ಹಾನಗಲ್ (ಹಾವೇರಿ ಜಿಲ್ಲೆ): ‘ವಿರಕ್ತನಿಗೆ ರೊಟ್ಟಿ ಕೊಟ್ಟರೂ ಅಷ್ಟೇ, ಹೋಳಿಗೆ–ತುಪ್ಪ ಸಿಕ್ಕರೂ ಅಷ್ಟೇ. ಹಾಗೆಯೇ ಹಾನಗಲ್ ಮಠದ ಆಸನ ಮತ್ತು ಹುಬ್ಬಳ್ಳಿ ಮಠದ ಸಿಂಹಾಸನ. ನನ್ನ ಮಟ್ಟಿಗೆ ಎರಡೂ ಒಂದೇ...’ ಎಂದು ಮೂರುಸಾವಿರ ಮಠದ ಪೀಠವನ್ನು ಶನಿವಾರ ತ್ಯಜಿಸಿ, ಇಲ್ಲಿನ ಕುಮಾರ ಶಿವಯೋಗಿಗಳ ವಿರಕ್ತ ಮಠಕ್ಕೆ ಬಂದಿರುವ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇದೇ ಮೊದಲ ಬಾರಿಗೆ ಇಲ್ಲಿಗೆ ಸಮೀಪದ ಅರಳೇಶ್ವರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ‘ಯಾರು ಏನೇ ಹೇಳಿದರೂ, ಸತ್ಯ ನನಗೆ ಮತ್ತು ದೇವರಿಗೆ ಗೊತ್ತಿದೆ. ಆದರೆ ಅದು ಹೇಳಲಾಗದ ಸತ್ಯ’ ಎಂದು ಮಾರ್ಮಿಕವಾಗಿ ನುಡಿದರು.
‘ಗುರುಪೀಠ ಎಂದು ನಾಡಿನ ಶೇ 70ರಷ್ಟು ಮಠಾಧೀಶರು ಭಕ್ತಿ ಸಮರ್ಪಿಸುವ ಹಾನಗಲ್ ಕುಮಾರೇಶ್ವರ ವಿರಕ್ತಮಠವು ನಿಜ ಅರ್ಥದಲ್ಲಿ ಜಗದ್ಗುರು ಪೀಠ. ಇಲ್ಲಿನ ಭಕ್ತರ ಪ್ರೀತಿ, ಅಭಿಮಾನ ದೊಡ್ಡದು. ಹುಬ್ಬಳ್ಳಿ ಮಠದ ಜವಾಬ್ದಾರಿಯಿಂದಾಗಿ ಇಲ್ಲಿನ ಭಕ್ತರ ಜೊತೆಗಿನ ಸಂಪರ್ಕದ ಕೊರತೆಯಾಗಿತ್ತು. ಇನ್ನು ಮೊದಲಿನ ವಾತಾವರಣ ಮೇಳೈಸಲಿದೆ. ಇದರಿಂದ ಭಕ್ತರಿಗೂ ಹಾಗೂ ನನಗೂ ಒಳ್ಳೆಯದಾಗಲಿದೆ’ ಎಂದು ಭಾವುಕರಾಗಿ ನುಡಿದರು.
‘ದೇವರ ಅಪ್ಪಣೆಯಂತೆ ಹುಬ್ಬಳ್ಳಿ ಮಠದ ಸೇವೆ ಪೂರ್ಣಗೊಳಿಸಿದ್ದೇನೆ. ಸಂತೋಷವಾಗಿದೆ. 14 ವರ್ಷ ಆಶ್ರಯ ನೀಡಿದ ಹುಬ್ಬಳ್ಳಿ ಮಠದ ಬಗ್ಗೆ ಅಪಾರ ಭಕ್ತಿಯಿದೆ. ಕೊನೆವರೆಗೂ ಗೌರವ ನೀಡುತ್ತೇನೆ. ಆ ಮಠ ಮತ್ತಷ್ಟು ಬೆಳೆಯಲಿ. ಅಲ್ಲಿನ ಭಕ್ತರು ಒಳ್ಳೆಯವರು. ಅವರ ಬಗ್ಗೆ ತಪ್ಪು ಅಭಿಪ್ರಾಯಗಳು ಬೇಡ’ ಎಂದರು.
‘ಪೀಠ ತ್ಯಜಿಸಿ ಹೊರಡುವಾಗ ಹುಬ್ಬಳ್ಳಿಯ ಭಕ್ತರು ಅಡ್ಡಗಟ್ಟಿ ನಿಂತರು. ಸದಾ ಕೈಯಲ್ಲಿರುವ ಬೆತ್ತವನ್ನೇ ಅವಸರದಲ್ಲಿ ಮರೆತು ಬರಬೇಕಾಯಿತು. ಹೇಗಾದರೂ ಮಾಡಿ, ಬೆತ್ತವನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ’ಎಂದು ಬಳಿಕ ಮಾತನಾಡಿದ ಸ್ವಾಮೀಜಿ ಹೇಳಿದರು.
ಮಠದಲ್ಲಿ ಸ್ವಾಮೀಜಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ‘ಹುಬ್ಬಳ್ಳಿಗೆ ಹೋದ ಬಳಿಕ ಕಳೆಗುಂದಿದ ಸ್ವಾಮೀಜಿ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ’ ಎಂದರು. ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳೂ ಭೇಟಿ ಮಾಡಿದರು.
ಇನ್ನು ಮುಂದೆ ಹಾನಗಲ್ ಶ್ರೀ!: ಅರಳೇಶ್ವರದ ಸಭೆಯ ಆರಂಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡರು, ‘ಒಲ್ಲದ ಮನಸ್ಸಿನಿಂದ ಹುಬ್ಬಳ್ಳಿ ಮಠಕ್ಕೆ ಪೀಠಾಧಿಪತಿಯಾದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಈಗ ಮನಸಾರೆ ಮರಳಿ ಬಂದಿದ್ದಾರೆ. ಇನ್ನು ಮುಂದೆ ಅವರನ್ನು ‘ಹಾನಗಲ್ ಕುಮಾರ ಮಹಾಸ್ವಾಮಿಗಳು’ ಎಂದು ಸಂಬೋಧಿಸೋಣ’ ಎಂದು ಘೋಷಿಸಿದರು.
‘ನೋವಾಗಿದ್ದರೆ ಕ್ಷಮಿಸಿ: ಮರಳಿ ಬನ್ನಿ’ ಹಾನಗಲ್ (ಹಾವೇರಿ ಜಿಲ್ಲೆ): ‘ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಏಕೆ ಪೀಠ ತ್ಯಾಗ ಮಾಡಿದರು ಎಂಬುದೇ ಯಕ್ಷಪ್ರಶ್ನೆ. ಶ್ರೀಗಳ ಈ ನಡೆಯನ್ನು ಯಾರೂ ಊಹಿಸಿರಲಿಲ್ಲ. ಆದರೆ ಸ್ವಾಮೀಜಿ ಪೀಠದಲ್ಲಿ ಮುಂದುವರಿಯಬೇಕು ಎಂಬುದೇ ಉತ್ತರ ಕರ್ನಾಟಕದ ಭಕ್ತರ ಆಶಯ’ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಉನ್ನತ ಸಮಿತಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು |
ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ: ಹುಬ್ಬಳ್ಳಿ ಮೂರು ಸಾವಿರ ಮಠ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ಪ್ರತ್ಯೇಕ ವಿಚಾರಣೆ ನಡೆಯಿತಲ್ಲದೇ, ಉಭಯ ನ್ಯಾಯಾಲಯಗಳು ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದವು.
ಭಕ್ತರ ಅಭಿಪ್ರಾಯ ಪಡೆದು ಉತ್ತರಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಕೋರಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಮಠದ ಭಕ್ತರಾದ ಆನಂದಯ್ಯ ಹಿರೇಮಠ ಹಾಗೂ ಇತರ ಮೂವರ ಪರ ವಕೀಲರು ಯಥಾಸ್ಥಿತಿ ಮುಂದುವರಿಸುವಂತೆ ಮನವಿ ಮಾಡಿದರು. ‘ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನಗರದಲ್ಲಿ ಇಲ್ಲ. ಅವರು ಬಂದ ನಂತರ ವಿವರವಾದ ತಕರಾರು ಅರ್ಜಿ ಸಲ್ಲಿಸಲಾಗುವುದು. ಹಾಗಾಗಿ ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು. ಯಾವುದೇ ಮಧ್ಯಾಂತರ ಆದೇಶ ನೀಡಬಾರದು’ ಎಂದು ಮೂರುಸಾವಿರ ಮಠ ಪರ ವಕೀಲ ಎಸ್.ಜಿ. ಅರಗಂಜಿ ಮನವಿ ಮಾಡಿದರು. ನ್ಯಾಯಾಧೀಶರಾದ ಪ್ರೀತಿ ಸದರಜೋಶಿ ವಿಚಾರಣೆಯನ್ನು ಮುಂದೂಡಿದರು.
ಮುಂದಕ್ಕೆ: ಗಂಗಾಧರೇಂದ್ರ ರಾಜಯೋಗೀಂದ್ರ ಸ್ವಾಮೀಜಿ ಬರೆದಿಟ್ಟಿರುವ ಉಯಿಲಿನ ಪ್ರಕಾರ ತಮ್ಮನ್ನೇ ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವಂತೆ ಕೋರಿ ಅರ್ಜಿದಾರ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಲ್ಲಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯಿತು. ಆದರೆ, ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಊರಿನಲ್ಲಿ ಇಲ್ಲದ ಕಾರಣ ಈ ಪ್ರಕರಣದ ವಿಚಾರಣೆ ನಡೆಸಬಾರದು. ವಿವರವಾದ ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮಠದ ಪರ ವಕೀಲ ಪ್ರಕಾಶ ಅಂದಾನಿಮಠ ವಾದ ಮಂಡಿಸಿದರು.
ನ್ಯಾಯಾಧೀಶರಾದ ರೇಹಾನಾ ಸುಲ್ತಾನಾ ವಿಚಾರಣೆಯನ್ನು ಮುಂದೂಡಿದರು. ಎರಡೂ ನ್ಯಾಯಾಲಯಗಳಲ್ಲೂ ಅರ್ಜಿದಾರರ ಪರವಾಗಿ ವಕೀಲರಾದ ಎಸ್.ಎನ್.ಪಾಟೀಲ, ಮೀರಾಬಾಯಿ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.