ಬೆಂಗಳೂರು: ‘ಅತ್ತೆ– ಮಾವನ ರಕ್ತಸಿಕ್ತ ಶವಗಳ ಜತೆಗೆ, ನಾವು ನಾಲ್ವರು ಆ ಕಂದಕದಲ್ಲಿ ಕಳೆದ ಕರಾಳ ದಿನವನ್ನು ನೆನಪಿಸಿಕೊಂಡರೆ ಈಗಲೂ ಮೈ ನಡುಗುತ್ತದೆ....’
ಮಹಾರಾಷ್ಟ್ರದ ವರಂಧಾ ಘಾಟ್‌ನಲ್ಲಿ ಶನಿವಾರ (ಡಿ.26) ರಾತ್ರಿ ಸಂಭವಿಸಿದ ಅಪಘಾತದಲ್ಲಿ, ಸುಮಾರು 800 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಫೋರ್ಡ್ ಕಾರಿನಲ್ಲಿ ಬದುಕುಳಿದ ಬೆಂಗಳೂರು ಮೂಲದ ನಾಲ್ವರ ಪೈಕಿ ಸುನೀಲ್ ತಮ್ಮ ಅನುಭವನ್ನು ಹಂಚಿಕೊಂಡಿದ್ದು ಹೀಗೆ.
‘ನಾವು ಬದುಕುಳಿದಿದ್ದೇ ದೊಡ್ಡ ಪವಾಡ. ನಿಜಕ್ಕೂ ದೇವರು ದೊಡ್ಡವನು. ದೇವರ ದರ್ಶನ ಸಿಗದಿದ್ದರೂ, ಅವನಿಂದ ನಾಲ್ವರಿಗೆ ಸಿಕ್ಕಿರುವ ಜೀವ ಭಿಕ್ಷೆ ಇದು ಎನ್ನಬಹುದು.
‘ಅತ್ತೆ ಮಗ ಅರವಿಂದ ಕಣ್ಣಬೀರನ್ ಅವರು ಕ್ರಿಸ್‌ಮಸ್ ರಜೆ ಕಳೆಯಲು ಮಹಾರಾಷ್ಟ್ರದ ಮಹಾಬಲೇಶ್ವರಕ್ಕೆ ಹೋಗೋಣ ಎಂದಿದ್ದರು. ಹೈದರಾಬಾದ್‌ನಲ್ಲಿದ್ದ ನಾನು ಅಲ್ಲಿಂದಲೇ ಕೊಲ್ಲಾಪುರಕ್ಕೆ ಬರುವುದಾಗಿ ಹೇಳಿದ್ದೆ.
‘ಕಾರಿನಲ್ಲಿ ತುಂಬಾ ದೂರ ಪ್ರಯಾಣ ಮಾಡಲು ಆಯಾಸವಾಗುತ್ತದೆ ಎಂಬ ಕಾರಣಕ್ಕೆ ಮಾವ ವಿ.ಜಿ. ಕಣ್ಣಬೀರನ್ ಹಾಗೂ ಅತ್ತೆ ಯುಮುನಾ ಅವರಿಗೆ ಬೆಂಗಳೂರಿನಿಂದ ಪುಣೆಗೆ ರೈಲು ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ಅರವಿಂದ ತಮ್ಮ ಕಾರಿನಲ್ಲಿ ಸಹೋದರಿ ಅನುಪಮಾ ಹಾಗೂ ಅವರ ಪುತ್ರಿ ಅರ್ಪಿತಾ, ವಿಜಯ ರಾಘವನ್ ಜತೆ ಡಿ. 24ರಂದು ಬೆಳಿಗ್ಗೆ ಮನೆಯಿಂದ ಕಾರಿನಲ್ಲಿ ಕೊಲ್ಲಾಪುರಕ್ಕೆ ಹೊರಟು ಬಂದಿದ್ದರು.
‘ಕೊಲ್ಲಾಪುರಕ್ಕೆ ಬಂದ ಅರವಿಂದ ಅವರೊಂದಿಗೆ ನಾನು ಸೇರಿಕೊಂಡೆ. ನಂತರ ಒಂದು ದಿನ ಕೊಲ್ಲಾಪುರ ಮತ್ತು ರಾಯಗಢ ಸುತ್ತಾಡಿದೆವು. ಮಾರನೆಯ ದಿನ ಪುಣೆಗೆ ಬಂದಿಳಿದ ಅತ್ತೆ– ಮಾವರನ್ನು ಕಾರಿನಲ್ಲಿ ಹತ್ತಿಸಿಕೊಂಡೆವು. ನಂತರ ಅಲ್ಲಿಂದ ಎಲ್ಲರೂ ಮುಂಬೈ ನೋಡಿಕೊಂಡು ರಾತ್ರಿ 9.30ರ ಸುಮಾರಿಗೆ ಮಹಾಬಲೇಶ್ವರಕ್ಕೆ ಹೊರಟೆವು.
‘ರಾತ್ರಿ 2ರ ಸುಮಾರಿಗೆ ಮಹಡ್ ನಗರ ಸಿಕ್ಕಿತ್ತು. ಅಲ್ಲಿಂದ ಮಹಾಬಲೇಶ್ವರಕ್ಕೆ 50 ಕಿ.ಮೀ. ಇದ್ದಿದ್ದರಿಂದ ಎಲ್ಲರೂ ಇಲ್ಲೇ ಉಳಿದುಕೊಂಡು ಬೆಳಿಗ್ಗೆ ಹೋಗೋಣ ಎಂದು ಹೋಟೆಲ್‌ಗಳಲ್ಲಿ ವಿಚಾರಿಸಿದಾಗ, ಎಲ್ಲೂ ಕೊಠಡಿಗಳು ಸಿಗಲಿಲ್ಲ. ಹಾಗಾಗಿ, ವರಂಧಾ ಘಾಟ್ ಮಾರ್ಗವಾಗಿ ಮಹಾಬಲೇಶ್ವರಕ್ಕೆ ಹೊರಟೆವು.
‘ಮಹಡ್‌ವರೆಗೆ ಕಾರು ಚಾಲನೆ ಮಾಡಿದ್ದ ನನಗೆ ಆಯಾಸವಾಗಿದ್ದರಿಂದ, ಅರವಿಂದ ಕಾರು ಚಲಾಯಿಸತೊಡಗಿದ. ನಾನು ಮುಂದೆ ಕುಳಿತಿದ್ದೆ. ಹಿಂದೆ ಕುಳಿತಿದ್ದ ಎಲ್ಲರೂ ಪ್ರಯಾಣದಿಂದ ಸುಸ್ತಾಗಿ ಮಲಗಿದ್ದರು. ಮಹಡ್ ಬಿಟ್ಟ ಅರ್ಧ ಗಂಟೆಯ ಬಳಿಕ ತಿರುವೊಂದರಲ್ಲಿ ಎದುರಿಗೆ ವೇಗವಾಗಿ ಬಂದ ಸರಕು ಸಾಗಣೆ ವಾಹನ ಕಾರಿಗೆ ಡಿಕ್ಕಿ ಹೊಡೆಯಿತು.
‘ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಅಂಚಿನಲ್ಲಿದ್ದ ತಡೆಗೋಡೆಯನ್ನು ಭೇದಿಸಿಕೊಂಡು ಕೆಳಕ್ಕೆ ಉರುಳತೊಡಗಿತು. ಮರಗಳು, ಪೊದೆ ಹಾಗೂ ಕಲ್ಲು ಬಂಡೆಗಳ ಮಧ್ಯೆ ಉರುಳಿದ ಕಾರಿನಲ್ಲಿ ನೆರವಿಗೆ ಕೂಗಿಕೊಳ್ಳುತ್ತಲೇ ನಾಲ್ಕೈದು ನಿಮಿಷದಲ್ಲೇ ಪಾತಾಳ ಸೇರಿದೆವು.
‘ಕೆಳಕ್ಕೆ ಬಿದ್ದ ಒಂದು ತಾಸಿನ ಬಳಿಕ ನಾನು ಎಚ್ಚರಗೊಂಡೆ. ಬಳಿ ಇದ್ದ ಮೊಬೈಲ್ ಬೆಳಕಿನಲ್ಲಿ ನೋಡಿದಾಗ ಹಿಂದೆ ಕುಳಿತಿದ್ದ ಮಾವ ಅದಾಗಲೇ ಮೃತಪಟ್ಟಿದ್ದರು. ತಲೆ ಸೇರಿ ದೇಹದ ಇತರ ಭಾಗಗಳಿಗೆ ತೀವ್ರ ಗಾಯವಾಗಿದ್ದರಿಂದ ಅತ್ತೆ ಏದುಸಿರು ಬಿಡುತ್ತಿದ್ದರು.
‘ಗಾಯಗೊಂಡಿದ್ದ ಅರವಿಂದ ಅನುಪಮಾ ಹಾಗೂ ಅರ್ಪಿತಾ ನೋವಿನಿಂದ ನರಳುತ್ತಿದ್ದರು. ನನಗೆ ತಲೆಗೆ ಸ್ವಲ್ಪ ಗಾಯವಾಗಿತ್ತು.
‘ಏದುಸಿರು ಬಿಡುತ್ತಿದ್ದ ಅತ್ತೆಗೆ ನೀರು ಕುಡಿಸಲು ಹುಡುಕಾಡಿದರೂ ಬಾಟಲ್ ಸಿಗಲಿಲ್ಲ. ಅರ್ಧ ಗಂಟೆವರೆಗೆ ಒಂದೇ ಸಮನೆ ಏದುಸಿರು ಬಿಡುತ್ತಿದ್ದ ಅತ್ತೆ ನನ್ನ ಕಣ್ಣೆದುರೇ ಕೊನೆಯುಸಿರೆಳೆದರು.
‘ಹೀಗೆ ಇಬ್ಬರ ಶವಗಳ ಜತೆಯೇ ಎಲ್ಲರೂ ಒಂದಿಂಚೂ ಅಲುಗಾಡಲಾಗದೆ ರಾತ್ರಿ ಕಳೆದವು. ಬೆಳಿಗ್ಗೆ ಎಚ್ಚರವಾದ ಬಳಿಕ ನಾನು ಮತ್ತು ಅರವಿಂದ ಕೈಯಿಂದ ಕಾರಿನ ಗಾಜು ಒಡೆದು ಕಾರಿನಿಂದ ಅನುಪಮಾ ಹಾಗೂ ಅರ್ಪಿತಾಳನ್ನು ಹೊರಕ್ಕೆಳೆದೆದು ಕೂರಿಸಿದೆವು’ ಎಂದು ಅವರು ಕಣ್ಣೀರಿಟ್ಟರು.
‘ಸಂದೇಶ ನೋಡಿ ದಂಗಾದೆ’: ‘ಸುನೀಲ್ ಅವರಿಂದ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಕರೆ ಬಂದಿತ್ತು. ಯಾವುದೋ ಕೆಲಸದ ಒತ್ತಡದಲ್ಲಿ ಕರೆ ಸ್ವೀಕರಿಸಲಾಗಿರಲಿಲ್ಲ. ನಂತರ ಅಪಘಾತ ಕುರಿತು ಅವರು ಕಳುಹಿಸಿದ್ದ ಸಂದೇಶ ನೋಡಿ ದಂಗಾದೆ’ ಸುನೀಲ್ ಅವರ ಸ್ನೇಹಿತ ಮಹೇಂದ್ರ ತಿಳಿಸಿದರು.
‘ಮಹಾಬಲೇಶ್ವರಕ್ಕೆ ಹೋಗಿ ಬರುವಾಗ ಕಾರು ಕಂದಕಕ್ಕೆ ಬಿದ್ದಿದೆ. ಅತ್ತೆ– ಮಾವ ಮೃತಪಟ್ಟಿದ್ದು, ಎಲ್ಲರೂ ಗಾಯಗೊಂಡು ಅನ್ನ– ನೀರು ಇಲ್ಲದೆ ಅರ್ಧ ದಿನ ಕಳೆದಿದ್ದೇವೆ. ಪ್ಲೀಸ್ ಯಾರಾದರೂ ನಮ್ಮನ್ನು ಸೇವ್ ಮಾಡಿ ಎಂದು ಅವರು ಸಂದೇಶ ಕಳುಹಿಸಿದ್ದರು
‘ಕೂಡಲೇ ಅವರ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ವಿಷಯ ತಿಳಿಸಿದೆ. ಈ ಪೈಕಿ ನನಗೆ ಪರಿಚಿತರಾಗಿದ್ದ ನಗರದ ಆರ್‌ಟಿಒ ಅಧಿಕಾರಿಯೊಬ್ಬರು ಮಹಾರಾಷ್ಟ್ರದ ಸತಾರ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಆ ನಂತರ ಸಂಜೆ ನಾನು ಹಾಗೂ ಅರವಿಂದ ಅವರ ಕುಟುಂಬದ ಕೆಲ ಸದಸ್ಯರು ಘಟನಾ ಸ್ಥಳಕ್ಕೆ ಹೋದೆವು.
‘ನಂತರ ನನಗೆ ಸಂದೇಶ ಬಂದ ಮೊಬೈಲ್ ಟವರ್ ಲೋಕೇಷನ್ ಆಧಾರದ ಮೇಲೆ ಕಾರು ಬಿದ್ದಿದ್ದ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು, ಚಾರಣಿಗರು ಮತ್ತು ಕೆಲ ಟ್ರಕ್ ಚಾಲಕರ ನೆರವಿನಿಂದ ಬೆಳಗ್ಗಿನ ಜಾವ 3ರ ಸುಮಾರಿಗೆ ಕಾರನ್ನು ಪತ್ತೆ ಹಚ್ಚಿ ಎಲ್ಲರನ್ನು ರಕ್ಷಿಸಿದರು’ ಎಂದು ಅವರು ಮಾಹಿತಿ ನೀಡಿದರು.
ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ: ಎರಡು ಆಂಬುಲೆನ್ಸ್‌ಗಳಲ್ಲಿ ಶವಗಳು, ಇನ್ನೊಂದರಲ್ಲಿ ಗಾಯಗೊಂಡಿದ್ದ ಅರವಿಂದ, ಅನುಪಮಾ ಹಾಗೂ ಅರ್ಪಿತಾಳನ್ನು ಪೋಲಾದ್‌ಪುರದಿಂದ ಬೆಂಗಳೂರಿಗೆ ಮಂಗಳವಾರ ಕರೆತಲಾಯಿತು.
ಯಶವಂತಪುರದಲ್ಲಿರುವ ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್‌ನಲ್ಲಿ ಅರವಿಂದ ಅವರ ನಿವಾಸದಲ್ಲಿ ಸಂಬಂಧಿಗಳ ದರ್ಶನಕ್ಕೆ ಕೆಲ ಹೊತ್ತು ಶವಗಳನ್ನು ಇರಿಸಲಾಗಿತ್ತು. ಸಂಜೆ 5ರ ಸುಮಾರಿಗೆ ಜಾಲಹಳ್ಳಿ ಕ್ರಾಸ್ ಸಮೀಪದಲ್ಲಿರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಮತ್ತೆ ಆಸ್ಪತ್ರೆಗೆ: ತೀವ್ರ ಗಾಯಗೊಂಡ ಅನುಪಮಾ ಅವರನ್ನು ನಗರದ ಹಾಸ್‌ಮ್ಯಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಬುಧವಾರ ಎರಡು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.
‘ಬಂಡೆ ಏರಿ ಕರೆ ಮಾಡಿದೆ’
‘ನನ್ನ ಮೊಬೈಲ್ ಹೊರತುಪಡಿಸಿ ಉಳಿದವರ ಮೊಬೈಲ್ ಕಾರಿನಲ್ಲಿ ಚೆಲ್ಲಾಪಿಲ್ಲಿಯಾಗಿ ಒಡೆದು ಹೋಗಿದ್ದವು. ಮನೆಯವರು ಮತ್ತು ಕುಟುಂಬದವರಿಗೆ ಕರೆ ಮಾಡಲು ನೆಟ್‌ವರ್ಕ್ ಬೇರೆ ಸಿಗುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಕಲ್ಲಿನ ಬಂಡೆ ಏರಿದಾಗ ಕೇವಲ ಒಂದು ಪಾಯಿಂಟ್ ನೆಟ್‌ವರ್ಕ್ ಸಿಕ್ಕಿತು’ ಎಂದು ಸುನೀಲ್ ತಿಳಿಸಿದರು.
‘ಕೂಡಲೇ ಬೆಂಗಳೂರಿನಲ್ಲಿದ್ದ ಸಹೋದರ ಹೇಮಂತ್‌ಗೆ ಮಧ್ಯಾಹ್ನ 1ರ ಸುಮಾರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ನಂತರ ಮತ್ತೊಬ್ಬ ಸ್ನೇಹಿತ ಮಹೇಂದ್ರ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಹಾಗಾಗಿ ಘಟನೆ ಕುರಿತು ಅವರಿಗೊಂದು ಸಂದೇಶ ಕಳುಹಿಸಿದೆ. ಅಷ್ಟರಲ್ಲೇ ಹೊರ ಲೋಕದ ಸಂಪರ್ಕಕ್ಕೆ ಇದ್ದ ಮೊಬೈಲ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಯಿತು.
‘ಇದಾದ ಮಾರನೇ ದಿನ ಬೆಳಗ್ಗಿನ ಜಾವ 3 ಗಂಟೆಗೆ ಪೊಲೀಸರು ಹಾಗೂ ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ನಾವಿದ್ದ ಸ್ಥಳಕ್ಕೆ ಬಂದರು. ನಂತರ ಕಾರಿನಲ್ಲಿದ್ದ ಅತ್ತೆ– ಮಾವ ಅವರ ಶವಗಳನ್ನು ಹೊರಕ್ಕೆಳೆದು ನಮ್ಮನ್ನು ರಕ್ಷಿಸಿದರು. ತೀವ್ರವಾಗಿ ಗಾಯ ಗೊಂಡಿದ್ದ ಅನುಪಮಾ, ಅರ್ಪಿತಾ ಹಾಗೂ ಅರವಿಂದನನ್ನು ಸಮೀಪದ ಪೋಲಾದ್‌ಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.