ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆ(ಸಮಾನಾಂತರ ವೇದಿಕೆ) ಶ್ರವಣಬೆಳಗೊಳ: ‘ಧರ್ಮವನ್ನು ಉಳಿಸಲು ಹಿಂದೂ ಹೆಣ್ಣುಮಕ್ಕಳು ಹತ್ತು ಮಕ್ಕಳನ್ನು ಹೆರಬೇಕು ಎಂದು ಫತ್ವಾ ಹೊರಡಿಸುವ ಸಾಧು- ಸಂತರು ಸಾಧ್ಯವಿದ್ದರೆ ತಮ್ಮ ಕಿವಿ, ಮೂಗುಗಳಲ್ಲಿ ಸಾವಿರಾರು ಮಕ್ಕಳನ್ನು ಹೆತ್ತು ಧರ್ಮವನ್ನು ಉದ್ಧರಿಸಲಿ’ ಎಂದು ಸವಾಲು ಹಾಕಿದವರು ಜನವಾದಿ ಸಂಘಟನೆಯ ಕೆ.ಎಸ್. ವಿಮಲಾ.
ಇಂಥ ಚರ್ಚೆಗೆ ವೇದಿಕೆಯಾದದ್ದು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ನಡೆದ ಸಂಕೀರ್ಣ ಗೋಷ್ಠಿ. ‘ಹತ್ತು ಸಾವಿರ ವರ್ಷದ ಹಿಂದೆ ಇದ್ದ ನಮ್ಮ ಋಷಿಮುನಿಗಳಿಗೆ ವಿಮಾನ ತಂತ್ರಜ್ಞಾನ ಗೊತ್ತಿತ್ತು ಎಂದು ಹೇಳುವವರು ಕರ್ಣ ಕುಂತಿಯ ಕಿವಿಯಲ್ಲಿ ಜನಿಸಿದ್ದನ್ನೂ ಒಪ್ಪಿಕೊಂಡು, ತಾವೂ ಹಾಗೆಯೇ ಮಕ್ಕಳನ್ನು ಹೆರಲಿ. ಅದಕ್ಕಾಗಿ ಹೆಣ್ಣನ್ನು ಬಲಿಕೊಡುವುದು ಬೇಡ. ಮಕ್ಕಳನ್ನು ಹೆರುವ ಸ್ವಾತಂತ್ರ್ಯ ಹೆಣ್ಣಿನದು. ಅದರ ಮೇಲೆ ಗಂಡನಿಗೂ ಹಕ್ಕಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಕೃತಿಯೇ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ, ರಾಷ್ಟ್ರಭಕ್ತಿಯ ಹೆಸರಿನಲ್ಲಿ ಮತ ಪಡೆದು ತನ್ನ ಹೆಸರನ್ನೇ ಅಂಗಿಯಲ್ಲಿ ಬರೆಸಿಕೊಳ್ಳುವ ರಾಷ್ಟ್ರಭಕ್ತರಿಂದ ಸಮಾನತೆಯ, ಸಾಮರಸ್ಯದ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ. ಅದು ನಮ್ಮ ನಿಮ್ಮಂಥ ಸಾಮಾನ್ಯರಿಂದ ಮಾತ್ರ ಸಾಧ್ಯ ಎಂದರು.
ನಮ್ಮಲ್ಲಿ ಮಿದುಳನ್ನು ವೈಭವೀಕರಿಸಲಾಗುತ್ತಿದೆ. ಅಂಥ ಮನಸುಗಳನ್ನು ಧಿಕ್ಕರಿಸಬೇಕು. ಮಿದುಳಿನಷ್ಟೇ ಕೈ, ಕಾಲುಗಳ ಶಕ್ತಿಯೂ ಮುಖ್ಯ. ಮಹಿಳೆಗೆ ಸವಲತ್ತುಗಳನ್ನು ಕಿತ್ತು ಕೊಡುವ, ಅಸಮಾನತೆಯನ್ನು ದೂರ ಮಾಡುವ ಸೂಕ್ಷ್ಮ ಸಂವೇದನೆಯ ಕೃತಿಗಳು ಹೊರಬರಬೇಕು ಎಂದರು.
ಮಹಿಳಾ ಸಮಾನತೆಯೇ ಮಾನವ ಸಮಾನತೆ: ‘ಮಹಿಳೆ : ಸಮಾನತೆ ಮತ್ತು ಸವಾಲುಗಳು’ ವಿಷಯವಾಗಿ ಮಾತನಾಡಿದ ಡಾ.ಕೆ. ಶರೀಫಾ ಅವರು,ಮಹಿಳಾ ಸಮಾನತೆಯು ಮಾನವ ಸಮಾನತೆಯ ಪ್ರಶ್ನೆಯೂ ಹೌದು. ಪುರಾಣದ ಅರ್ಧನಾರೀಶ್ವರ ಕಲ್ಪನೆಯಲ್ಲಿದ್ದ ಸಮಾನತೆ ಈಗ ಯಾಕಿಲ್ಲ ಎಂದು ಪ್ರಶ್ನಿಸಿದರು.
ಸಮಾನತೆ ದಾನವಲ್ಲ. ತವರಿಗೆ ಬಂದ ಮಗಳಿಗೆ ನೀಡುವ ಸೀರೆಯಂತಲ್ಲ. ಸಮಾನತೆಯ ಮೂಲ ಇರುವುದು ಆಸ್ತಿಯ ಹಕ್ಕಿನಲ್ಲಿ ಎಂದ ಅವರು, ಶಕ್ತಿ ಕೇಂದ್ರದಲ್ಲಿ ಸಮಾನತೆ ಸಿಗಬೇಕು. ಆದರೆ, ಹೆಣ್ಣನ್ನು ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ತುಣುಕು ತುಣುಕಾಗಿ ಛಿದ್ರಗೊಳಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಹಿಳೆಯರ ಶತ್ರುಗಳು: ಮಹಿಳೆಯರ ಶತ್ರುಗಳು ಯಾರು ಎಂದು ಹೇಳುವುದೇ ಕಷ್ಟವಾಗಿದೆ. ಶತ್ರುಗಳ ಪಲ್ಲಟವಾಗಿದೆ. ಗ್ಯಾಟ್, ಡಂಕನ್ ಒಪ್ಪಂದಗಳಿಂದಾಗಿ ಶತ್ರುಗಳನ್ನು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
‘ಸನ್ಯಾಸಿ ಬಾಬಾ ರಾಮದೇವ ಗಂಡುಮಕ್ಕಳನ್ನೇ ಹೆರುವಂತಹ ಮಾತ್ರೆ ತಯಾರಿಸಿದ್ದಾನಂತೆ. ಮಾತ್ರೆ ತಿಂದು ಮಗುವಾಗುವುದಿದ್ದರೆ ಗಂಡ ಯಾಕೆ ಬೇಕು? ಮದುವೆಯೇ ಆಗದ ಸಾಕ್ಷಿ ಮಹಾರಾಜ್, ಪ್ರಮೋದ್ ಮುತಾಲಿಕ್ ಮುಂತಾದವರು ಹತ್ತು ಮಕ್ಕಳನ್ನು ಹಡೆಯಿರಿ ಎನ್ನುತ್ತಿದ್ದಾರೆ. ಹಾಗಾದರೆ ಹೆಣ್ಣು ಹೊರಗೆ ಬಂದು ದುಡಿಯುವುದು ಬೇಡವೇ. ಆ ಮಕ್ಕಳನ್ನು ಆಶ್ರಮದಲ್ಲಿ ಬಿಡಿ, ಅವು ಬದುಕಿಕೊಳ್ಳುತ್ತವೆ ಎಂದು ಅವರು ಹೇಳುತ್ತಾರೆ. ಆದರೆ, ನಮ್ಮ ಗರ್ಭ ನಮ್ಮ ತೀರ್ಮಾನ’ ಎಂದು ಹೇಳಿದರು.
ಸಂವಾದದಲ್ಲಿ ಪಾಲ್ಗೊಂಡ ಲೇಖಕಿ ಡಿ. ನಳಿನಾ ಮಾತನಾಡಿ, ‘ಮಹಿಳೆಯರನ್ನು ಕಡೆಗಣಿಸಿದ ಸಮಾಜ ಉದ್ಧಾರವಾಗುವುದಿಲ್ಲ ಎಂದು ಬುದ್ಧನೇ ಹೇಳಿದ್ದ. ಆದರೆ, ಇಂದು ಮಹಿಳೆಯರನ್ನು ಆಂತರಿಕವಾಗಿ ಒಡೆಯಲಾಗಿದೆ. ಅವ್ಯವಸ್ಥಿತ ಮಹಿಳೆಯ ನಿರ್ಮಾಣವಾಗಿದೆ. ಇದನ್ನು ಬದಲಿಸಲು ಸಾಹಿತ್ಯ ಸಂಜೀವಿನಿಯಿಂದ ಮಾತ್ರ ಸಾಧ್ಯ’ ಎಂದರು.
ಲೇಖಕ ಕುಂಸಿ ಉಮೇಶ್ ಮಾತನಾಡಿ, ‘ಮಹಿಳೆಯರ ವಿವೇಕವನ್ನು ಯಾರೂ ಗಮನಿಸುತ್ತಿಲ್ಲ. ಮಹಿಳೆಯರ ಹಕ್ಕುಗಳ ಬಗ್ಗೆ ಮೊದಲು ಮಾತನಾಡಿದವರು ಅಂಬೇಡ್ಕರ್. ಆದರೆ ಆ ಮಾತನ್ನು ಯಾರೂ ಕೇಳಿಸಿಕೊಂಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
ಡಾ. ನಿಕೇತನಾ ಮಾತನಾಡಿ, ‘ಜಾಗತೀಕರಣ, ನಗರೀಕರಣ ಹೀಗೆ ಎಲ್ಲ ಕರಣಗಳೂ ಹೆಣ್ಣಿನ ಸಮಯವನ್ನು ನಾಶಪಡಿಸುತ್ತಿವೆ. ಶಾಲೆಗಳಲ್ಲಿ ಲಿಂಗಸೂಕ್ಷ್ಮತೆಯ ಶಿಕ್ಷಣ ನೀಡಿ ಅಂತಃಸತ್ವವನ್ನು ಬೆಳಗಿದರೆ ಮಾತ್ರ ಬದಲಾವಣೆ ಸಾಧ್ಯ’ ಎಂದರು
‘ಎಸ್.ಎಲ್. ಭೈರಪ್ಪ ಕೊಳಕು ಮನಸಿನ ಲೇಖಕ’
ಸಂಕೀರ್ಣ ಗೋಷ್ಠಿಯಲ್ಲಿ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ವಿರುದ್ಧ ಆಕ್ರೋಶ ಸ್ಫೋಟಗೊಂಡಿತು. ಲೇಖಕಿಯರ ಆಕ್ರೋಶಕ್ಕೆ ಸಭಿಕರೂ ಧ್ವನಿಗೂಡಿಸಿ ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು.
‘ಮಹಿಳೆ: ಸಮಾನತೆ ಮತ್ತು ಸವಾಲುಗಳು’ ವಿಚಾರವಾಗಿ ಮಾತನಾಡಿದ ಲೇಖಕಿ ಡಾ.ಕೆ. ಶರೀಫಾ ಅವರು, ‘ಎಸ್.ಎಲ್. ಭೈರಪ್ಪ ಅವರು ಕೆಳವರ್ಗದ ಮಹಿಳೆಯರನ್ನು ಶುದ್ಧವಾಗಿಡಲು ಬಿಟ್ಟೇ ಇಲ್ಲ. ಮೇಲ್ವರ್ಗದ ಮಹಿಳೆಯರಿಗೆ ಮಾತ್ರ ಶುದ್ಧತೆಯ ಪಟ್ಟ ನೀಡಿದ್ದಾರೆ. ಪಾವಿತ್ರ್ಯದ ಕಲ್ಪನೆಯನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಅವರ ‘ಯಾನ’ ಮತ್ತು ‘ಕವಲು’ ಕಾದಂಬರಿಗಳು ಕೆಟ್ಟ ಪ್ರತಿಪಾದನೆಯ ಉದಾಹರಣೆಗಳು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅವರ ಕಾದಂಬರಿಗಳಲ್ಲಿ ಮುಂದುವರಿದ ಮಹಿಳೆಯರನ್ನು ನೈತಿಕತೆ ಬಿಟ್ಟವರೆಂದು ಬಿಂಬಿಸಿದ್ದಾರೆ. ಒಬ್ಬ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಇರುವ ಲೇಖಕ ಹೆಣ್ಣುಮಕ್ಕಳನ್ನು ಇಷ್ಟು ಕೀಳಾಗಿ ಕಾಣುತ್ತಾರೆ ಎಂದರೆ ಅದನ್ನು ಎಲ್ಲರೂ ಪ್ರತಿಭಟಿಸಬೇಕು’ ಎಂದರು.
ಶರೀಫಾ ಅವರ ಈ ಮಾತುಗಳಿಗೆ ಇನ್ನಷ್ಟು ಬಲ ನೀಡಿದವರು ಪತ್ರಕರ್ತೆ ಗೌರಿ ಲಂಕೇಶ್. ‘ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯಲ್ಲಿ ಬೇರೆಯವರನ್ನು ಪ್ರೇಮಿಸಿದ ಹೆಣ್ಣು ಬಂಜೆಯಾಗುತ್ತಾಳೆ. ‘ಕವಲು’ ಕಾದಂಬರಿಯಲ್ಲಿ ‘ಸುಖವಾಗಿರಬೇಕಾದರೆ ಓದಿದ ಹೆಣ್ಣನ್ನು ಮದುವೆಯಾಗಬಾರದು, ಬುದ್ಧಿಮಾಂಧ್ಯೆಯನ್ನು ಮದುವೆಯಾಗಬೇಕು’ ಎನ್ನುತ್ತಾರೆ. ಅಂಥವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಮಾತನಾಡುತ್ತಾರೆ. ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಭೈರಪ್ಪ ರಾಷ್ಟ್ರೀಯ ಪ್ರಾಧ್ಯಾಪಕರಾಗುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಜನವಾದಿಯ ಕೆ.ಎಸ್. ವಿಮಲಾ, ‘ದುಡಿಯುವ ಹೆಣ್ಣುಮಕ್ಕಳನ್ನು ಸಿಕ್ಕ ಸಿಕ್ಕ ಗಂಡಸರ ಜೊತೆ ಮಲಗಲು ಹೊರಗೆ ಹೋಗುತ್ತಾರೆ ಎನ್ನುವ, ಹೆಣ್ಣುಮಕ್ಕಳು ಅತ್ಯಾಚಾರ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ ಎಂಬ ಕೊಳಕು ಸಂದೇಶ ನೀಡಿದ ಲೇಖಕನಿಗೆ ಧಿಕ್ಕಾರ ಕೂಗುವ ಬದಲು ಸಮ್ಮಾನ ಮಾಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.