ಧಾರವಾಡ: ‘ಈ ನೆಲದ ಸತ್ವವನ್ನು ಹೀರಿಕೊಂಡು ಸಂಶೋಧನೆಗೆ ಹೊಸ ಆಯಾಮ ತಂದು ಕೊಟ್ಟ ದೊಡ್ಡ ಪ್ರತಿಭೆ ಡಾ.ಎಂ.ಎಂ.ಕಲಬುರ್ಗಿ’ ಎಂದು ಹಿರಿಯ ವಿಮರ್ಶಕ ಡಾ.ಜಿ.ಎಸ್. ಆಮೂರ ಅಭಿಪ್ರಾಯಪಟ್ಟರು.
ಸಾಹಿತ್ಯ ಸಂಭ್ರಮ ಟ್ರಸ್ಟ್, ಅಣ್ಣಾಜಿರಾವ್ ರಂಗ ಮಂದಿರ ಪ್ರತಿಷ್ಠಾನ ಹಾಗೂ ಹಿರೇಮಲ್ಲೂರು ಈಶ್ವರನ್ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ಡಾ.ಎಂ.ಎಂ.ಕಲಬುರ್ಗಿ ನೆನಪು’ ಕಾರ್ಯಕ್ರಮದಲ್ಲಿ ಆರಂಭಿಕ ನುಡಿಗಳನ್ನಾಡಿದ ಅವರು, ‘ಸಂಶೋಧನಾ ಕ್ಷೇತ್ರದಲ್ಲಿ ಕಲಬುರ್ಗಿ ಅನುಸರಿಸಿದ ನೀತಿ ಮತ್ತು ವಿಧಾನ, ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮಾದರಿಯೊಂದನ್ನು ಹುಟ್ಟು ಹಾಕಿದೆ. ಅದನ್ನು ಧಾರವಾಡ ಮಾದರಿ ಎನ್ನಬಹುದು’ ಎಂದರು.
‘ಸಾಹಿತ್ಯದಷ್ಟೇ ಸಂಶೋಧನೆಗೆ ಪ್ರಾಧಾನ್ಯ ತಂದು ಕೊಟ್ಟವರು ಕಲಬುರ್ಗಿ. ಅರಿವನ್ನು ವಿಸ್ತರಿಸುವ ಅನುಸಂಧಾನ ಅವರ ಚಿಂತನೆಯ ಕ್ರಮವಾಗಿತ್ತು. ಧಾರವಾಡದ ಸತ್ವವನ್ನು ಹೀರಿಕೊಂಡು ಸಂಶೋಧನೆ ಕಟ್ಟಿಕೊಟ್ಟರು. ಅವರ ಆ ವಿಧಾನ ಎಲ್ಲರಿಗೂ ಮಾದರಿ ಎಂದರು.
‘ಹತ್ಯೆ, ಕೊಲೆಗಳು ಇದುವರೆಗೆ ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ನಡೆಯುತ್ತಿದ್ದವು. ಆದರೆ ಸಾಹಿತ್ಯ ಕೃಷಿ ಮಾಡಿಕೊಂಡಿದ್ದವರನ್ನು ಯಾಕೆ ಕೊಲೆ ಮಾಡಲಾಯಿತು? ಅವರಿಂದ ಯಾರಿಗೆ ಭಯವಿತ್ತು? ಅವರ ಸಂಶೋಧನೆಯಿಂದ ಯಾರಿಗೆ ಹಾನಿಯಾಗಿತ್ತು? ಎನ್ನುವುದು ಇಂದಿಗೂ ದೊಡ್ಡ ರಹಸ್ಯವಾಗಿಯೇ ಉಳಿದಿದೆ’ ಎಂದು ಹೇಳಿದರು.
‘ಡಾ.ಕಲಬುರ್ಗಿ ಮಾಸ್ತರಿಕೆ ಕುರಿತು ಮಾತನಾಡಿದ ಡಾ.ಬಾಳಣ್ಣ ಶೀಗಿಹಳ್ಳಿ, ತಮ್ಮ ಸಂಪರ್ಕಕಕ್ಕೆ ಬಂದ ವ್ಯಕ್ತಿಗಳು, ವಿದ್ಯಾರ್ಥಿಗಳನ್ನು ಉತ್ತೇಜಿಸುವ ಗುಣ ಡಾ.ಕಲಬುರ್ಗಿ ಅವರದಾಗಿತ್ತು. ಕಲಿಸುವುದು ಮತ್ತು ಕಲಿಯುವುದನ್ನು ಜೊತೆಯಾಗಿಯೇ ನಡೆಸಿಕೊಂಡು ಬಂದವರು ಅವರು. ಅವಿಭಕ್ತ ಪ್ರಜ್ಞೆ ಅವರ ಬದುಕು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಜೀವಂತವಾಗಿತ್ತು ಎಂದರು.
ಹಿರಿಯ ಸಾಹಿತಿ ಡಾ.ಸಿ.ವೀರಣ್ಣ ಮಾತನಾಡಿ, ‘ಪಂಚಾಚಾರ್ಯ ಪರಂಪರೆ, ಪಂಚ ಪೀಠಗಳ ಕುರಿತು ಅವರು ನಡೆಸಿದ ಅಧ್ಯಯನ, ಆ ಮೂಲಕ ಹೇಳ ಹೊರಟಿದ್ದ ಸತ್ಯಗಳು ಅತ್ಯಂತ ಖಾರವಾಗಿದ್ದವು. ಇನ್ನು ವಚನಗಳಲ್ಲಿ ಸಂಸ್ಕೃತ ಶ್ಲೋಕಗಳು ಸೇರಿಕೊಂಡ ಬಗ್ಗೆ ಅಧ್ಯಯನ ನಡೆಸಲು ಸಾಕಷ್ಟು ಯೋಚಿಸಿದ್ದರು. ಯಾವುದೇ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡರೂ ಅದಕ್ಕೊಂದು ಹೊಸ ಆಯಾಮ ದಕ್ಕಿಸುವ ತಾಕತ್ತು ಕಲಬುರ್ಗಿ ಅವರಿಗೆ ಇತ್ತು ಮತ್ತು ಅದು ಮಾದರಿಯಾಗಿಯೇ ನಿಲ್ಲುತ್ತಿತ್ತು. ಇದೇ ಮಾರ್ಗದಲ್ಲಿ ಅವರ ಸಂಶೋಧನೆಗಳು ಮುಂದುವರೆಯಬೇಕು’ ಎಂದು ಹೇಳಿದರು.
ಡಾ.ಕಲಬುರ್ಗಿ ಅವರ ನೆನಪುಗಳ ಬೆನ್ನು ಹತ್ತಿದ ಪ್ರತಿ ಸಾಹಿತಿ, ಸಂಶೋಧಕರು, ಕವಿಗಳು ಹಾಗೂ ಚಿಂತಕರು ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು. ಜೊತೆಗೆ ಅವರ ಮಾನವೀಯ ಗುಣ, ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳನ್ನು ಮೆಲುಕು ಹಾಕಿದರು.
* ಸಾಹಿತ್ಯದಲ್ಲಾಗಿರುವ ಕೆಲವೊಂದು ಅನ್ವೇಷಣೆಗಳು ಕೆಲವೊಮ್ಮೆ ಧರ್ಮಕ್ಕೆ ಆಘಾತ ನೀಡುತ್ತವೆ. ಕಲಬುರ್ಗಿ ಅವರ ವಿಷಯದಲ್ಲೇ ಇದೇ ಆಗಿರಬಹುದು ಎಂಬುದು ನನ್ನ ಅನಿಸಿಕೆ.
-ಡಾ. ಜಿ.ಎಸ್.ಆಮೂರ
ಹಿರಿಯ ವಿಮರ್ಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.