ADVERTISEMENT

‘ಮಹಾರಾಣಿ’ ವಿದ್ಯಾರ್ಥಿನಿಯರ ಮಾರಾಮಾರಿ

ಸಹ ಪ್ರಾಧ್ಯಾಪಕರು, ಪ್ರಾಂಶುಪಾಲರ ವರ್ಗಾವಣೆ ಪ್ರಕರಣ ತಾರಕಕ್ಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2016, 19:30 IST
Last Updated 26 ಮಾರ್ಚ್ 2016, 19:30 IST
ಪ್ರತಿಭಟನೆ ವೇಳೆ ಪರಸ್ಪರ ಕೈ ಕೈ ಮಿಲಾಯಿಸಿದ ವಿದ್ಯಾರ್ಥಿನಿಯರು
ಪ್ರತಿಭಟನೆ ವೇಳೆ ಪರಸ್ಪರ ಕೈ ಕೈ ಮಿಲಾಯಿಸಿದ ವಿದ್ಯಾರ್ಥಿನಿಯರು   

ಬೆಂಗಳೂರು: ಇಲ್ಲಿನ ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರ ವರ್ಗಾವಣೆ ವಿಚಾರ ಶನಿವಾರ ವಿಕೋಪಕ್ಕೆ ಹೋಗಿ ವಿದ್ಯಾರ್ಥಿನಿಯರ ಎರಡು ಗುಂಪುಗಳ ನಡುವೆ ತೀವ್ರ ಹೊಡೆದಾಟಕ್ಕೆ ಕಾರಣವಾಯಿತು. 

ಕಾಲೇಜಿನ ಆವರಣದಲ್ಲಿ ಎಂದಿನಂತೆ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿದ್ದರು.
‘ಪ್ರಾಂಶುಪಾಲರು ವೈಯಕ್ತಿಕ ದ್ವೇಷದಿಂದ ಸಹ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿಸಿದ್ದಾರೆ’ ಎಂದು ಆರೋಪಿಸಿ ಪ್ರಾಂಶುಪಾಲರ ಪ್ರತಿಕೃತಿ ದಹಿಸಲು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಮುಂದಾದರು. ಅದನ್ನು ಗಮನಿಸಿದ ಕಲಾ ವಿಭಾಗದ ವಿದ್ಯಾರ್ಥಿನಿಯರು ‘ಪ್ರತಿಕೃತಿ ದಹಿಸಬಾರದು’ ಎಂದು ಎಚ್ಚರಿಕೆ ನೀಡಿದರು.

ಆಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ಬಣಗಳ ವಿದ್ಯಾರ್ಥಿನಿಯರು ಜಡೆ ಹಿಡಿದು ಎಳೆದಾಡಿ 15 ನಿಮಿಷಕ್ಕೂ ಹೆಚ್ಚು ಕಾಲ  ಹೊಡೆದಾಡಿಕೊಂಡರು.

ಸ್ಥಳದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್‌ಗಳು ಜಗಳ ಬಿಡಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ವಿದ್ಯಾರ್ಥಿನಿಯರು ಬಗ್ಗಲಿಲ್ಲ.  ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪೊಲೀಸರು ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.  ಮುಂಜಾಗ್ರತಾ ಕ್ರಮವಾಗಿ ಕಾಲೇಜು ಆವರಣದಲ್ಲಿ ಪೊಲೀಸ್‌ ಬಂದೋಬಸ್ತ್‌  ಬಿಗಿ ಮಾಡಲಾಗಿದೆ.

ವೈಯಕ್ತಿಕ ತಿಕ್ಕಾಟ: ಪ್ರಾಂಶುಪಾಲರು ಹಾಗೂ ಸಹ ಪ್ರಾಧ್ಯಾಪಕರ ನಡುವಿನ ವೈಯಕ್ತಿಕ ತಿಕ್ಕಾಟವೇ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಳ್ಳಲು ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

‘ತಮ್ಮ ವರ್ಚಸ್ಸಿಗಾಗಿ ವಿದ್ಯಾರ್ಥಿನಿಯರ ಮೂಲಕ ಪ್ರತಿಭಟನೆ ಮಾಡಿಸಲಾಗುತ್ತಿದೆ. ಜತೆಗೆ ಎಬಿವಿಪಿ ಹಾಗೂ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿವೆ. ಅದೇ ಕಾರಣಕ್ಕಾಗಿ ಕಾಲೇಜಿನ ವಾತಾವರಣ ಹದಗೆಡುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಏನಾಗಿತ್ತು?
ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ನಾರಾಯಣಸ್ವಾಮಿ ಹಾಗೂ ಕಲಾ ವಿಭಾಗದ ಪ್ರಾಧ್ಯಾಪಕಿ ಮಧುಮತಿ ಅವರನ್ನು ಕೆಲ ದಿನಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಅದನ್ನು ಖಂಡಿಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಪ್ರಾಂಶುಪಾಲರಾದ ಡಾ. ಆರ್‌. ಕೋಮಲಾ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ. ಅವರ ಪರ ನಿಂತಿರುವ ಕಲಾ ವಿಭಾಗದ ವಿದ್ಯಾರ್ಥಿನಿಯರು, ವರ್ಗಾವಣೆ ರದ್ದುಪಡಿಸಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT