ADVERTISEMENT

‘ಮಾಹಿತಿ ಸಾಹಿತ್ಯ’ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:30 IST
Last Updated 1 ಫೆಬ್ರುವರಿ 2015, 19:30 IST
ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಗೋಷ್ಠಿಯಲ್ಲಿ ಡಾ.ಯು.ಬಿ. ಪವನಜ ಮಾತನಾಡಿದರು. ಎಚ್‌. ರಾಮಪ್ರಕಾಶ್‌, ಎಚ್‌.ಎಲ್‌. ಓಂ ಶಿವಪ್ರಕಾಶ್‌ ಹಾಗೂ ಡಾ.ಕೆ. ಚಿದಾನಂದ ಗೌಡ ಚಿತ್ರದಲ್ಲಿದ್ದಾರೆ
ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಗೋಷ್ಠಿಯಲ್ಲಿ ಡಾ.ಯು.ಬಿ. ಪವನಜ ಮಾತನಾಡಿದರು. ಎಚ್‌. ರಾಮಪ್ರಕಾಶ್‌, ಎಚ್‌.ಎಲ್‌. ಓಂ ಶಿವಪ್ರಕಾಶ್‌ ಹಾಗೂ ಡಾ.ಕೆ. ಚಿದಾನಂದ ಗೌಡ ಚಿತ್ರದಲ್ಲಿದ್ದಾರೆ   

ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆ: ‘ಕನ್ನಡದಲ್ಲಿ ಮಾಹಿತಿ ಸಾಹಿತ್ಯಗಳು ಸೃಷ್ಟಿಯಾಗದ ಹೊರತು ಕನ್ನಡ ಭಾಷೆ ಉಳಿಯುವು­ದಿಲ್ಲ’ ಎಂದು ಡಾ.ಯು.ಬಿ. ಪವನಜ ಅಭಿಪ್ರಾಯಪಟ್ಟರು.

‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕುರಿತ ಗೋಷ್ಠಿಯಲ್ಲಿ ಅವರು ‘ಅಂತರ್ಜಾಲದಲ್ಲಿ ಕನ್ನಡದ ವಿಶ್ವಕೋಶ’ ಕುರಿತು ಮಾತನಾಡಿದರು.

‘ಸುಮ್ಮನೇ ಸಮ್ಮೇಳನ ಮಾಡಿ, ಜಾತ್ರೆಯಂತೆ ಮೆರವಣಿಗೆ ಹೊರಟರೆ ಅಥವಾ ಚಳವಳಿ ಮಾಡಿದರೆ ಖಂಡಿತಾ ಕನ್ನಡ ಭಾಷೆಯ ಉಳಿಯುವುದಿಲ್ಲ. ಮುಖ್ಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿತರೆ ಪ್ರಪಂಚ ಜ್ಞಾನ ಬರುವುದಿಲ್ಲ ಎಂಬ ಕಾರಣಕ್ಕೆ ಪೋಷಕರು ಇಂಗ್ಲಿಷ್ ಮಾಧ್ಯಮದತ್ತ ಮುಖಮಾಡುತ್ತಿ­ದ್ದಾರೆ. ಈ ಮನೋಭಾವ ಬದಲಿಸಲು ಚಳವಳಿ ಇಲ್ಲವೇ ಸಮ್ಮೇಳನಗಳಿಂದ ಸಾಧ್ಯವಿಲ್ಲ‘ ಎಂದು ವಿಶ್ಲೇಷಿಸಿದರು.

‘ಇದಕ್ಕಾಗಿ ಕನ್ನಡದಲ್ಲಿ ಮೊದಲು ಮಾಹಿತಿ ಸಾಹಿತ್ಯ ರಚನೆಯಾಗ­ಬೇಕಾಗಿದೆ. ಈಗ ಕೇವಲ ಕಥನ, ಕಾವ್ಯ­ಗಳ ಸಾಹಿತ್ಯವಷ್ಟೇ ಓತಪ್ರೋತ ರಚನೆ­ಯಾಗುತ್ತಿದೆ. ಇದಕ್ಕೆ ಸಮಾ­ನಂತರ­ವಾಗಿ ಮಾಹಿತಿ ಸಾಹಿತ್ಯ ರಚನೆ­ಯಾಗ­ಬೇಕು. ಶಿವರಾಮ­ಕಾರಂತ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರನ್ನು ಬಿಟ್ಟರೆ ಈವರೆಗೆ ಈ ಕ್ಷೇತ್ರದಲ್ಲಿ ಯಾವ ಸಾಹಿತಿಗಳೂ ಯತ್ನಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಸ್ತುತ ವೈದ್ಯರು, ತಂತ್ರಜ್ಞರಷ್ಟೇ ಮಾಹಿತಿ ಸಾಹಿತ್ಯ ರಚನೆಗೆ ತೊಡಗಿ­ದ್ದಾರೆ. ಇದರಲ್ಲಿ ಸಾಹಿತಿಗಳೂ ಕೈ ಜೋಡಿ­ಸಿ­ದರೆ ಖಂಡಿತವಾಗಿಯೂ ಕನ್ನಡದಲ್ಲಿ ಯಥೇಚ್ಛ ಮಾಹಿತಿ ಸಿಗುತ್ತದೆ. ಕ್ರಮೇಣ ಕನ್ನಡದಲ್ಲೂ ಮಾಹಿತಿ ಸಿಗುತ್ತದೆ ಎಂಬ ಕಾರಣಕ್ಕೆ ಜನರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯ ಮಾದರಿ!: ‘ಸದ್ಯಕ್ಕೆ ವಿಶ್ವಕೋಶಗಳು ವಿಶ್ವವಿದ್ಯಾಲ­ಯ­ಗಳ ಕಪಾಟುಗಳಲ್ಲಿ ದೂಳಿಡಿದು ಕುಳಿತಿವೆ. ಜನರು ಬೇಕು ಎಂದಾಗ ಅದರಿಂದ ಮಾಹಿತಿ ತೆಗೆಯುವುದು ಕಷ್ಟಸಾಧ್ಯ. ಈ ಸಮಸ್ಯೆಯನ್ನು ಮನ­ಗಂಡೇ ಮೈಸೂರು ವಿಶ್ವವಿದ್ಯಾ­ಲಯ ಇದೇ ಪ್ರಥಮ ಬಾರಿಗೆ ತನ್ನಲ್ಲಿರುವ ವಿಶ್ವಕೋಶಗಳನ್ನು ಮುಕ್ತ ಪರವಾನಗಿ (ಕ್ರಿಯೇಟಿವ್ ಕಾಮನ್ಸ್) ಅಡಿ  ಬಿಡು­ಗಡೆ ಮಾಡಿ ಉಳಿದ ವಿವಿಗಳಿಗೆ ಮಾದ­ರಿ­ಯಾಗಿದೆ. ಉಳಿದ ವಿಶ್ವವಿದ್ಯಾಲಯ­ಗಳು, ಸರ್ಕಾರದಿಂದ ಅನುದಾನ ಪಡೆ­ಯುತ್ತಿರುವ ಪ್ರಾಧಿಕಾರಗಳು, ಶೈಕ್ಷಣಿಕ ಸಂಸ್ಥೆಗಳು ತಮ್ಮಲ್ಲಿರುವ ವಿಶ್ವ­ಕೋಶಗಳನ್ನು ಇಲ್ಲವೇ ಜ್ಞಾನವನ್ನು ಬಿಡುಗಡೆ ಮಾಡಬೇಕು’ ಎಂದು  ಒತ್ತಾಯಿಸಿದರು.

ವಿಕಿಪೀಡಿಯಾದಲ್ಲಿ19 ಸಾವಿರ ಲೇಖನ!: ‘ಪ್ರಸ್ತುತ ಕನ್ನಡದಲ್ಲಿ ಅಂತ­ರ್ಜಾಲ­­ದಲ್ಲಿ ಮಾಹಿತಿ ನೀಡುತ್ತಿರುವ ವಿಕಿಪೀಡಿಯಾ ಕಳೆದ 12 ವರ್ಷದಲ್ಲಿ 19 ಸಾವಿರ ಲೇಖನಗಳನ್ನು ಸೇರಿಸಿದೆ. ಇವುಗಳನ್ನು ಯಾರು ಯಾವಾಗ ಬೇಕಾ­ದರೂ ಎಲ್ಲಿಯಾದರೂ ಕೂತು ಅಂತರ್ಜಾಲ­ದಲ್ಲಿ ಕನ್ನಡದಲ್ಲಿಮಾಹಿತಿ  ಪಡೆಯ­ಬಹುದು. ಇಲ್ಲಿರುವ ಲೇಖನ­ಗಳನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದು, ಮತ್ತಷ್ಟು ಮಾಹಿತಿ ಸೇರಿಸಬಹುದು’ ಎಂದು ವಿವರಿಸಿದರು.

ನಿವೃತ್ತ ಕುಲಪತಿ ಡಾ.ಕೆ. ಚಿದಾನಂದಗೌಡ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಲ್. ಓಂಶಿವಪ್ರಕಾಶ್ ಹಾಗೂ ಎಚ್. ರಾಮಪ್ರಕಾಶ್ ಅಂತರ್ಜಾಲದಲ್ಲಿ ಕನ್ನಡ ಬಳಕೆ ಕುರಿತು ಮಾತಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.