೆದ ‘ಬನದ ಹುಣ್ಣಿಮೆ’ ಹಾಗೂ ‘ಪ್ರಜಾವಾಣಿ’ ಪತ್ರಿಕೆಯ ಉಪಸಂಪಾದಕ ಪದ್ಮನಾಭ ಭಟ್ ಶೇವ್ಕಾರ್ ಅವರ ‘ಕೇಪಿನ ಡಬ್ಬಿ’ ಕಥಾ ಸಂಕಲನಗಳು ಆಯ್ಕೆಯಾಗಿವೆ.
ಪಲ್ಲವ ಪ್ರಕಾಶನ ಮತ್ತು ಛಂದ ಪುಸ್ತಕ ಸಂಸ್ಥೆಗಳು ಕ್ರಮವಾಗಿ ಎರಡೂ ಸಂಕಲನಗಳನ್ನು ಪ್ರಕಟಿಸಿವೆ.
‘ಜೂನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಲೇಖಕರಿಗೆ ತಲಾ ₨20 ಸಾವಿರ ಹಾಗೂ ಪ್ರಕಾಶಕರಿಗೆ ತಲಾ ₨10 ಸಾವಿರ ನಗದು, ಮಾಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು’ ಎಂದು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಹಾಗೂ ಪ್ರಶಸ್ತಿ ಸಮಿತಿ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.
ಈಶ್ವರಚಂದ್ರ, ಎಸ್.ಆರ್. ವಿಜಯಶಂಕರ್, ಡಾ. ವಾಸುದೇವ ಶೆಟ್ಟಿ, ಬಿ.ಎಸ್. ವೆಂಕಟಾಚಲಪತಿ ಮತ್ತು ಮಾವಿನಕೆರೆ ರಂಗನಾಥನ್ ಅವರು ತೀರ್ಪುಗಾರರಾಗಿದ್ದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಕಥಾ ಸಂಕಲನ ಸ್ಪರ್ಧೆಗೆ ಒಟ್ಟು 31 ಸಂಕಲನಗಳು ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.