ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಗಜಾನನ ವೃತ್ತದ ಬಳಿಯ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದ ಬಳಿ ಶುಕ್ರವಾರ ಸಂಜೆ ಭಕ್ತರೊಬ್ಬರು ವಿತರಣೆ ಮಾಡಿದ್ದ ಪ್ರಸಾದ ಸೇವಿಸಿ ಒಬ್ಬ ಮಹಿಳೆ ಮೃತಪಟ್ಟಿದ್ದು, 12 ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಂಗಮ್ಮ ದೇವಾಲಯಕ್ಕೆ ಮಂಗಳವಾರ ಮತ್ತು ಶುಕ್ರವಾರದಂದು ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಹರಕೆ ಹೊತ್ತವರು ಆ ದಿನಗಳಲ್ಲಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸುವುದು ಇಲ್ಲಿನ ವಾಡಿಕೆ. ಅದರಂತೆ ಶುಕ್ರವಾರ ಸಂಜೆ ಮಹಿಳೆಯೊಬ್ಬರು ವಿತರಿಸಿದ ಪ್ರಸಾದ (ಕೇಸರಿ ಬಾತ್) ಸೇವನೆಯಿಂದ ಈ ದುರಂತ ನಡೆದಿದೆ. ಸದ್ಯ ಪೊಲೀಸರು ಪ್ರಸಾದ ವಿತರಣೆ ಮಾಡಿದ ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.
ದೇವಾಲಯದ ಬಳಿ ಮಹಿಳೆಯಿಂದ ಪ್ರಸಾದ ತೆಗೆದುಕೊಂಡು ಹೋಗಿ ಮನೆಯವರಿಗೆ ನೀಡಿದ ಶ್ರೀರಾಮನಗರದ ರಾಜು ಮತ್ತು ನಾರಾಯಣಮ್ಮ ಎಂಬುವರ ಎರಡು ಕುಟುಂಬಗಳ 10 ಮಂದಿ ಸೇರಿದಂತೆ 13 ಜನರಲ್ಲಿ ಪ್ರಸಾದ ಸೇವನೆಯಿಂದಾಗಿ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿತ್ತು.
ರಾಜು ಕುಟುಂಬದವರು ರಾತ್ರಿಯೇ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ನಸುಕಿನ ಜಾವ ಕೋಲಾರದ ಎಸ್‌ಎನ್ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಯೂ ಅಸ್ವಸ್ಥರ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಅವರನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜಾಲಪ್ಪ ಆಸ್ಪತ್ರೆಗೆ ದಾಖಲಾದ ಕೆಲ ಹೊತ್ತಿಗೆ ರಾಜು ಅವರ ಸಹೋದರ ಗಂಗಾಧರ್ (35) ಅವರ ಪತ್ನಿ ಕವಿತಾ (28) ಅವರು ಮೃತಪಟ್ಟರು.
ಇದನ್ನೂ ಓದಿ:ಸುಳ್ವಾಡಿ ದುರಂತ: ಜನ್ಮದಿನವೇ ಮರಣ ದಿನವಾಯಿತು
ಸದ್ಯ ಜಾಲಪ್ಪ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಗಂಗಾಧರ್ ಮತ್ತು ಅವರ ಮಕ್ಕಳಾದ ಗಾನವಿ(7), ಶರಣ್ಯ(5), ರಾಜು, ಅವರ ಪತ್ನಿ ರಾಧಾ (25), ಶಿಡ್ಲಘಟ್ಟ ತಾಲ್ಲೂಕಿನ ಗಡಿಮುಂಚೇನಹಳ್ಳಿಯ ನಿವಾಸಿ ಸರಸ್ವತಮ್ಮ ಎಂಬುವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಜು ಅವರ ಪಕ್ಕದ ಮನೆಯ ನಾರಾಯಣಮ್ಮ (50), ಅವರ ಮಗ ಶಿವಕುಮಾರ್ (30), ತಮ್ಮ ವೆಂಕಟರವಣಪ್ಪ (40) ಅವರು ಚಿಂತಾಮಣಿಯ ಡೆಕ್ಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಹಳ್ಳಿಯ ನಿವಾಸಿ ಸುಧಾ ಮತ್ತು ಅವರ ಮಕ್ಕಳಾದ ಚೇತು ಮತ್ತು ಕೀರ್ತನಾ ಎಂಬುವರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ಬೆನ್ನಲ್ಲೇ, ನಗರ ಪೊಲೀಸ್ ಠಾಣೆ ಅಧಿಕಾರಿಗಳು ಗಂಗಮ್ಮ ದೇವಾಲಯದ ಅರ್ಚಕ ಸುರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಜತೆಗೆ ಪ್ರಸಾದ ವಿತರಿಸಿದ ಮಹಿಳೆಯ ಪತ್ತೆಗಾಗಿ ದೇವಾಲಯದ ಸಮೀಪದ ಮಳಿಗೆಯೊಂದರ ಮುಂದೆ ಹಾಕಿದ್ದ ಸಿ.ಸಿ ಟಿವಿ ಕ್ಯಾಮೆರಾ ದತ್ತಾಂಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮತ್ತು ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಶನಿವಾರ ಮಧ್ಯಾಹ್ನ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಡೆಕ್ಕನ್ ಆಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಕುಟುಂಬದವರಿಂದ ಮಾಹಿತಿ ಪಡೆದರು.
‘ಅಸ್ವಸ್ಥರಾದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ದೇವಾಲಯದ ಬಳಿ ಪ್ರಸಾದ ವಿತರಣೆ ಮಾಡಿದ ಮಹಿಳೆ ಪತ್ತೆ ಮಾಡುವ ಕಾರ್ಯ ಆರಂಭಿಸಿದ್ದೇವೆ. ಘಟನೆಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ಹೇಳಲು ಸಾಧ್ಯ’ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದರು.
‘ನಮ್ಮ ಆಹಾರ ಸುರಕ್ಷತಾ ಅಧಿಕಾರಿಗಳು ದೇವಾಲಯದ ಆವರಣದಲ್ಲಿದ್ದ ಕಸದ ತೊಟ್ಟಿಯಲ್ಲಿ ಸಿಕ್ಕ ಪ್ರಸಾದವನ್ನು ಸಂಗ್ರಹಿಸಿದ್ದಾರೆ. ಜತೆಗೆ ವೈದ್ಯರು ಅಸ್ವಸ್ಥರ ಮಲ ಮತ್ತು ವಾಂತಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚಿಂತಾಮಣಿ ಆಸ್ಪತ್ರೆಯಲ್ಲಿ ಹೆಚ್ಚುವರಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮನ ದೇವಾಲಯದಲ್ಲಿ ಪ್ರಸಾದದಿಂದಲೇ ನಡೆದ ದುರಂತ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.