ಧಾರವಾಡ: ‘ಇಲ್ಲಿನ ನೆಲದಲ್ಲಿ ಏನೋ ವಿಶೇಷ ಶಕ್ತಿ ಇದೆ. ನಾಡಿನ ಶ್ರೇಷ್ಠ ಸಂಗೀತಗಾರರು ಈ ನೆಲದಲ್ಲಿಯೇ ಜನಿಸಿ ಸಾಧನೆ ಮಾಡಿದ್ದಾರೆ’ ಎಂದು ಹಿಂದೂಸ್ತಾನಿ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಹೇಳಿದರು.
ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ಬುಧವಾರ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಮನ್ಸೂರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಪಂ.ಭೀಮಸೇನ ಜೋಶಿ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ ಸೇರಿದಂತೆ ಅನೇಕ ಸಂಗೀತ ದಿಗ್ಗಜರು ಇಲ್ಲಿ ಹುಟ್ಟಿ, ಬೆಳೆದಿದ್ದಾರೆ. ತಮ್ಮ ಸಾಧನೆಯ ಮೂಲಕ ಈ ನೆಲಕ್ಕೊಂದು ಘನತೆ ತಂದು ಕೊಟ್ಟಿದ್ದಾರೆ’ ಎಂದರು.
‘ಹನ್ನೆರಡು ವರ್ಷದ ಬಾಲಕಿಯಾಗಿದ್ದಾಗ ಪಂ.ಮನ್ಸೂರ ಅವರಿಂದ ಪ್ರಶಸ್ತಿಯೊಂದನ್ನು ಸ್ವೀಕರಿಸಿದ್ದೆ. ಅಂದು ಅವರು ನೀನು ದೊಡ್ಡ ಸಾಧನೆ ಮಾಡುತ್ತೀ ಎಂದು ಆಶೀರ್ವದಿಸಿದ್ದರು. ಇಂದು ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸೌಭಾಗ್ಯ. ಇಲ್ಲಿನ ಜನ ತೋರುವ ಪ್ರೀತಿ, ಸಂಗೀತವನ್ನು ಆರಾಧಿಸುವ ರೀತಿಯನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ. ಧಾರವಾಡದ ಜೊತೆ ನನಗೆ ಸುಮಾರು 30 ವರ್ಷಗಳ ಬಾಂಧವ್ಯವಿದೆ’ ಎಂದು ಭಾವುಕರಾಗಿ ನುಡಿದರು.
ಯುವ ಪುರಸ್ಕಾರ: ಯುವ ಪುರಸ್ಕಾರ ಪಡೆದ ಪುಣೆಯ ಸಾನಿಯಾ ಪಾಟಣಕರ ಮತ್ತು ಬೆಂಗಳೂರಿನ ಮೇಘನಾ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು. ಪಂ. ರಾಜಶೇಖರ ಮನ್ಸೂರ ಮಾತನಾಡಿ, ‘ಸಂಗೀತ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಗುರುತಿಸಿ ಪ್ರತಿ ವರ್ಷ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ ಸಂಗೀತದಲ್ಲಿ ಬದ್ಧತೆ ತೋರುವ ಮತ್ತು ಆ ಕ್ಷೇತ್ರದಲ್ಲಿಯೇ ಸಾಧನೆ ಮಾಡುವ ಲಕ್ಷಣ ತೋರಿದ ಕಲಾವಿದರನ್ನು ಗುರುತಿಸಿ ಯುವ ಪುರಸ್ಕಾರ ನೀಡಲಾಗುತ್ತದೆ’ ಎಂದರು.
ರಾಷ್ಟ್ರೀಯ ಪ್ರಶಸ್ತಿ 1 ಲಕ್ಷ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ, ಯುವ ಪುರಸ್ಕಾರ ತಲಾ 25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.