ಬೆಂಗಳೂರು: ವಿಧಾನಸಭೆಯ ಕಲಾಪದ ವೇಳೆ ಮಸೂದೆಗಳ ಪ್ರತಿಗಳನ್ನು ಹರಿದು ಉಪ ಸಭಾಧ್ಯಕ್ಷರ ಮೇಲೆ ಎಸೆದು ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ ಹತ್ತು ಸದಸ್ಯರನ್ನು ಪ್ರಸ್ತುತ ಅಧಿವೇಶನದ ಅವಧಿಗೆ ಅಮಾನತು ಮಾಡಿ ಸ್ಪೀಕರ್ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ.
ಮಧ್ಯಾಹ್ನ ವಿರಾಮದ ಬಳಿಕ ಕಲಾಪ ಆರಂಭವಾದ ಬಳಿಕ ಬಿಜೆಪಿ ಸದಸ್ಯರ ವರ್ತನೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಶಿಸ್ತುಕ್ರಮದ ತೀರ್ಮಾನ ಪ್ರಕಟಿಸಿದರು.
‘ಡಾ.ಸಿ.ಎನ್. ಅಶ್ವತ್ಥ ನಾರಾಯಣ, ವಿ. ಸುನಿಲ್ ಕುಮಾರ್, ಆರ್. ಅಶೋಕ, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜು, ಉಮಾನಾಥ ಕೋಟ್ಯಾನ್, ಅರವಿಂದ ಬೆಲ್ಲದ, ಆರಗ ಜ್ಞಾನೇಂದ್ರ ಮತ್ತು ಭರತ್ ವೈ. ಶೆಟ್ಟಿ ಅವರು ಸದನದಲ್ಲಿ ಅಗೌರವದಿಂದ, ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಸ್ಪೀಕರ್ ಹೆಸರಿಸಿದರು.
‘ಅಗೌರವ ತೋರಿದ ಎಲ್ಲ ಹತ್ತು ಸದಸ್ಯರನ್ನು ಈ ಅಧಿವೇಶನದ ಅವಧಿಗೆ ಸದನದಿಂದ ಅಮಾನತುಗೊಳಿಸಿ, ಹೊರ ಹಾಕಬೇಕು’ ಎಂಬ ನಿರ್ಣಯವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಮಂಡಿಸಿದರು.
‘ಈ ಪ್ರಸ್ತಾವವನ್ನು ಅತ್ಯಂತ ನೋವಿನಿಂದ ಮತಕ್ಕೆ ಹಾಕುತ್ತಿದ್ದೇನೆ’ ಎಂದು ಸಭಾಧ್ಯಕ್ಷರು ಹೇಳಿದರು. ಧ್ವನಿಮತದ ಮೂಲಕ ಪ್ರಸ್ತಾವವನ್ನು ಅಂಗೀಕರಿಸಲಾಯಿತು. ನಂತರ ಹತ್ತು ಸದಸ್ಯರು ತಕ್ಷಣ ಸದನದಿಂದ ಹೊರಹೋಗಬೇಕು ಎಂದು ಆದೇಶಿಸಿದರು.
ಬಳಿಕವೂ ಸದನದಲ್ಲೇ ಉಳಿದಿದ್ದ ಅಮಾನತುಗೊಂಡ ಸದಸ್ಯರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೋಗಿ ಹೊರ ಹಾಕಿದರು.
ತಮ್ಮ ಪಕ್ಷದ ಸದಸ್ಯರ ಅಮಾನತು ಆದೇಶವನ್ನು ಖಂಡಿಸಿ ಬಿಜೆಪಿಯ ಉಳಿದ ಸದಸ್ಯರು ಸದನದ ಒಳಗೆ ಹಾಗೂ ಸ್ಪೀಕರ್ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.