ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತು 2014ನೇ ಸಾಲಿಗೆ ನೀಡಿದ್ದ ‘ಶ್ರೀ ವಿಜಯ’ ಪ್ರಶಸ್ತಿಯನ್ನು ಲೇಖಕಿ, ಇಲ್ಲಿಯ ಕರ್ನಾಟಕ ರಾಜ್ಯ ಮುಕ್ತ ವಿ.ವಿ (ಕೆಎಸ್‌ಒಯು)ಯ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಕವಿತಾ ರೈ ಅವರು ವಾಪಸು ಮಾಡಿದ್ದಾರೆ.
ವಿವಾದದಿಂದ ಬೇಸತ್ತ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ‘ಶ್ರೀ ವಿಜಯ’ ಪ್ರಶಸ್ತಿ ಅಂಗವಾಗಿ ನೀಡಿದ್ದ ರೂ 1,11,111 ಚೆಕ್, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನು ವಾಪಸು ನೀಡಿದ್ದಾರೆ. ಜತೆಗೆ, ಅವರು ಹಾಲಂಬಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
‘ಯಾವುದೇ ರೀತಿಯ ಆಕಾಂಕ್ಷೆಗೆ ಒಳಗಾಗದಿದ್ದರೂ ‘ಶ್ರೀ ವಿಜಯ’ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸ ದಿದ್ದರೂ ಕಸಾಪ ನನ್ನನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿತ್ತು. ಕಸಾಪದ ಮೇಲಿನ ಅಭಿಮಾನ ಹಾಗೂ ಗೌರವದಿಂದ ಪ್ರಶಸ್ತಿ ಸ್ವೀಕರಿಸಿದ್ದೆ. ಆದರೆ, ಈಚಿನ ದಿನಗಳಲ್ಲಿ ನಾನು ಪಡೆದ ಪ್ರಶಸ್ತಿ ಕುರಿತು ಎದ್ದಿರುವ ಗೊಂದಲಗಳ ನಿವಾರಣೆ ಗಾಗಿ, ವಿಷಯಕ್ಕೆ ಅಂತ್ಯ ಹಾಡಲು ವಿನಮ್ರಪೂರ್ವಕವಾಗಿ ವಿಷಾ ದದಿಂದ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಅಭಿಪ್ರಾಯ ಪಡೆಯಲು ಸಂಪರ್ಕಿಸಿದಾಗ ಅವರು ಲಭ್ಯವಾಗಲಿಲ್ಲ.
ಏನಿದು ವಿವಾದ?: 40 ವಯಸ್ಸಿನೊಳಗಿನ ಉತ್ತಮ ಲೇಖಕರನ್ನು ಪ್ರೋತ್ಸಾಹಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತು ‘ಶ್ರೀ ವಿಜಯ’ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಿದೆ. 2014ನೇ ಸಾಲಿನ ‘ಶ್ರೀ ವಿಜಯ’ ಪ್ರಶಸ್ತಿಗಾಗಿ ಡಾ.ಕವಿತಾ ರೈ ಅವರನ್ನು ಆಯ್ಕೆಗೊಳಿಸಿತ್ತು.
ವಯಸ್ಸಿನ ಖಚಿತತೆ ಗಾಗಿ ಎಸ್‌ಎಸ್‌ಎಲ್‌ಸಿ ಇಲ್ಲವೆ ಜನ್ಮ ದಿನಾಂಕ ದಾಖಲಾಗಿರುವ ಅಧಿಕೃತ ಪ್ರಮಾಣಪತ್ರವನ್ನು ಪರಿಷತ್ತು ಪಡೆಯುತ್ತದೆ.
ಆಗ ಕವಿತಾ ರೈ ಅವರು, ಜನ್ಮದಿನಾಂಕಕ್ಕೆ ಸಂಬಂಧಿಸಿ 15.10. 1974 ಎಂದು ಪ್ರಮಾಣಪತ್ರವನ್ನು ನೀಡಿದ್ದರು. ಕಸಾಪ ಅವರಿಗೆ ಪ್ರಶಸ್ತಿ ಘೋಷಿಸಿದ ನಂತರ ಪರಿಷತ್ ಅಧ್ಯಕ್ಷರಿಗೆ ಕೆಲವರು ದೂರು ಸಲ್ಲಿಸಿದ್ದರು.
ಆಗ ಕವಿತಾ ರೈ ಅವರು ತಮ್ಮ ಬಳಿಯಿದ್ದ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಸಲ್ಲಿಸಿದ್ದರು. ಇದರಿಂದ ಅವರ ವಿರುದ್ಧ ಬಂದ ಆರೋಪ, ದೂರುಗಳನ್ನು ಪರಿಶೀಲಿ ಸಿದ ಪರಿಷತ್ತು ನಿರ್ಲಕ್ಷಿಸಿ ಪ್ರಶಸ್ತಿ ಪ್ರದಾನ ಕೂಡಾ ಮಾಡಿತ್ತು.
ಆದರೆ, ಅವರು 15.10. 1969ರಲ್ಲಿ ಜನಿಸಿದ್ದು 45 ವರ್ಷದವ ರಾಗಿದ್ದಾರೆ. ಪ್ರಶಸ್ತಿಗಾಗಿ ಜನ್ಮ ದಿನಾಂಕವನ್ನು ತಿದ್ದಿ ಕಡಿಮೆ ವಯಸ್ಸೆಂದು ಪ್ರಮಾಣಪತ್ರ ಸಲ್ಲಿಸಿ ದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆ ಯಡಿ ವಕೀಲ ಸಿ. ಮೋಹನ್ ಅವರು ಮಾಹಿತಿ ಪಡೆದಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಕವಿತಾ ಅವರ ಜನ್ಮ ದಿನಾಂಕದ ಮಾಹಿತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.